ಇಂದು ಭಾರತ-ಆಫ್ರಿಕಾ 2ನೇ ಟಿ20: ಆತಿಥೇಯರಿಗೆ ಪುಟಿದೇಳುವ ತವಕ

New Project (1)
Published on

ಗೆಬರ್ಹ: ಸರ್ವಾಂಗೀಣ ನಿರ್ವಹಣೆ ತೋರಿ ಏಕಪಕ್ಷೀಯ ಗೆಲುವಿನೊಂದಿಗೆ ಶುಭಾರಂಭ ಕಂಡಿರುವ ಪ್ರವಾಸಿ ಭಾರತ ತಂಡ, ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯಕ್ಕೆ ಸಜ್ಜಾಗಿದೆ. ಭಾನುವಾರ ಸೇಂಟ್ ಜಾರ್ಜ್ ಓವಲ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಸರಣಿಯಲ್ಲಿ ಮುನ್ನಡೆಯನ್ನು ವಿಸ್ತರಿಸುವ ಹಂಬಲ ಸೂರ್ಯಕುಮಾರ್ ಬಳಗದ್ದಾಗಿದೆ. ಇನ್ನು ಆತಿಥೇಯ ಹರಿಣಗಳ ಪಡೆ ಪುಟಿದೇಳುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸುವ ತವಕದಲ್ಲಿದೆ.

ಯುವ ಭಾರತ ತಂಡ ತವರಿನ ಟಿ20 ಸರಣಿ ಜಯದ ಆತ್ಮವಿಶ್ವಾಸವನ್ನು ಆಫ್ರಿಕಾ ಪ್ರವಾಸದಲ್ಲೂ ಮುಂದುವರಿಸಿದೆ. 2026ರ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಕಾಯಂಗೊಳಿಸಲು ಯುವ ಆಟಗಾರರಿಗೆ ಈ ಸರಣಿ ಆರಂಭಿಕ ವೇದಿಕೆ ಎನಿಸಿದೆ. ಇನ್ನು ಐಪಿಎಲ್ ಮೆಗಾ ಹರಾಜಿಗೆ ಮುನ್ನ ್ರಾಂಚೈಸಿಗಳ ಗಮನ ಸೆಳೆಯಲು ಕೂಡ ಇದು ನೆರವಾಗಲಿದೆ. ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಆಟಗಾರರು ಸಾಮರ್ಥ್ಯ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ಸಂಜು ಸ್ಯಾಮನ್ಸ್ ಭರ್ಜರಿ ಾರ್ಮ್‌ನಲ್ಲಿದ್ದು ಆರಂಭಿಕನ ಸ್ಥಾನ ಕಾಯಂಗೊಳಿಸಿಕೊಂಡಿದ್ದಾರೆ. ಆದರೆ ಎಡಗೈ ಬ್ಯಾಟರ್ ಅಭಿಷೇಕ್ ಶರ್ಮ ಅಸ್ಥಿರ ಪ್ರದರ್ಶನ ತಂಡಕ್ಕೆ ಪ್ರಮುಖ ಹಿನ್ನಡೆ ಎನಿಸಿದೆ. ಜಿಂಬಾಬ್ವೆ ವಿರುದ್ಧದ ಸರಣಿಯಿಂದಲೂ ಸಿಕ್ಕ ಅವಕಾಶಗಳನ್ನು ಕೈಚೆಲ್ಲುತ್ತಿರುವ ಅಭಿಷೇಕ್ ಲಯಕ್ಕೆ ಮರಳಬೇಕಿದೆ. ಸೂರ್ಯ ಕುಮಾರ್ ನಾಯಕನಾಗಿ ಸತತ 8ನೇ ಪಂದ್ಯದಲ್ಲಿ ಗೆದ್ದು ಬೀಗಿದ್ದಾರೆ. ಹಾಲಿ ವರ್ಷಾರಂಭದಲ್ಲಿ ಅ್ಘಾನಿಸ್ತಾನ ವಿರುದ್ಧ ಸರಣಿ ಬಳಿಕ ಭಾರತ ತಂಡದಿಂದ ಹೊರಗುಳಿದಿದ್ದ ತಿಲಕ್ ವರ್ಮ ಉಪಯುಕ್ತ ಕೊಡುಗೆಯೊಂದಿಗೆ ಗಮನ ಸೆಳೆದರು.

ಸೂರ್ಯಕುಮಾರ್ ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಂದ ಮೊದಲ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಗೆಲುವಿನ ನಡುವೆಯೂ 36 ರನ್‌ಗಳ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಕುಸಿತ ಎಚ್ಚರಿಕೆ ಗಂಟೆ ಎನಿಸಿದೆ. ಮಧ್ಯಮ ಕ್ರಮಾಂಕಕ್ಕೆ ಆಫ್ರಿಕಾ ಬೌಲರ್‌ಗಳಿಂದ ನೈಜ ಸವಾಲು ಎದುರಾಗುತ್ತಿದೆ. ಅನುಭವಿ ಬೌಲರ್‌ಗಳ ಗೈರಿನಲ್ಲಿ ಆಫ್ರಿಕಾ ತಂಡ ತವರಿನಲ್ಲಿ 61 ರನ್‌ಗಳಿಂದ ಮುಗ್ಗರಿಸಿರುವುದು ಆರಂಭಿಕ ಹಿನ್ನಡೆ ಎನಿಸಿದೆ.

ಕಗಿಸೋ ರಬಾಡ ಅವರಂಥ ಪ್ರಮುಖ ಆಟಗಾರರ ಅಲಭ್ಯತೆ ಆಫ್ರಿಕನ್ನರಿಗೆ ದೊಡ್ಡ ಹಿನ್ನಡೆ ಉಂಟು ಮಾಡಿದೆ. ಮಾರ್ಕ್ರಮ್ ಭಾರತ ವಿರುದ್ಧ ಉತ್ತಮ ದಾಖಲೆಯೂ ಹೊಂದಿಲ್ಲ. ಜತೆಗೆ ಹೆನ್ರಿಕ್ ಕ್ಲಾಸೆನ್ ಹಾಗೂ ಡೇವಿಡ್ ಮಿಲ್ಲರ್ ಮೇಲೆ ಬ್ಯಾಟಿಂಗ್ ವಿಭಾಗ ಅವಲಂಬಿತವಾಗಿದೆ.

ಗಮನ ಸೆಳೆದ ಬೌಲಿಂಗ್ ವಿಭಾಗ

ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಯುವ ಬೌಲರ್‌ಗಳ ಪ್ರದರ್ಶನ ಹೆಚ್ಚಿನ ನಿರೀಕ್ಷೆ ಮೂಡಿಸಿದೆ. ಸಾಮಾನ್ಯವಾಗಿ ವೇಗಿಗಳಿಗೆ ಹೆಚ್ಚುವರಿ ಬೌನ್ಸ್ ಒದಗಿಸುವ ದ.ಆಫ್ರಿಕಾ ಪಿಚ್‌ನಲ್ಲಿ ಸ್ಪಿನ್ನರ್‌ಗಳಾದ ವರುಣ್ ಚಕ್ರವರ್ತಿ, ರವಿ ಬಿಷ್ಣೋಯಿ ಮ್ಯಾಜಿಕೆ ಮಾಡಿದ್ದಾರೆ. ಅರ್ಷದೀಪ್ ಸಿಂಗ್ ನೇತೃತ್ವದಲ್ಲಿ ಅನನುಭವಿ ಬೌಲಿಂಗ್ ವಿಭಾಗಕ್ಕೆ ಸರಣಿ ಸತ್ವಪರೀಕ್ಷೆ ಎನಿಸಿದೆ. ಜತೆಗೆ ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಏಡೆನ್ ಮಾರ್ಕ್ರಮ್, ಟ್ರಿಸ್ಟಾನ್ ಸ್ಟಬ್ಸ್ ಬಗ್ಗೆಯೂ ಭಾರತ ಎಚ್ಚರಿಕೆ ವಹಿಸಬೇಕಾಗಿದೆ.

ಟೀಮ್ ನ್ಯೂಸ್

ಭಾರತ: ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ನಿರ್ವಹಣೆ ತೋರಿರುವುದರಿಂದ ಗೆಲುವಿನ ಕಾಂಬಿನೇಷನ್ ಬದಲಾವಣೆ ಸಾಧ್ಯತೆ ಕಡಿಮೆ. ಹೆಚ್ಚುವರಿ ಬೌಲರ್ ಅಗತ್ಯ ಬಿದ್ದರೆ ಮಾತ್ರ ಮೂರನೇ ವೇಗಿಯಾಗಿ ವೈಶಾಕ್ ವಿಜಯ್ ಕುಮಾರ್/ಯಶ್ ದಯಾಳ್ ಪದಾರ್ಪಣೆ ಅವಕಾಶ ಪಡೆಯಲಿದ್ದಾರೆ.

ದಕ್ಷಿಣ ಆಫ್ರಿಕಾ: ಗಾಯದ ಸಮಸ್ಯೆಯಿಂದ ಮೊದಲ ಪಂದ್ಯದಿಂದ ಹೊರಗುಳಿದಿದ್ದ ರೀಜಾ ಹೆಂಡ್ರಿಕ್ಸ್ ಮರಳುವ ನಿರೀಕ್ಷೆ ಇದೆ. ಸ್ಪಿನ್ನರ್ ಎನ್‌ಕಬಯೋಮ್ಜಿ ಪೀಟರ್ ಹೊರಗುಳಿಯುವ ಸಾಧ್ಯತೆಗಳಿವೆ.

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೋ ಸಿನಿಮಾ

ಪಿಚ್ ರಿಪೋರ್ಟ್

ಇದುವರೆಗೆ 4 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಗೆ ಸೇಂಟ್ ಜಾರ್ಜ್ ಕ್ರೀಡಾಂಗಣ ಆತಿಥ್ಯ ವಹಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ತಂಡ, ಚೇಸಿಂಗ್ ಮಾಡಿದ ತಂಡಗಳು ತಲಾ ಎರಡು ಬಾರಿ ಗೆಲುವು ಸಾಧಿಸಿವೆ. ಇಲ್ಲಿನ ಪಿಚ್ ಆರಂಭದಲ್ಲಿ ಬ್ಯಾಟರ್‌ಗಳಿಗೆ ನೆರವು ನೀಡಲಿದ್ದು, ಪಂದ್ಯ ಸಾಗಿದಂತೆ ಸ್ಪಿನ್ನರ್‌ಗಳಿಗೆ ನೆರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net