

ನವದೆಹಲಿ: ಟೆಸ್ಟ್ ಪಂದ್ಯಗಳು ಯಾವಾಗಲೂ ಐದು ದಿನಗಳದ್ದಾಗಿರಬೇಕು. ನಾಲ್ಕು ದಿನಗಳ ಪಂದ್ಯ ಟೆಸ್ಟ್ ಆಗಲು ಸಾಧ್ಯವಿಲ್ಲ ಎಂದು ಐಸಿಸಿ ಕ್ರಿಕೆಟ್ ಸಮಿತಿಯ ಮುಖ್ಯಸ್ಥರಾಗಿರುವ ಭಾರತದ ಮಾಜಿ ನಾಯಕ ಹಾಗೂ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ.
ಈ ಮೂಲಕ 2023ರಿಂದ ಚತುರ್ದಿನ ಟೆಸ್ಟ್ ಪಂದ್ಯಗಳನ್ನು ಕಡ್ಡಾಯಗೊಳಿಸುವ ಐಸಿಸಿ ಚಿಂತನೆಯನ್ನು ವಿರೋಧಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ಸಾಯುತ್ತಿದೆ ಎಂಬ ಐಸಿಸಿ ಚೇರ್ಮನ್ ಶಶಾಂಕ್ ಮನೋಹರ್ ಹೇಳಿಕೆಯನ್ನೂ ಒಪ್ಪಿಕೊಳ್ಳದ ಕುಂಬ್ಳೆ, ಟೆಸ್ಟ್ ಕ್ರಿಕೆಟ್ ಜೀವಂತಿಕೆಯಿಂದ ಕೂಡಿದೆ. ಆದರೆ ಅಭಿಮಾನಿಗಳು ಪಂದ್ಯವನ್ನು ವೀಕ್ಷಿಸುವ ರೀತಿ ಬದಲಾಗಿದೆ.
ಮೈದಾನಕ್ಕೆ ಬಂದು ವೀಕ್ಷಿಸುವ ಬದಲಾಗಿ ಹೆಚ್ಚಿನವರು ಟಿವಿ ಮತ್ತು ಡಿಜಿಟಲ್ ಮಾಧ್ಯಮದಲ್ಲೇ ಹೆಚ್ಚಾಗಿ ಟೆಸ್ಟ್ ಪಂದ್ಯಗಳನ್ನು ಹಿಂಬಾಲಿಸುತ್ತಾರೆ ಎಂದಿದ್ದಾರೆ. ಈ ಮುನ್ನ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ ಸಹಿತ ಹಲವು ಹಾಲಿ-ಮಾಜಿ ಕ್ರಿಕೆಟಿಗರಿಂದಲೂ ಚತುರ್ದಿನ ಟೆಸ್ಟ್ಗೆ ವಿರೋಧ ವ್ಯಕ್ತವಾಗಿತ್ತು. ಆದರೆ ಅಫ್ಘಾನಿಸ್ತಾನ, ಐರ್ಲೆಂಡ್ ಮತ್ತು ಜಿಂಬಾಬ್ವೆಯಂಥ ದುರ್ಬಲ ತಂಡಗಳೆದುರು ಚತುರ್ದಿನ ಟೆಸ್ಟ್ ಆಡಲು ತಮ್ಮ ವಿರೋಧವಿಲ್ಲ ಎಂದೂ ಕುಂಬ್ಳೆ ಸ್ಪಷ್ಟಪಡಿಸಿದ್ದಾರೆ.