

ನವದೆಹಲಿ: ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವೈಟ್ ವಾಶ್ ಆಗುವ ಮೂಲಕ ತೀವ್ರ ಮುಖಭಂಗವನ್ನು ಅನುಭವಿಸಿರುವ ಭಾರತ ತಂಡವು ನವೆಂಬರ್ 22ರಿಂದ ಆರಂಭವಾಗಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ತಯಾರಿ ನಡೆಸುತ್ತಿದ್ದು, ಕ್ರೀಡಾಭಿಮಾನಿಗಳು ಈ ಸರಣಿಯ ಮೇಲೆ ಭಾರೀ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಈ ಸರಣಿಯ ಮೊದಲೆರಡು ಪಂದ್ಯಕ್ಕೆ ರೋಹಿತ್ ಶರ್ಮ (Rohit Sharma) ಅಲಭ್ಯರಾಗಲಿದ್ದಾರೆ ಎಂದು ಹೇಳಲಾಗಿದ್ದು, ಹಿಟ್ಮ್ಯಾನ್ (Rohit Sharma) ಅನುಪಸ್ಥಿತಿಯಲ್ಲಿ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸಲಿದ್ದಾರೆ.
ಇನ್ನೂ ನವೆಂಬರ್ 15ರಂದು ರೋಹಿತ್ ಶರ್ಮ ಪತ್ನಿ ರಿತಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಹೇಳಲಾಗಿದ್ದು, ರೋಹಿತ್ (Rohit Sharma) ಸರಣಿಯಲ್ಲಿ ಭಾಗಿಯಾಗುತ್ತಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಎಲ್ಲೂ ಅಧಿಕೃತವಾಗಿ ಮಾಹಿತಿ ನೀಡಲಾಗಿಲ್ಲ. ಇನ್ನೂ ಈ ಬಗ್ಗೆ ಮಾತನಾಡಿರುವ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ (Saurav Ganguly) ಏನೇ ಇದ್ದರೂ ರೋಹಿತ್ ತಂಡವನ್ನು ಕೂಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಸೌರವ್ (Saurav Ganguly), ತಂಡಕ್ಕೆ ನಾಯಕತ್ವದ ಅಗತ್ಯವಿರುವುದರಿಂದ ರೋಹಿತ್ ಶೀಘ್ರದಲ್ಲೇ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ಅವರ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ನಾನು ಕೇಳ್ಪಟ್ಟೆ. ಆದ್ದರಿಂದ ಆತ ಬೇಗನೆ ಆಸ್ಟ್ರೇಲಿಯಾಗೆ ಹೊರಡುವ ಬಗ್ಗೆ ನನಗೆ ಖಾತ್ರಿಯಿದೆ. ನಾನು ಆತನ ಸ್ಥಾನದಲ್ಲಿದಿದ್ದರೆ ಮೊದಲು ತಂಡ ಎನ್ನುತ್ತಿದ್ದೆ. ಇದು ದೊಡ್ಡ ಸರಣಿಯಾಗಿರುವುದರಿಂದ ಏನೇ ಇದ್ದರೂ ರೋಹಿತ್ ತಂಡವನ್ನು ಸೇರಿಕೊಳ್ಳಬೇಕು. ಟೀಮ್ ಇಂಡಿಯಾಗೆ ಆತನ ನಾಯಕತ್ವದ ಅವಶ್ಯಕತೆಯಿದ್ದು, ಆತ ಮೊದಲ ಪಂದ್ಯ ಆಡುತ್ತಾನೆ ಎಂಬ ವಿಶ್ವಾಸ ನನಗಿದೆ ಎಂದು ಸೌರವ್ ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜೂನಿಯರ್ ಹಿಟ್ಮ್ಯಾನ್ ಆಗಮನದಿಂದ ಹಿಟ್ಮ್ಯಾನ್ ಆಸ್ಟ್ರೇಲಿಯಾಗೆ ಪ್ರಯಾಣಿಸುವ ಸಾಧ್ಯತೆಯಿದೆ. ಏಕೆಂದರೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಪಂದ್ಯವು ನವೆಂಬರ್ 22 ರಿಂದ ಶುರುವಾಗಲಿದೆ. ಸದ್ಯ ಮುಂಬೈನಲ್ಲಿರುವ ರೋಹಿತ್ ಶರ್ಮಾ ಪರ್ತ್ಗೆ ಟೆಸ್ಟ್ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ. ಅದರಂತೆ ನವೆಂಬರ್ 22 ರಿಂದ ಶುರುವಾಗಲಿರುವ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಅವರು ಮೊದಲ ಪಂದ್ಯಕ್ಕೆ ಅಲಭ್ಯರಾದರೆ ಭಾರತ ತಂಡವನ್ನು ಜಸ್ಪ್ರೀತ್ ಬುಮ್ರಾ ಮುನ್ನಡೆಸಲಿದ್ದಾರೆ.