

ಶಿವಮೊಗ್ಗ: ಕ್ರಿಕೆಟ್‌ನಲ್ಲಿ ಎಲ್ಲರೂ ರಾಜ್ಯ, ದೇಶವನ್ನು ಪ್ರತಿನಿಧಿಸುವುದು ಸುಲಭವಲ್ಲ. ಕಠಿಣ ಪರಿಶ್ರಮ, ಶ್ರದ್ಧೆ, ನಿರ್ದಿಷ್ಟ ಗುರಿಯನ್ನು ಹೊಂದಿರುವವರು ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ ಎಂದು ಐಪಿಎಲ್ ಮಾಜಿ ಅಧ್ಯಕ್ಷ, ಮಾಜಿ ಕ್ರಿಕೆಟಿಗ ಬ್ರಿಜೇಶ್ ಪಟೇಲ್ ಹೇಳಿದರು.
ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಶಿವಮೊಗ್ಗ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನೊಳಗೊಂಡ ಕೆಎಸ್‌ಸಿಎ (ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ) ಶಿವಮೊಗ್ಗ ವಲಯದ 2024-25ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬಹಳಷ್ಟು ಕ್ರಿಕೆಟಿಗರಲ್ಲಿ ಪ್ರತಿಭಾವಂತರಿದ್ದಾರೆ. ಆದರೆ ಶ್ರದ್ಧೆ, ನಿಖರತೆ ಕಾಣುವುದಿಲ್ಲ ಎಂದು ತಿಳಿಸಿದರು.
ಕಾಟಾಚಾರಕ್ಕೆ ಪ್ರಾಕ್ಟೀಸ್ ಮಾಡಿ ಆನಂತರ ಕಾಲಹರಣ ಮಾಡುವವರೇ ಹೆಚ್ಚು. ಆ ರೀತಿ ಆಗದೇ ಪ್ರತಿ ದಿನ ಮುಂಜಾನೆಯಿಂದ ಕನಿಷ್ಠ ನಾಲ್ಕೈದು ಗಂಟೆ ನಿರಂತರ ಅಭ್ಯಾಸ ಮಾಡಬೇಕು. ಪರಿಶ್ರಮ ಇಲ್ಲದೆ ಸಾಧಿಸಲು ಆಗುವುದಿಲ್ಲ. ದೀರ್ಘಾವಧಿ ಗುರಿ ಇದ್ದಲ್ಲಿ ಮಾತ್ರ ಯಶಸ್ಸಿನ ಹಾದಿ ಸುಲಭವಾಗುತ್ತದೆ ಎಂದು ಸಲಹೆ ನೀಡಿದರು.
ಕ್ರೀಡೆಗಳಲ್ಲಿ ಫಿಟ್‌ನೆಸ್ ಕಾಯ್ದುಕೊಳ್ಳುವುದು ದೊಡ್ಡ ಸವಾಲು. ಡಯೆಟ್, ದೈಹಿಕ ಪರಿಶ್ರಮ ಮೂಲಕ ಫಿಟೆನೆಟ್ ಕಾಪಾಡಿಕೊಳ್ಳಬೇಕು. ಬೌಲಿಂಗ್ ಅಥವಾ ಬ್ಯಾಟಿಂಗ್ ಮಾತ್ರ ಕ್ರಿಕೆಟ್ ಅಲ್ಲ. ಫಿಲ್ಡಿಂಗ್ ಕೂಡ ಮುಖ್ಯ. ವೇಗದಲ್ಲಿ ಇನ್ ಮತ್ತು ಔಟ್‌ಸ್ವಿಂಗ್ ಇದ್ದವರಿಗೆ ಅವಕಾಶಗಳು ಒಲಿದುಬರಲಿವೆ. ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕು. ಕ್ರೀಡೆ ಜತೆಗೆ ಶಿಕ್ಷಣಕ್ಕೂ ಆದ್ಯತೆ ನೀಡಬೇಕಾಗುತ್ತದೆ ಎಂದು ಸಲಹೆ ನೀಡಿದರು. ಕೆಎಸ್‌ಸಿಎ ವಲಯ ಸಂಚಾಲಕ ಕೆ.ವಿ.ಮಂಜುನಾಥ ರಾಜು, ಶಿವಮೊಗ್ಗ ವಲಯ ಅಧ್ಯಕ್ಷ ಎನ್.ರಾಜೇಂದ್ರ ಕಾಮತ್, ವಲಯ ಸಂಚಾಲಕ ಎಚ್.ಎಸ್.ಸದಾನಂದ ಉಪಸ್ಥಿತರಿದ್ದರು.
ಅಂತರ ಶಾಲಾ ಪಂದ್ಯ ಆಯೋಜನೆ ಚಿಂತನೆ
ಪ್ರಸಕ್ತ ಬಾರಿ 12 ವರ್ಷದೊಳಗಿನ ಅಂತರ್ ಶಾಲಾ ಪಂದ್ಯಗಳನ್ನು ಆಡಿಸುವ ಚಿಂತನೆಯನ್ನು ಕೆಎಸ್‌ಸಿಎ ಹೊಂದಿದೆ ಎಂದು ಅಧ್ಯಕ್ಷ ರಘುರಾಮ್ ಎ.ಭಟ್ ಹೇಳಿದರು. ಶಾಲಾ ಹಂತದಿಂದಲೇ ಮಕ್ಕಳ ಪ್ರತಿಭೆ ಗುರುತಿಸುವ ಕೆಲಸವನ್ನು ಕೆಎಸ್‌ಸಿಎ ಮಾಡಲಿದೆ. ರಾಜ್ಯದಲ್ಲಿ 2024-25ನೇ ಸಾಲಿನಲ್ಲಿ 4 ಸಾವಿರ ಪಂದ್ಯಗಳನ್ನು ಆಡಿಸಿ ದಾಖಲೆ ಸೃಷ್ಟಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಕ್ರಿಕೆಟ್‌ಗೆ ಆದ್ಯತೆ ನೀಡಲಾಗುತ್ತಿದೆ. ಮಹಿಳಾ ಕೆಪಿಎಲ್ ಆಡಿಸುವ ಮೂಲಕ ದೇಶದಲ್ಲೇ ಕರ್ನಾಟಕ ಮುಂಚೂಣಿಯಲ್ಲಿದೆ. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಮತ್ತೊಮ್ಮೆ ಮಹಿಳಾ ಕೆಪಿಎಲ್ ಆಯೋಜನೆ ಮಾಡುವಂತೆ ಮನವಿಗಳು ಬರುತ್ತಿವೆ ಎಂದರು.