

ಬೆಂಗಳೂರು: ಸಬ್ ಜೂನಿಯರ್ ಸುಬ್ರತೊ ಕಪ್ ಅಂತಾರಾಷ್ಟ್ರೀಯ ಫುಟ್‌ಬಾಲ್ ಟೂರ್ನಿಯ 64ನೇ ಆವೃತ್ತಿಯಲ್ಲಿ ಮೊಹಾಲಿಯ ಮಿನರ್ವಾ ಪಬ್ಲಿಕ್ ಸ್ಕೂಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಮಿನರ್ವಾ ಪಬ್ಲಿಕ್ ಸ್ಕೂಲ್ 6-0 ಗೋಲುಗಳ ಅಂತರದಿಂದ ಬಿಹಾರದ ವಿದ್ಯಾಚಲ್ ಇಂಟರ್ ನ್ಯಾಷನಲ್ ಸ್ಕೂಲ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತು.
ಮಿನರ್ವಾ ಪರ ಮಹೇಶ್ (4, 50+1ನೇ ನಿಮಿಷ) ಲೆಟ್ಗೌಹಾವ್ ಕಿಪ್ಜನ್ (19, 35) ಅವಳಿ ಗೋಲು ಸಿಡಿಸಿದರೆ, ಬಿಕ್ಸನ್ (37) ಹಾಗೂ ರಿಮೋಸನ್ (42) ತಲಾ ಒಂದು ಗೋಲು ಸಿಡಿಸಿದರು. ಟೂರ್ನಿಯ ವಿಜೇತ ಮಿನರ್ವಾ ಪಬ್ಲಿಕ್ ಸ್ಕೂಲ್ ತಂಡ ₹4 ಲಕ್ಷ ಹಾಗೂ ರನ್ನರ್‌ಅಪ್ ವಿದ್ಯಾಚಲ್ ತಂಡ ₹2 ಲಕ್ಷ ಬಹುಮಾನ ಮೊತ್ತ ತನ್ನದಾಗಿಸಿಕೊಂಡಿತು.
ವೈಯಕ್ತಿಕ ಪ್ರಶಸ್ತಿ ವಿಜೇತರು: ಉತ್ತಮ ಆಟಗಾರ: ಲೆಟ್ಗೌಹಾವ್ ಕಿಪ್ಜನ್, ಉತ್ತಮ ಕೋಚ್: ಕರಣ್ ಕುಮಾರ್ (ಬಿಹಾರ), ಉತ್ತಮ ಗೋಲು ಕೀಪರ್: ಗುರ್ಜಿತ್ ವೀರ, ಫೇರ್ ಪ್ಲೇ ಆವಾರ್ಡ್: ನವೋದಯ ವಿದ್ಯಾಲಯ ಸಮಿತಿ, ಉತ್ತಮ ಶಾಲೆ: ವಿದ್ಯಾಚಲ್ ಇಂಟರ್‌ನ್ಯಾಷನಲ್ ಸ್ಕೂಲ್
ಟೂರ್ನಿಯ ವಿಜೇತ ತಂಡಕ್ಕೆ ಮುಖ್ಯ ಅತಿಥಿ ಏರ್ ಮಾರ್ಷಲ್ ತೇಜಿಂದರ್ ಸಿಂಗ್ ಹಾಗೂ ಭಾರತ ಹಾಕಿ ತಂಡದ ಮಾಜಿ ಗೋಲು ಕೀಪರ್ ಪಿಆರ್ ಶ್ರೀಜೇಶ್ ಟ್ರೋಫಿ ಹಸ್ತಾಂತರಿಸಿದರು.