

IND vs ENG: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಟೆಸ್ಟ್ ಪಂದ್ಯಗಳ ಸರಣಿಯಾದ ತೆಂಡೂಲ್ಕರ್-ಆ್ಯಂಡರ್ಸನ್ ಟ್ರೋಫಿ 2025, ಗೆಲುವು-ಸೋಲಿಗಿಂತ ದಾಖಲೆಗಳನ್ನು ಮುರಿಯುವ ಸರಣಿಯಾಗಿದೆ. ಇದು ನಿಜಕ್ಕೂ ಐತಿಹಾಸಿಕ. ಕೇವಲ ಇದೊಂದು ಸರಣಿಯಲ್ಲಿ, ಹಲವು ವರ್ಷಗಳ ಹಿಂದಿನ ದಾಖಲೆಗಳನ್ನು ಬ್ರೇಕ್ ಮಾಡಿ, ಹೊಸದಾಗಿ ನಿರ್ಮಿಸಲಾಗಿದೆ. ಕೆಲವು ವಿಭಾಗಗಳಲ್ಲಿ ನೂತನ ದಾಖಲೆಗಳು ಸೃಷ್ಟಿಯಾಗಿವೆ.
ಐದನೇ ಪಂದ್ಯದ ನಾಲ್ಕನೇ ದಿನದಂದು ಹೊಸ ಇತಿಹಾಸ ಸೃಷ್ಟಿಯಾಯಿತು. ಅದೇನೆಂದರೆ, ಈ ಸರಣಿಯಲ್ಲಿ, 9 ಬ್ಯಾಟ್ಸ್‌ಮನ್‌ಗಳು 400ಕ್ಕೂ ಅಧಿಕ ರನ್ ಗಳಿಸಿದ್ದಾರೆ. 148 ವರ್ಷಗಳ ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ, ಬೇರೆ ಯಾವುದೇ ಸರಣಿಯು ಈ ಮಟ್ಟಿಗಿನ 400ಕ್ಕೂ ಹೆಚ್ಚು ರನ್ ಗಳಿಸಿದ ಆಟಗಾರರನ್ನು ನೋಡಿಲ್ಲ ಎಂಬುದು ಗಮನಾರ್ಹ. ಟೀಮ್ ಇಂಡಿಯಾ ಪರ ನಾಯಕ ಶುಭಮನ್ ಗಿಲ್ ಈ ಸರಣಿಯಲ್ಲಿ 754 ರನ್ ಗಳಿಸುವ ಮೂಲಕ ಅತಿ ಹೆಚ್ಚು ರನ್ ದಾಖಲಿಸಿದ ಆಟಗಾರ ಎಂಬ ಪಟ್ಟಿಗೆ ಸೇರಿದ್ದಾರೆ. ಇನ್ನು ಗಿಲ್ ಬಳಿಕ, ಜೋ ರೂಟ್ (537), ಕೆ.ಎಲ್. ರಾಹುಲ್ (532), ರವೀಂದ್ರ ಜಡೇಜಾ (516), ಹ್ಯಾರಿ ಬ್ರೂಕ್ (481), ರಿಷಭ್ ಪಂತ್ (479), ಬೆನ್ ಡಕೆಟ್ (462), ಜೇಮಿ ಸ್ಮಿತ್ (434) ಮತ್ತು ಯಶಸ್ವಿ ಜೈಸ್ವಾಲ್ (411) 400ಕ್ಕೂ ಮೀರಿದ ರನ್ಗಳನ್ನು ಗಳಿಸಿದ್ದಾರೆ.
1975-76ರಲ್ಲಿ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿಯಲ್ಲಿ, ಎರಡೂ ತಂಡಗಳ ಒಟ್ಟು 8 ಬ್ಯಾಟ್ಸ್‌ಮನ್‌ಗಳು 400ಕ್ಕೂ ಅಧಿಕ ರನ್ ಗಳಿಸಿದರು. ಅದಾದ ಬಳಿಕ, 1993ರ ಆ್ಯಶಸ್ ಸರಣಿಯಲ್ಲಿ ಅದೇ ದಾಖಲೆ ಮರುಕಳಿಸಿತು. ಆದಾಗ್ಯೂ, 2025ರ ಇಂಗ್ಲೆಂಡ್ ಮತ್ತು ಭಾರತ ನಡುವಿನ ಟೆಸ್ಟ್ ಸರಣಿಯಲ್ಲಿ ಒಟ್ಟು 9 ಬ್ಯಾಟ್ಸ್‌ಮನ್‌ಗಳು 400ಕ್ಕೂ ಹೆಚ್ಚು ರನ್ ಗಳಿಸಿದ್ದು ಇದೇ ಮೊದಲು ಎಂಬುದು ಗಮನಾರ್ಹ.
ಈ ಸರಣಿಯಲ್ಲಿ ಮೂವರು ಭಾರತೀಯ ಬ್ಯಾಟರ್ಗಳು (ಗಿಲ್, ರಾಹುಲ್, ಜಡೇಜಾ) 500ಕ್ಕೂ ಹೆಚ್ಚು ರನ್ ದಾಖಲಿಸಿದ್ದಾರೆ. 93 ವರ್ಷಗಳ ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂತಹ ಸಾಧನೆ ಹಿಂದೆಂದೂ ದಾಖಲಾಗಿಲ್ಲ ಅನ್ನೋದು ವಿಶೇಷ ಮತ್ತು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ಸಂಗತಿ.
ಇನ್ನು ಪಂದ್ಯದ ವಿಷಯಕ್ಕೆ ಬಂದರೆ, ಓವಲ್‌ನಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯವು ಸಖತ್ ರೋಚಕವಾಗಿದೆ. ಪಂದ್ಯದ ಕೊನೆಯ ದಿನದಂದು, ಇಂಗ್ಲೆಂಡ್ಗೆ ಗೆಲ್ಲಲು 35 ರನ್‌ಗಳ ಅಗತ್ಯವಿದ್ದರೆ, ಭಾರತಕ್ಕೆ ನಾಲ್ಕು ವಿಕೆಟ್‌ಗಳ ಅಗತ್ಯವಿದೆ. 374 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 339 ರನ್ ಗಳಿಸಿತು. ಜೇಮೀ ಓವರ್ಟನ್ (0) ಮತ್ತು ಜೇಮೀ ಸ್ಮಿತ್ (2) ಇನ್ನೂ ಕ್ರೀಸ್‌ನಲ್ಲಿದ್ದಾರೆ. ಇಂಗ್ಲೆಂಡ್ ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆಯಲ್ಲಿದೆ. ಇಂಗ್ಲೆಂಡ್ 1ನೇ ಮತ್ತು 3ನೇ ಟೆಸ್ಟ್‌ಗಳನ್ನು ಗೆದ್ದರೆ, ಭಾರತ ಎರಡನೇ ಟೆಸ್ಟ್ ಮಾತ್ರ ಗೆದ್ದಿದೆ. ನಾಲ್ಕನೇ ಟೆಸ್ಟ್ ಡ್ರಾದಲ್ಲಿ ಕೊನೆಗೊಂಡಿತು. ಇದೀಗ ಕೊನೆ ಪಂದ್ಯದಲ್ಲಿ ಸರಣಿಯ ಸಂಪೂರ್ಣ ಚಿತ್ರಣ ತಿಳಿಯಲಿದೆ.
ಭಾರತ- 224 & 396 ರನ್
ಇಂಗ್ಲೆಂಡ್- 247 & 339/6 ರನ್ (76.2)