

ಲಂಡನ್: ಪೋಲೆಂಡ್ ತಾರೆ ಇಗಾ ಸ್ವಿಯಾಟೆಕ್ ವಿಂಬಲ್ಡನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದ ನೂತನ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇದರೊಂದಿಗೆ 2017ರ ಬಳಿಕ ಸತತ 8ನೇ ಬಾರಿ ವಿಂಬಲ್ಡನ್ ಮಹಿಳಾ ಸಿಂಗಲ್ಸ್ನಲ್ಲಿ ಹೊಸ ಆಟಗಾರ್ತಿಗೆ ಪ್ರಶಸ್ತಿ ಒಲಿದಂತಾಗಿದೆ. ಎಂಟನೇ ಶ್ರೇಯಾಂಕಿತೆ ಸ್ವಿಯಾಟೆಕ್ ಇದು 6ನೇ ಹಾಗೂ ಚೊಚ್ಚಲ ವಿಂಬಲ್ಡನ್ ಗ್ರಾಂಡ್ ಸ್ಲಾಂ ಪ್ರಶಸ್ತಿ ಎನಿಸಿದೆ. ಸೆಮಿೈನಲ್ನಲ್ಲಿ ವಿಶ್ವ ನಂ.1 ಆಟಗಾರ್ತಿಗೆ ಸೋಲುಣಿಸಿದ್ದ ಅಮೆರಿಕದ ಅಮಂಡಾ ಅನಿಸಿಮೋವಾ ತನ್ನ ಮೊದಲ ಗ್ರಾಂಡ್ ಸ್ಲಾಂ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟರು.
ಆಲ್ ಇಂಗ್ಲೆಂಡ್ ಕ್ಲಬ್ನ ಸೆಂಟರ್ ಕೋರ್ಟ್ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಎಂಟನೇ ಶ್ರೇಯಾಂಕಿತೆ ಇಗಾ ಸ್ವಿಯಾಟೆಕ್ ಕೇವಲ 57 ನಿಮಿಷಗಳ ಕಾದಾಟದಲ್ಲಿ 6-0, 6-0 ನೇರ ಸೆಟ್ಗಳಿಂದ 13ನೇ ಶ್ರೇಯಾಂಕಿತೆ ಅಮಂಡಾ ಅನಿಸಿಮೋವಾ ಎದುರು ಗೆಲುವು ತನ್ನದಾಗಿಸಿಕೊಂಡಡರು. ಜತೆಗೆ ಗ್ರಾಂಡ್ ಸ್ಲಾಂನಲ್ಲಿ 100ನೇ ಗೆಲುವು ತನ್ನದಾಗಿಸಿಕೊಂಡ ಮಾಜಿ ವಿಶ್ವ ನಂ.1 ಪ್ರಶಸ್ತಿಯನ್ನು ಮತ್ತಷ್ಟು ಸ್ಮರಣೀಯವನ್ನಾಗಿಸಿಕೊಂಡರು. ಎದುರಾಳಿಗೆ ಒಂದೂ ಗೇಮ್ ಬಿಟ್ಟುಕೊಡದ 24 ವರ್ಷದ ಸ್ವಿಯಾಟೆಕ್, 2024ರ ಫ್ರೆಂಚ್ ಓಪನ್ ಬಳಿಕ ಗೆದ್ದ ಮೊದಲ ಪ್ರಶಸ್ತಿ ಇದಾಗಿದೆ. ಮುಕ್ತ ಟೆನಿಸ್ ಯುಗದ ಗ್ರಾಂಡ್ ಸ್ಲಾಂ ಫೈನಲ್ನಲ್ಲಿ ಆಟಗಾರ್ತಿಯೊಬ್ಬರು ಒಂದೂ ಗೇಮ್ ಗೆಲ್ಲದೇ ಸೋತ ಎರಡನೇ ದೃಷ್ಟಾಂತ ಇದಾಗಿದ್ದು,1988ರ ಫ್ರೆಂಚ್ ಓಪನ್ ಫೈನಲ್ ಮೊದಲ ದೃಷ್ಟಾಂತ.
6. ಸ್ವಿಯಾಟೆಕ್ ತಾನಾಡಿದ ಮೊದಲ ಆರು ಗ್ರಾಂಡ್ ಸ್ಲಾಂ ಫೈನಲ್ ಪ್ರಶಸ್ತಿ ಗೆದ್ದ ಮೂರನೇ ಆಟಗಾರ್ತಿ.ಮಾರ್ಗರೇಟ್ ಕೋರ್ಟ್, ಮೋನಿಕಾ ಸೀಲ್ಸ್ ಮೊದಲಿಬ್ಬರು.
1.ಸ್ವಿಯಾಟೆಕ್ ವಿಂಬಲ್ಡನ್ ಪ್ರಶಸ್ತಿ ಸಿಂಗಲ್ಸ್ ಪ್ರಶಸ್ತಿ ಗೆದ್ದ ಪೋಲೆಂಡ್ನ ಮೊದಲ ಆಟಗಾರ್ತಿ.
6. ಇಗಾ ಸ್ವಿಯಾಟೆಕ್ಗೆ ಇದು 6ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಆಗಿದ್ದು, ಇದಕ್ಕೂ ಮುನ್ನ 2020, 2022, 2023, 2024ರಲ್ಲಿ ಫ್ರೆಂಚ್ ಓಪನ್ ಹಾಗೂ 2022ರಲ್ಲಿ ಯುಎಸ್ ಓಪನ್ ಜಯಿಸಿದ್ದರು.