ಇಂಗ್ಲೆಂಡ್​ ವಿರುದ್ಧ ಗಿಲ್​, 'ಯಶಸ್ವಿ' ಶತಕದಾಟ! ನಾಯಕ, ಉಪನಾಯಕನಿಗೆ ಡ್ರೆಸ್ಸಿಂಗ್​ ರೂಮ್​ನಲ್ಲಿ ಸ್ವಾಗತ, ವಿಡಿಯೋ ವೈರಲ್​ | IND vs ENG

ವಿಜಯವಾಣಿ (76)
Published on

IND vs ENG Test: ಪ್ರಸಕ್ತ ಇಂಗ್ಲೆಂಡ್ ಮತ್ತು ಭಾರತ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯ ಶುಕ್ರವಾರ (ಜೂ.20) ಲೀಡ್ಸ್‌ನ ಹೆಡಿಂಗ್ಲಿನಲ್ಲಿ ಆರಂಭಗೊಂಡಿದ್ದು, ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆಯಿತು. ತಂಡದ ಪರ ನಾಯಕ ಶುಭಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಶತಕದಾಟ ಪ್ರದರ್ಶಿಸಿದರೆ, ಉಪನಾಯಕ ರಿಷಭ್ ಪಂತ್​ ಆಕರ್ಷಕ ಅರ್ಧ ಶತಕ ದಾಖಲಿಸಿದರು. ಇದು ಟೀಮ್ ಇಂಡಿಯಾ ಸಹ ಆಟಗಾರರು ಸೇರಿದಂತೆ ಕ್ರಿಕೆಟ್​ ಪ್ರೇಮಿಗಳ ಸಂತಸಕ್ಕೆ ಕಾರಣವಾಯಿತು.

ಮೊದಲ ದಿನವೇ ಅದ್ಭುತ ಪ್ರದರ್ಶನ ತೋರಿದ ಭಾರತ ತಂಡ, ಇಂಗ್ಲೆಂಡ್ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಮೊದಲ ಟೆಸ್ಟ್​ನ ಮೂರನೇ ಸೆಷನ್​ನಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ 359 ರನ್‌ಗಳೊಂದಿಗೆ ಭಾರತ ಮುಂಚೂಣಿಯಲ್ಲಿದೆ. ಆದಾಗ್ಯೂ, ಪಂದ್ಯದ ಬಳಿಕ ನಗುಮುಖದಲ್ಲಿ ಡ್ರೆಸ್ಸಿಂಗ್ ರೂಮ್​ನತ್ತ ಸಾಗಿದ ಶುಭಮನ್ ಗಿಲ್ ಮತ್ತು ರಿಷಭ್ ಪಂತ್​ಗೆ ತಂಡದ ಸಹ ಆಟಗಾರರು ಮತ್ತು ಹೆಡ್​ ಕೋಚ್​ ಅವರಿಂದ ಭವ್ಯ ಸ್ವಾಗತ ಸಿಕ್ಕಿತು. ಹೆಡ್​ ಕೋಚ್ ಗೌತಮ್ ಗಂಭೀರ್ ಇಬ್ಬರ ಪ್ರದರ್ಶನಕ್ಕೆ ಮನಸೋತು, ಪ್ರೀತಿಯಿಂದ ಅಪ್ಪಿಕೊಂಡು ಅಭಿನಂದಿಸಿದರು. ಈ ದೃಶ್ಯ ಜಾಲತಾಣದಲ್ಲಿ ಹರಿದಾಡಿದ್ದು, ಬಿಸಿಸಿಐ ತನ್ನ ಅಧಿಕೃತ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದೆ.

ಇಂಗ್ಲಿಷ್ ಬೌಲರ್​ಗಳ ಬೆವರಿಳಿಸಿದ ಕ್ಯಾಪ್ಟನ್​ ಶುಭಮನ್ ಗಿಲ್ (ಅಜೇಯ 127), ಆರಂಭಿಕರಾದ ಯಶಸ್ವಿ ಜೈಸ್ವಾಲ್ (159 ಎಸೆತಗಳಲ್ಲಿ 101 ರನ್), ಕೆ.ಎಲ್. ರಾಹುಲ್ (78 ಎಸೆತಗಳಲ್ಲಿ 42 ರನ್), ಮತ್ತು ಉಪನಾಯಕ ರಿಷಭ್ ಪಂತ್ (65 ರನ್​ ಅಜೇಯ) ಉತ್ತಮ ಪ್ರದರ್ಶನ ನೀಡಿ, ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಆದಾಗ್ಯೂ, ಸಾಯಿ ಸುದರ್ಶನ್ ಒಂದೇ ಒಂದು ರನ್​ ಗಳಿಸದೆ, ಡಕ್ ಔಟ್ ಆಗಿ ಪೆವಿಲಿಯನ್‌ ಹಾದಿ ಹಿಡಿದದ್ದು ಹಲವರ ಬೇಸರಕ್ಕೆ ಕಾರಣವಾಯಿತು. ಕೊನೆಯ ದಿನದಾಟದ ಅಂತ್ಯದಲ್ಲಿ ಶುಭಮನ್ ಗಿಲ್ ಮತ್ತು ರಿಷಭ್ ಪಂತ್ ಕ್ರೀಸ್‌ನಲ್ಲಿದ್ದರು. ಗಿಲ್​-ಪಂತ್ ಜೋಡಿ ನಾಲ್ಕನೇ ವಿಕೆಟ್‌ಗೆ 138 ರನ್‌ಗಳ ಜೊತೆಯಾಟ ನೀಡಿತು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net