

ನವದೆಹಲಿ: ಇಂದು ಅರುಣ್ ಜೇಟ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಸೆಣಸಾಡಿದ್ದು, ಮೂರು ವಿಕೆಟ್ಗಳಿಂದ ಬಾಂಗ್ಲಾದೇಶ ಶ್ರೀಲಂಕಾ ತಂಡವನ್ನು ಮಣಿಸಿದೆ.
ಟಾಸ್ ಗೆದ್ದ ಬಾಂಗ್ಲಾದೇಶ, ಶ್ರೀಲಂಕಾ ತಂಡಕ್ಕೆ ಬ್ಯಾಟಿಂಗ್ ಮಾಡಲು ಅವಕಾಶ ಕೊಟ್ಟು, ತಾವು ಫೀಲ್ಡಿಂಗ್ ಆಯ್ದುಕೊಂಡಿತು. ಪಂದ್ಯ ಆರಂಭಗೊಂಡ ವೇಳೆಯಿಂದಲೂ ಎರಡು ತಂಡಗಳ ನಡುವೆ ಉತ್ತಮ ಪೈಪೋಟಿ ಇತ್ತು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 279 ರನ್ಗೆ ಆಲ್ಔಟ್ ಆಯಿತು. ಈ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾ, ಅಂತಿಮವಾಗಿ ಮೂರು ವಿಕೆಟ್ಗಳಿಂದ ಗೆಲುವನ್ನು ಸಾಧಿಸಿತು. ಈ ಪಂದ್ಯವನ್ನು ಗೆದ್ದರೂ ಕೂಡ ಬಾಂಗ್ಲಾ ಸೆಮಿಫೈನಲ್ ತಲುಪುದು ಅಸಾಧ್ಯವಾಗಿದೆ.
ಶ್ರೀಲಂಕಾ ವಿರುದ್ಧ ಪಡೆದ ಈ ಗೆಲುವಿನ ನಂತರ ಏಕದಿನ ವಿಶ್ವಕಪ್ 2023ರ ಅಂಕಪಟ್ಟಿಯಲ್ಲಿ ಬಾಂಗ್ಲಾದೇಶ 7ನೇ ಸ್ಥಾನವನ್ನು ಅಲಂಕರಿಸಿದೆ. ಈ ಪಂದ್ಯದ ಮಧ್ಯೆ ಕ್ರಿಕೆಟ್ ಇತಿಹಾಸದಲ್ಲೇ ಪ್ರಥಮ ಬಾರಿಗೆ ಟೈಮ್ಔಟ್ ಮೂಲಕ ಪೆವಿಲಿಯನ್ ಸೇರಿದ ಬ್ಯಾಟ್ಸ್‌ಮನ್ ಎಂಬ ಪಟ್ಟವನ್ನು ಇದೀಗ ಏಂಜೆಲೊ ಮ್ಯಾಥ್ಯೂಸ್ ಪಡೆದುಕೊಂಡಿದ್ದಾರೆ. ಒಂದೂ ಬಾಲ್ ಎದುರಿಸದೆ ಅಂಪೈರ್ನಿಂದ ಔಟ್ ಪಡೆದುಕೊಂಡ ಬ್ಯಾಟ್ಸ್‌ಮನ್ ಮ್ಯಾಥ್ಯೂಸ್ ಆಗಿದ್ದಾರೆ.
ಅಷ್ಟಕ್ಕೂ ಏನಿದು ಟೈಮ್ಔಟ್? ವಿಕೆಟ್ ಪತನವಾಗದೆ ಮ್ಯಾಥ್ಯೂಸ್ ಔಟಾಗಿದ್ಯಾಕೆ? ಇಲ್ಲಿದೆ ಮಾಹಿತಿ:
ಅರುಣ್ ಜೆಟ್ಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ದದ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಶ್ರೀಲಂಕಾ ತಂಡದ ಹಿರಿಯ ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಬ್ಯಾಟಿಂಗ್‌ಗೆ ಮೈದಾನಕ್ಕಿಳಿದ ವೇಳೆ ಟೈಮ್ಡ್ ಔಟ್ ಆಗಿದ್ದಾರೆ. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೈಮ್ಡ್ ಔಟಾದ ಮೊದಲ ಆಟಗಾರ ಎಂಬ ಕುಖ್ಯಾತಿಗೆ ಮ್ಯಾಥ್ಯೂಸ್ ಒಳಗಾಗಿದ್ದಾರೆ.
ನಿಯಮಗಳ ಪ್ರಕಾರ, ಒಬ್ಬ ಬ್ಯಾಟರ್ ಔಟಾದ ನಂತರ ಹೊಸ ಬ್ಯಾಟ್ಸ್‌ಮನ್ ಮುಂದಿನ ಎರಡು ನಿಮಿಷಗಳಲ್ಲಿ ಬಾಲ್ ಎದುರಿಸಲು ರೆಡಿಯಿರಬೇಕು. ಆದರೆ ಮ್ಯಾಥ್ಯೂಸ್‌ಗೆ ಹಾಗೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಅಂಪೈರ್ ಔಟ್ ಕೊಡುವ ಪರಿಸ್ಥಿತಿ ಎದುರಾಯಿತು. ಬಾಂಗ್ಲಾದೇಶದ ನಾಯಕ ಶಕೀಬ್ ಮ್ಯಾಥ್ಯೂಸ್ ಅವರ ಔಟ್ಗೆ ಮನವಿ ಮಾಡದೆ ಇದ್ದಿದ್ದರೆ ಮ್ಯಾಥ್ಯೂಸ್ ಪೆವಿಲಿಯನ್ನತ್ತ ಮುಖಮಾಡುವ ಸನ್ನಿವೇಶ ಬರುತ್ತಿರಲಿಲ್ಲ.