

ಮುಂಬೈ: ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯವನ್ನು 2027ರಿಂದ ಹೊಸ ತಾಣದಲ್ಲಿ ಆಯೋಜಿಸುವ ಬಗ್ಗೆ ಐಸಿಸಿಗೆ ಮನವಿ ಸಲ್ಲಿಸಿರುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ತಿಳಿಸಿದ್ದಾರೆ.
2021 ಮತ್ತು 2023ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯಗಳು ಇಂಗ್ಲೆಂಡ್ನಲ್ಲೇ ನಡೆದಿದ್ದರೆ, 2025ರ ಫೈನಲ್ ಕೂಡ ಅಲ್ಲೇ ನಿಗದಿಯಾಗಿದೆ. ಆದರೆ 3 ಪ್ರಮುಖ ಟೆಸ್ಟ್ ರಾಷ್ಟ್ರಗಳಾದ ಭಾರತ, ಇಂಗ್ಲೆಂಡ್, ಆಸ್ಟ್ರೆಲಿಯಾದ ಪೈಕಿ ಡಬ್ಲ್ಯುಟಿಸಿ ಫೈನಲ್ ನಡೆಯುವ ಜೂನ್ ಸಮಯದಲ್ಲಿ ಭಾರತ ಮತ್ತು ಆಸೀಸ್ನಲ್ಲಿ ಮಳೆಗಾಲವಾಗಿರುವುದರಿಂದ ಪಂದ್ಯ ಆಯೋಜಿಸುವುದು ಕಷ್ಟ. ಬೆಂಗಳೂರಿನಲ್ಲೂ ಅದು ಮಳೆಗಾಲದ ಸಮಯವಾಗಿರುತ್ತದೆ ಎಂದು ಜಯ್ ಷಾ ವಿವರಿಸಿದ್ದಾರೆ.
ಐಸಿಸಿ ಮೇಲೆ ಕಣ್ಣಿಲ್ಲ
ಐಸಿಸಿಯ ಹಾಲಿ ಚೇರ್ಮನ್ ಗ್ರೇಗ್ ಬಾರ್ಕ್ಲೇ ಅವಧಿ ಹಾಲಿ ವರ್ಷ ಮುಕ್ತಾಯಗೊಳ್ಳಲಿದ್ದು, ಜಯ್ ಷಾ ಈ ಹುದ್ದೆಗೆ ಉತ್ತರಾಧಿಕಾರಿ ಆಗುವ ರೇಸ್ನಲ್ಲಿದ್ದಾರೆ ಎಂದು ವರದಿಗಳು ಹರಡಿವೆ. ಆದರೆ ಜಯ್ ಷಾ ಇದನ್ನು ತಳ್ಳಿಹಾಕಿದ್ದಾರೆ. "ಊಹಾಪೋಹಗಳು ಇರುವುದು ನಿಜ. ಆದರೆ, ನಾನು ಬಿಸಿಸಿಐನಲ್ಲೇ ಇರಲು ಬಯಸುವೆ. ನಾನಿಲ್ಲಿ ಉತ್ತಮ ಕೆಲಸ ಮಾಡುತ್ತಿಲ್ಲವೇ?' ಎಂದವರು ಪ್ರಶ್ನಿಸಿದ್ದಾರೆ.