ಏಷ್ಯಾಕಪ್​ಗೆ ಬರದಿದ್ದರೆ ವಿಶ್ವಕಪ್ ಆಡಲ್ಲ!; ಪಾಕ್​ ಕ್ರಿಕೆಟ್​ ಮಂಡಳಿ ಹೊಸ ಖ್ಯಾತೆ

Pak 26 Jan 20
Published on

ಕರಾಚಿ: ಭಾರತ ವಿರುದ್ಧದ ಕ್ರಿಕೆಟ್ ಸರಣಿಗಾಗಿ ಬಿಸಿಸಿಐ ವಿರುದ್ಧ ತಗಾದೆಗಳನ್ನು ಎತ್ತುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಈಗ ಮತ್ತೊಂದು ಖ್ಯಾತೆ ತೆಗೆದಿದೆ.

ಹಾಲಿ ವರ್ಷದ ಸೆಪ್ಟೆಂಬರ್​ನಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ಏಷ್ಯಾಕಪ್ ಟಿ20 ಟೂರ್ನಿ ನಡೆಯಲಿದೆ. ಈ ಟೂರ್ನಿಗೆ ಬಿಸಿಸಿಐ, ಭಾರತ ತಂಡವನ್ನು ಕಳುಹಿಸಿಕೊಡದಿದ್ದರೆ, 2021ರಲ್ಲಿ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗೆ ನಾವು ಪಾಕಿಸ್ತಾನ ತಂಡವನ್ನು ಕಳಿಸುವುದಿಲ್ಲ ಎಂದು ಪಾಕಿಸ್ಥಾನ ಕ್ರಿಕೆಟ್ ಮಂಡಳಿಯ ಮುಖ್ಯ ವ್ಯವಸ್ಥಾಪಕ ಅಧಿಕಾರಿ (ಸಿಇಒ) ವಾಸಿಂ ಖಾನ್ ಬೆದರಿಕೆ ಹಾಕಿದ್ದಾರೆ.

‘ಏಷ್ಯಾಕಪ್​ಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಬರದೇ ಇದ್ದಲ್ಲಿ, 2021ರಲ್ಲಿ ಭಾರತದ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗೆ ನಾವು ಸ್ಪರ್ಧೆ ಮಾಡಲು ನಿರಾಕರಿಸುತ್ತೇವೆ’ ಎಂದು ಖಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಭಾರತದ ಜತೆಗಿನ ಸಂಬಂಧ ಹದಗೆಟ್ಟ ಕಾರಣದಿಂದಾಗಿ ಪಾಕಿಸ್ತಾನದ ಎರಡು ಸ್ಥಳಗಳಲ್ಲಿ ಮಾತ್ರವೇ ಏಷ್ಯಾಕಪ್ ಪಂದ್ಯಗಳು ನಡೆಯುತ್ತವೆ. ಭಾರತ ಬೇಕಿದ್ದರೆ ತನ್ನ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಬಹುದು. ಆದರೆ ಏಷ್ಯಾಕಪ್ ಬಹಿಷ್ಕರಿಸುವಂತಿಲ್ಲ ಎಂದಿದ್ದಾರೆ. 2006ರಿಂದಲೂ ಭಾರತ ತಂಡ ಪಾಕ್ ಪ್ರವಾಸ ಕೈಗೊಂಡಿಲ್ಲ. 2007ರಿಂದ ಪಾಕ್ ತಂಡದ ವಿರುದ್ಧ ದ್ವಿಪಕ್ಷೀಯ ಟೆಸ್ಟ್ ಸರಣಿಯನ್ನೂ ಆಡಿಲ್ಲ. -ಪಿಟಿಐ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net