ರಾಜ್ಯದಲ್ಲಿ ಚೆಸ್ ಆನ್​ಲೈನ್ ಕೋಚಿಂಗ್​ಗೆ ಹೆಚ್ಚಿದ ಬೇಡಿಕೆ!

chess 31 mar 20
Published on

ಬೆಂಗಳೂರು: ಕಳೆದ ಎರಡು ವಾರಗಳಿಂದ ಜಾಗತಿಕ ಕ್ರೀಡಾಲೋಕದಲ್ಲೇ ನೀರವ ಮೌನ ಆವರಿಸಿದೆ. ಪ್ರತಿಷ್ಠಿತ ಒಲಿಂಪಿಕ್ಸ್, ಯುರೋಕಪ್, ಐಪಿಎಲ್ ಸೇರಿದಂತೆ ಬಹುತೇಕ ಕ್ರೀಡಾಕೂಟಗಳು ಮುಂದೂಡಲ್ಪಟ್ಟಿವೆ. ಇಡೀ ದೇಶವೇ ಲಾಕ್​ಡೌನ್​ಗೆ ಒಳಗಾಗಿರುವ ಕಾರಣ ಬೇಸಿಗೆ ಶಿಬಿರಗಳು ಬಂದ್ ಆಗಿವೆ. ಇದು ಕ್ರೀಡಾಲೋಕಕ್ಕೆ ಎಷ್ಟು ಹಿನ್ನಡೆಯೋ ಅಷ್ಟೇ ಕ್ರೀಡಾಪಟುಗಳಿಗೂ ತುಂಬಲಾರದ ನಷ್ಟ. ಆದರೆ ಚದುರಂಗದಾಟ ಅರ್ಥಾತ್ ಚೆಸ್, ಲಾಕ್​ಡೌನ್ ಮಧ್ಯೆಯೂ ಹೆಚ್ಚು ಜನರನ್ನು ಆಕರ್ಷಿಸಲು ಯಶಸ್ವಿಯಾಗಿದೆ. ಇದಕ್ಕೆ ಕಾರಣವಾಗಿರುವುದು ಆನ್​ಲೈನ್ ಮೂಲಕ ನಡೆಯುತ್ತಿರುವ ತರಬೇತಿ ಶಿಬಿರ. ಲಾಕ್​ಡೌನ್ ನಡುವೆ ಇತರ ಕ್ರೀಡಾಪಟುಗಳು ಮನೆಯಲ್ಲೇ ಕುಳಿತು ಫಿಟ್ನೆಸ್ ಟ್ರೈನರ್ ನೀಡುವ ಟಿಪ್ಸ್​ಗಳಿಂದ ವರ್ಕ್​ಔಟ್ ಮಾಡಿದರೆ, ಚೆಸ್​ನಲ್ಲಿ ಆನ್​ಲೈನ್ ಮೂಲಕವೇ ತರಬೇತಿ ನೀಡಲಾಗುತ್ತಿದೆ.

ಇತರ ಕ್ರೀಡೆಗಳು ಸ್ತಬ್ಧಗೊಂಡಿರುವ ಹಿನ್ನೆಲೆಯಲ್ಲಿ ಬಹುತೇಕ ಪಾಲಕರು ತಮ್ಮ ಮಕ್ಕಳನ್ನು ಆನ್​ಲೈನ್ ಮೂಲಕವೇ ಚೆಸ್ ತರಬೇತಿ ಶಿಬಿರಕ್ಕೆ ಸೇರಿಸಿದ್ದಾರೆ.

ಮನೆಯಲ್ಲೇ ಕುಳಿತು ಆಪ್ ಮೂಲಕ ತರಬೇತಿ ಪಡೆಯುವುದರಿಂದ ಮಕ್ಕಳಿಗೆ ಅನುಕೂಲ, ಲಾಕ್​ಡೌನ್​ನಿಂದ ಸಮಯವೂ ವ್ಯರ್ಥವಾಗುತ್ತಿಲ್ಲ.

ರಾಜ್ಯದೆಲ್ಲೆಡೆ ಆನ್​ಲೈನ್ ಹವಾ: ಬೆಂಗಳೂರು, ಮಂಡ್ಯ ಸೇರಿದಂತೆ ರಾಜ್ಯದಾದ್ಯಂತ ಸ್ಥಳೀಯ ತರಬೇತುದಾರರು ಆನ್​ಲೈನ್ ಮೂಲಕವೇ ಕೋಚಿಂಗ್ ನೀಡುತ್ತಿದ್ದಾರೆ. ಆಧುನಿಕ ತಂತ್ರಜ್ಞಾನ ಸದುಪಯೋಗಪಡಿಸಿಕೊಂಡು ವಿವಿಧ ವೆಬ್​ಸೈಟ್, ಆಪ್​ಗಳ ಮೂಲಕವೇ ತರಬೇತಿ ನೀಡಲಾಗುತ್ತಿದೆ. ಲಿ ಚೆಸ್

ವೆಬ್​ಸೈಟ್, ಜೂಮ್ ಮೂಲಕ ಏಕಕಾಲದಲ್ಲಿ ಹಲವು ವಿದ್ಯಾರ್ಥಿಗಳಿಗೆ ತರಬೇತಿ ನೀಡಬಹುದು. ಚೆಸ್ ತರಬೇತಿ ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳು ಅಕಾಡೆಮಿಗಳಲ್ಲಿ ನೋಂದಣಿ ಮಾಡಿಕೊಂಡರೆ, ತರಬೇತುದಾರರು ಕಳುಹಿಸುವ ಲಿಂಕ್ ಮೂಲಕ ಕಂಪ್ಯೂಟರ್, ಲ್ಯಾಪ್​ಟಾಪ್, ಮೊಬೈಲ್ ಅಥವಾ ಟ್ಯಾಬ್ ಇದ್ದರೆ ಕುಳಿತಲ್ಲೇ ತರಬೇತಿ ಪಡೆಯಬಹುದು. ಜತೆಗೆ ಚೆಸ್ ಕಲಿಯುವವರಿಗೆ ವಿವಿಧ ಆಪ್​ಗಳಿವೆ.

ಪ್ರತಿದಿನ ಮಕ್ಕಳನ್ನು 6 ಗಂಟೆಗಳ ಕಾಲ ಹಿಡಿದಿಡಬಹುದು. ಲಿ ಚೆಸ್ ವೆಬ್​ಸೈಟ್ ಮೂಲಕ ಉಚಿತವಾಗಿ ನೋಂದಣಿ ಮಾಡಿಕೊಂಡು ತರಬೇತಿ ನೀಡುತ್ತಿದ್ದೇವೆ. ನಾವೇ ಸ್ವತಃ ಲಿಂಕ್ ರಚಿಸಿ, ತರಬೇತಿ ಪಡೆಯುವ ಮಕ್ಕಳಿಗೆ ಕಳುಹಿಸುತ್ತೇವೆ. ಕಂಪ್ಯೂಟರ್, ಮೊಬೈಲ್, ಟ್ಯಾಬ್​ನಲ್ಲಿ ಲಿಂಕ್ ಮೂಲಕ ಗೇಮ್ ಓಪನ್ ಮಾಡಿಕೊಂಡು ಚೆಸ್ ಆಡಿಸಲಾಗುತ್ತದೆ. ಒಂದೂವರೆ ಗಂಟೆಯಲ್ಲಿ 10 ರಿಂದ 12 ಗೇಮ್ ಆಡಿಸಬಹುದು. | ಮಂಜುನಾಥ್ ಜೈನ್ ಮುಖ್ಯ ಕೋಚ್, ಮಂಡ್ಯ ಚೆಸ್ ಅಕಾಡೆಮಿ ಕಳೆದ 3 ವಾರಗಳಿಂದ ಆನ್​ಲೈನ್ ತರಬೇತಿಗೆ ಸಾಕಷ್ಟು ಬೇಡಿಕೆ ಕಂಡುಬರುತ್ತಿದೆ. ಸಾಮಾನ್ಯವಾಗಿ 8-9 ಮಕ್ಕಳು ಏಕಕಾಲದಲ್ಲಿ ತರಬೇತಿ ಪಡೆದುಕೊಂಡರೆ, ಜೂಮ್ ಆಪ್ ಮೂಲಕ 100ಕ್ಕೂ ಹೆಚ್ಚು ಮಕ್ಕಳಿಗೆ ತರಬೇತಿ ನೀಡಬಹುದು. | ಶುಶ್ರೂತಾ ರೆಡ್ಡಿ ಇನ್ನೊವೇಟರ್ಸ್ ಚೆಸ್ ಅಕಾಡೆಮಿ ಈಗ ಲಾಕ್​ಡೌನ್ ಇರುವುದರಿಂದ ಆನ್​ಲೈನ್ ಮೂಲಕವೇ ಚೆಸ್ ತರಬೇತಿ ಪಡೆಯುತ್ತಿದ್ದೇವೆ, ಜತೆಗೆ ಟೂರ್ನಿಗಳಲ್ಲಿ ಆಡುತ್ತಿದ್ದೇವೆ. ಖಾಲಿ ಇರುವುದಕ್ಕಿಂತ ಆನ್​ಲೈನ್ ನಮಗೆ ತುಂಬ ಸಹಕಾರಿಯಾಗಿದೆ. ಆಟಗಾರರ ಹಾಗೂ ತರಬೇತುದಾರರ ನಡುವೆ ಆನ್​ಲೈನ್ ಸಂಪರ್ಕದ ಕೊಂಡಿಯಾಗಿದೆ. | ತನವ್ ಸುದರ್ಶನ್ ಚೆಸ್ ಆಟಗಾರ

ರಘುನಾಥ್ ಡಿ.ಪಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net