ಪ್ರತಿಭೆಗೆ ತಕ್ಕ ಆಟವಾಡಿದರೆ ಕಪ್ ನಮ್ದೇ: ಯುವ ಆಟಗಾರರ ಬಗ್ಗೆ ಬುಲ್ಸ್ ಕೋಚ್ ಬಿಸಿ ರಮೇಶ್ ವಿಶ್ವಾಸ

New Project
Published on

ಬೆಂಗಳೂರು: ಯುವ ಆಟಗಾರರಲ್ಲಿ ಕಲಿಯುವ ತುಡಿತವಿದ್ದು, ಕೋಚ್‌ಗಳ ಸಲಹೆಗಳನ್ನು ಆಟದಲ್ಲಿ ಬೇಗನೆ ಅಳವಡಿಸಿಕೊಳ್ಳುತ್ತಾರೆ. ಆದ್ದರಿಂದ ಈ ಬಾರಿ ಯುವ ಆಟಗಾರರಿಗೆ ತಂಡದಲ್ಲಿ ಮಣೆ ಹಾಕಿದ್ದು, ಅವರು ನೈಜ ಸಾಮರ್ಥ್ಯ ಪ್ರದರ್ಶಿಸಿದರೆ, ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ಪ್ರಶಸ್ತಿ ಜಯಿಸುವುದು ಖಚಿತ ಎಂದು ಕೋಚ್, ಕನ್ನಡಿಗ ಬಿ.ಸಿ. ರಮೇಶ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜೈಪುರದಲ್ಲಿ ನಡೆದ ಸಾಂಪ್ರದಾಯಿಕ ಎದುರಾಳಿಗಳ ಸಪ್ತಾಹ (rivalaryweek) ಸಂದರ್ಭದಲ್ಲಿ ತಂಡದ ಸಿದ್ಧತೆ ಹಾಗೂ ಆಟಗಾರರ ಸುಧಾರಿತ ಪ್ರದರ್ಶನ ಕುರಿತು ಜಿಯೋ ಹಾಟ್‌ಸ್ಟಾರ್ ಆಯೋಜಿಸಿದ್ದ ಸಂವಾದಲ್ಲಿ ವಿಜಯವಾಣಿಯೊಂದಿಗೆ ಅವರು ಮಾತನಾಡಿದರು. ಬೆಂಗಳೂರು ಬುಲ್ಸ್ ಇಡೀ ಟೂರ್ನಿಯಲ್ಲಿ ಅತಿ ಹೆಚ್ಚು ಯುವ ಆಟಗಾರರನ್ನು ಹೊಂದಿರುವ ತಂಡ ಎನಿಸಿದ್ದು, ಆರಂಭಿಕ ಮೂರು ಪಂದ್ಯಗಳ ಸೋಲು ಆತ್ಮವಿಶ್ವಾಸ ಕುಗ್ಗಿಸಿತು. ಜತೆಗೆ ಸೋಲಿನ ಹಿಂದೆ ಕಾಣದ ಕೈಗಳು ಕೆಲಸ ಮಾಡಿದವು.

ಕೆಲವು ಆಟಗಾರರ ಮೇಲೆ ಅತಿಯಾದ ವಿಶ್ವಾಸವಿಟ್ಟಿದ್ದರಿಂದ ಈ ಸೋಲು ಅನುಭವಿಸಬೇಕಾಯಿತು. ಇದರಿಂದ ಒತ್ತಡಕ್ಕೆ ಒಳಗಾದೆ. ಆದರೆ, ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ ಎಂದು ಚಾಂಪಿಯನ್ ಕೋಚ್ ಎಂದೇ ಖ್ಯಾತಿ ಪಡೆದಿರುವ ರಮೇಶ್ ಬೇಸರಿಸಿದರು. ನಮ್ಮದು ಹೊಸ ಆಟಗಾರರ ತಂಡ, ಅನುಭವಿಗಳು ಯಾರೂ ತಂಡದಲ್ಲಿಲ್ಲ. ಸೋಲುಗಳ ಬಳಿಕ ತಂಡದ ಸಂಯೋಜನೆ ಬದಲಾಯಿಸಿದ್ದು ಫಲ ನೀಡಿತು. ಸತತ 4 ಪಂದ್ಯಗಳ ಗೆಲುವಿಗೆ ಇದು ನೆರವಾಯಿತು. ಕಬಡ್ಡಿಯಲ್ಲಿ ಯಾವ ತಂಡವೂ ಸುಲಭ ಎದುರಾಳಿಯಲ್ಲ ಎಂದು ರಮೇಶ್ ತಿಳಿಸಿದರು.

ಕರ್ನಾಟಕ ರೈಡರ್ ಗಣೇಶ್ ಹನುಮಂತಗೋಳ್ ಭಾರತ ತಂಡವನ್ನು ಪ್ರತಿನಿಧಿಸುವ ಅರ್ಹತೆ ಹೊಂದಿದ್ದಾರೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಬೆಂಗಳೂರು ಬುಲ್ಸ್ ತಂಡ ಇದುವರೆಗೆ ಲೀಗ್‌ನಲ್ಲಿ ಆಡಿರುವ 12 ಪಂದ್ಯಗಳಲ್ಲಿ ತಲಾ 6 ಗೆಲುವು, 6 ಸೋಲಿನೊಂದಿಗೆ 12 ಅಂಕ ಕಲೆಹಾಕಿದೆ. 2016ರಲ್ಲಿ ಬಿ.ಸಿ ರಮೇಶ್ ಕೋಚ್ ಆಗಿದ್ದಾಗಲೆ ಬೆಂಗಳೂರು ತಂಡ ಚೊಚ್ಚಲ ಬಾರಿ ಚಾಂಪಿಯನ್ ಆಗಿತ್ತು. ಬೆಂಗಳೂರು ಮೂಲದ ತಂಡವೊಂದು ಲೀಗ್‌ನಲ್ಲಿ ಪ್ರಶಸ್ತಿ ಗೆದ್ದ ಮೊದಲ ದೃಷ್ಟಾಂತವೂ ಇದಾಗಿತ್ತು.

ಕನಸು ನನಸಾಗಿದೆ: ಕನ್ನಡಿಗರಾಗಿ ಬುಲ್ಸ್ ತಂಡಕ್ಕೆ ಆಡುವುದು ಹೆಮ್ಮೆಯ ವಿಷಯ. ರಮೇಶ್ ಅವರ ಗರಡಿಯಲ್ಲಿ ಇದು ಸಾಧ್ಯವಾಗಿರುವುದು ಮತ್ತಷ್ಟು ಖುಷಿ ನೀಡಿದೆ. ಶಾಲೆಯಲ್ಲಿ ಸ್ನೇಹಿತರೊಂದಿಗೆ ಕಬಡ್ಡಿ ಅಡುತ್ತಿದ್ದೆ. ಆದರೆ, ಪ್ರೊ ಕಬಡ್ಡಿ ಲೀಗ್‌ನಲ್ಲಿ ಆಡುವ ನಿರೀಕ್ಷೆಯಿರಲಿಲ್ಲ. ಕಠಿಣ ಪರಿಶ್ರಮದಿಂದ ಇದು ಸಾಧ್ಯವಾಗಿದ್ದು,ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಗುರಿ ಇದೆ ಎಂದು ವಿಜಯಪುರದ ಗಣೇಶ್ ತಿಳಿಸಿದರು.

ಕಳೆದ ಆವೃತ್ತಿಯಲ್ಲಿ ಮೊದಲ ಬಾರಿ ಪುಣೇರಿ ತಂಡಕ್ಕೆ ಆಡಿದ್ದ ನನ್ನ ಮೇಲೆ ವಿಶ್ವಾಸವಿಟ್ಟು ರಮೇಶ್ ಅವರು ಬುಲ್ಸ್ ತಂಡಕ್ಕೆ ಕರೆತಂದಿದ್ದಾರೆ. ಅವರಂಥ ದಿಗ್ಗಜರ ಮಾರ್ಗದರ್ಶನದಲ್ಲಿ ಟ್ಯಾಕಲ್‌ನಲ್ಲಿ ಹೊಸ ಹೊಸ ತಂತ್ರಗಾರಿಕೆಯನ್ನು ಕಲಿಯುತ್ತಿದ್ದೇನೆ ಎಂದು ಬಾಗಲಕೋಟೆಯ  ಸತ್ಯಪ್ಪ ಮಟ್ಟಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net