ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅಂಕಪದ್ಧತಿ ಬದಲಾವಣೆಯಿಂದ ಭಾರತಕ್ಕೆ ಸಂಕಷ್ಟ!

wtc india web
Published on

ನವದೆಹಲಿ: ಕರೊನಾ ವೈರಸ್ ಹಾವಳಿಯಿಂದಾಗಿ ವಿಶ್ವೆದೆಲ್ಲೆಡೆ ಹಲವರು ಸಂಕಷ್ಟಗಳನ್ನು ಎದುರಿಸಿದ್ದಾರೆ. ಇದೀಗ ಈ ಪಟ್ಟಿಗೆ ಟೀಮ್ ಇಂಡಿಯಾ ಕೂಡ ಸೇರ್ಪಡೆಯಾಗಿದೆ! ಹೌದು, ಕರೊನಾದಿಂದಾಗಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ (ಡಬ್ಲ್ಯುಟಿಸಿ) ಹಲವು ಸರಣಿಗಳು ನಿಗದಿಯಂತೆ ನಡೆದಿಲ್ಲ. ಇದರಿಂದಾಗಿ ಐಸಿಸಿ, ಡಬ್ಲ್ಯುಟಿಸಿ ಅಂಕಪದ್ಧತಿಯ ನಿಯಮಾವಳಿ ಬದಲಾಯಿಸಿದೆ. ಇದರಿಂದಾಗಿ ಭಾರತ ತಂಡಕ್ಕೆ ಅಗ್ರ 2 ತಂಡಗಳ ಪೈಕಿ ಒಂದಾಗಿ ೈನಲ್ ಪ್ರವೇಶಿಸುವ ಅವಕಾಶ ಕೈತಪ್ಪುವ ಭೀತಿ ಎದುರಾಗಿದೆ.

ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಇದೀಗ ತಂಡಗಳು ಗಳಿಸಿದ ಒಟ್ಟು ಅಂಕಗಳಿಗೆ ಬದಲಾಗಿ, ಅಂಕಗಳ ಶೇಕಡಾವಾರು ಲೆಕ್ಕಾಚಾರಗಳ ಆಧಾರದಲ್ಲಿ ಸ್ಥಾನ ನಿರ್ಣಯ ಮಾಡಲಾಗುತ್ತಿದೆ. ಈ ಬದಲಾವಣೆಯ ಮೊದಲ ಹೊಡೆತವಾಗಿ ಭಾರತ ತಂಡ ಈಗಾಗಲೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಿಂದ 2ನೇ ಸ್ಥಾನಕ್ಕೆ ಕುಸಿದಿದೆ. ಭಾರತ ಈಗಲೂ ಗರಿಷ್ಠ 360 ಅಂಕ ಹೊಂದಿದ್ದರೂ, ಶೇಕಡಾವಾರು ಲೆಕ್ಕಾಚಾರದಲ್ಲಿ ಕೊಹ್ಲಿ ಪಡೆ (ಶೇ. 75.00) ಆಸ್ಟ್ರೇಲಿಯಾಗಿಂತ (82.22) ಕೆಳಗಿಳಿದಿದೆ.

ಕರೊನಾ ಕಾಲದಲ್ಲಿ ನಡೆಯದ ಪಂದ್ಯಗಳನ್ನು ಡ್ರಾ ಎಂದು ಪರಿಗಣಿಸಿ ಅಂಕಗಳನ್ನು ಹಂಚಿಕೆ ಮಾಡಲು ಮೊದಲಿಗೆ ನಿರ್ಧರಿಸಲಾಗಿತ್ತು. ಆದರೆ ಡಬ್ಲ್ಯುಟಿಸಿಯ ಹೊಸ ನಿಯಮದ ಅನ್ವಯ, ತಂಡಗಳು ಆಡಿರುವ ಪಂದ್ಯಗಳಲ್ಲಿ ಗಳಿಸಿದ ಅಂಕಗಳ ಶೇಕಡಾವಾರು ಲೆಕ್ಕದಲ್ಲಿ ಸ್ಥಾನ ನಿರ್ಣಯ ಮಾಡಲಾಗುತ್ತಿದೆ.

ಡಬ್ಲ್ಯುಟಿಸಿಯಲ್ಲಿ ಭಾರತ ತಂಡ ಈಗಾಗಲೆ 4 ಸರಣಿ ಆಡಿದ್ದು, ಕೊನೇ 2 ಸರಣಿಗಳಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ಸವಾಲನ್ನು ಎದುರಿಸಲಿದೆ. ಇವೆರಡೂ ತಲಾ 4 ಪಂದ್ಯಗಳ ಸರಣಿಯಾಗಿದ್ದು, ಆಸ್ಟ್ರೇಲಿಯಾವನ್ನು ಅದರದೇ ನೆಲದಲ್ಲಿ ಎದುರಿಸಬೇಕಿದೆ. ಆಸೀಸ್ ವಿರುದ್ಧ ಸರಣಿ ಗೆಲ್ಲದಿದ್ದರೆ ಭಾರತ ತಂಡ ಫೈನಲ್‌ಗೇರುವ ಸಾಧ್ಯತೆ ಕ್ಷೀಣವಾಗಿದೆ. ನಿಯಮ ಬದಲಾವಣೆಗೆ ಮುನ್ನ ಭಾರತ ತಂಡ ಫೈನಲ್‌ಗೇರುವುದು ಬಹುತೇಕ ಖಚಿತವೆನಿಸಿತ್ತು.

ಟೂರ್ನಿಯ ನಡುವೆ ನಿಯಮ ಬದಲಾವಣೆ ಮಾಡಿರುವ ಐಸಿಸಿಯ ಕ್ರಮಕ್ಕೆ ಇದೀಗ ಬಿಸಿಸಿಐ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಕಾರಣಗಳೇನೇ ಇದ್ದರೂ, ಟೂರ್ನಿಯೊಂದು ಶುರುವಾದ ಬಳಿಕ ಅದರ ನಿಯಮ ಬದಲಾಯಿಸುವುದು ಸರಿಯಲ್ಲ. ನಿಯಮಗಳ ಬದಲಾವಣೆಗಾಗಿ ಮುಂದಿನ ಆವೃತ್ತಿಯವರೆಗೆ ಕಾಯಬೇಕಾಗಿತ್ತು ಅಥವಾ ಹಾಲಿ ಟೂರ್ನಿಯನ್ನೇ ಮುಂದೂಡಿಕೆ ಮಾಡಬೇಕಾಗಿತ್ತು. ಇದರಿಂದ ಕರೊನಾ ಕಾಲದಲ್ಲಿ ನಡೆಯದ ಸರಣಿಗಳನ್ನು ಮುಗಿಸಬಹುದಾಗಿತ್ತು ಎಂದು ಬಿಸಿಸಿಐ ಸದಸ್ಯರೊಬ್ಬರು ಹೇಳಿದ್ದಾರೆ.

ಕರೊನಾದಿಂದಾಗಿ 3-4 ಟೆಸ್ಟ್ ಸರಣಿಗಳಿಗಷ್ಟೇ ತೊಂದರೆಯಾಗಿದೆ. ಅವುಗಳನ್ನು ಮುರುನಿಗದಿ ಮಾಡಿದ್ದರೆ ಎಲ್ಲ ಸಮಸ್ಯೆಗಳು ಬಗೆಹರಿಯುತ್ತಿದ್ದವು. ವೇಳಾಪಟ್ಟಿ ಬದಲಾವಣೆ ಸಾಧ್ಯವಿಲ್ಲದಿದ್ದರೆ, ನಿಯಮ ಬದಲಾವಣೆ ಯಾಕಾಗಿ ಎಂದು ಬಿಸಿಸಿಐ ಸದಸ್ಯರು ಪ್ರಶ್ನಿಸಿದ್ದಾರೆ.

ನಿಯಮ ಬದಲಾವಣೆಯಲ್ಲಿ ಭಾರತೀಯರದ್ದೇ ಪಾತ್ರ!

ಡಬ್ಲ್ಯುಟಿಸಿ ನಿಯಮ ಬದಲಾವಣೆ ಭಾರತಕ್ಕೆ ದೊಡ್ಡ ಹಿನ್ನಡೆಯಾಗಿರುವುದಕ್ಕಿಂತ ಈ ಬದಲಾವಣೆಯಲ್ಲಿ ಭಾರತೀಯರದ್ದೇ ಪಾತ್ರವಿರುವುದು ವಿಪರ‌್ಯಾಸವಾಗಿದೆ! ಮಾಜಿ ನಾಯಕ ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿ ಈ ಬದಲಾವಣೆಗೆ ಶಿಫಾರಸು ಸಲ್ಲಿಸಿತ್ತು. ಮತ್ತೋರ್ವ ಮಾಜಿ ನಾಯಕ ಹಾಗೂ ಎನ್‌ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಈ ಸಮಿತಿಯಲ್ಲಿ ಆಟಗಾರರ ಪ್ರತಿನಿಧಿಯಾಗಿದ್ದರು. ಇನ್ನು ಕ್ರಿಕೆಟ್ ಸಮಿತಿಯ ಶಿಾರಸು ಅಂಗೀಕಾರಗೊಳಿಸಿದ ಐಸಿಸಿ ಮಂಡಳಿಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರೂ ಭಾರತದ ಪ್ರತಿನಿಧಿಯಾಗಿದ್ದರು.

ನಿಗದಿಯಂತೆ ಫೈನಲ್‌ಗಾಗಿ ಯತ್ನ

2019-21ರ ಸಾಲಿನ ಡಬ್ಲ್ಯುಟಿಸಿ ಫೈನಲ್ ಪಂದ್ಯವನ್ನು ನಿಗದಿಯಂತೆಯೇ ಮುಂದಿನ ವರ್ಷ ಜೂನ್‌ನಲ್ಲಿ ಲಾರ್ಡ್ಸ್‌ನಲ್ಲಿ ಆಯೋಜಿಸುವ ಪ್ರಯತ್ನದ ಅಂಗವಾಗಿ ಅಂಕಪದ್ಧತಿ ಬದಲಾಯಿಸಲಾಗಿದೆ. ಟೂರ್ನಿ ಮುಂದೂಡಿಕೆ ಮಾಡಿದರೆ, 2021-22, 2022-23ರ ಸಾಲಿನ ಡಬ್ಲ್ಯುಟಿಸಿಗೆ ಸಮಸ್ಯೆ ಎದುರಾಗಲಿದೆ. ಕರೊನಾದಿಂದ ಮುಂದೂಡಿಕೆಯಾಗಿರುವ ಸರಣಿಗಳನ್ನು ಮರುನಿಗದಿ ಮಾಡಿದರೂ, 2021ರ ಜೂನ್‌ಗೆ ಮುನ್ನ ಶೇ. 85 ಪಂದ್ಯಗಳನ್ನು ಮಾತ್ರ ನಡೆಸಲು ಸಾಧ್ಯವಿದೆ ಎಂದು ಐಸಿಸಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net