

ನವದೆಹಲಿ: ( icc womens world cup 2025) ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ವಿಶ್ವಕಪ್ ವಿಜಯವನ್ನು ಪ್ರಧಾನಿ ನರೇಂದ್ರ ಮೋದಿ "ಅಸಾಧಾರಣ ತಂಡದ ಮನೋಭಾವ ಮತ್ತು ದೃಢನಿಶ್ಚಯ" ಕ್ಕೆ ಸಾಕ್ಷಿ ಎಂದು ಬಣ್ಣಿಸಿದ್ದಾರೆ.
ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸುವ ಮೂಲಕ ಭಾರತ ಮೊದಲ ಬಾರಿಗೆ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ 2025 ಅನ್ನು ಗೆದ್ದುಕೊಂಡಿತು.
ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡವು ಅಂತಿಮವಾಗಿ ತನ್ನ ಕನಸನ್ನು ನನಸಾಗಿಸಿಕೊಂಡಿತು. ಕ್ರಿಕೆಟ್ ದಂತಕಥೆಗಳಾದ ಮಿಥಾಲಿ ರಾಜ್ ಮತ್ತು ಜೂಲನ್ ಗೋಸ್ವಾಮಿ ಅವರ ಪರಂಪರೆಯನ್ನು ಉಳಿಸಿಕೊಂಡು, ಈ ಹೊಸ ಪೀಳಿಗೆಯ ಆಟಗಾರ್ತಿಯರು ವಿಶ್ವ ವೇದಿಕೆಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ತವರು ನೆಲದಲ್ಲಿ ನಡೆಯುವ ಫೈನಲ್ ಪಂದ್ಯವನ್ನು ವೀಕ್ಷಿಸಲು 45,000 ಅಭಿಮಾನಿಗಳು ಕ್ರೀಡಾಂಗಣದಲ್ಲಿ ತುಂಬಿದ್ದರು. ಈ ಐತಿಹಾಸಿಕ ಕ್ಷಣವನ್ನು ಭಾರತೀಯ ಮಹಿಳಾ ಕ್ರಿಕೆಟ್‌ಗೆ ಒಂದು ಮಹತ್ವದ ತಿರುವು ಎಂದು ಹೇಳಬಹುದು.
ಪ್ರಧಾನಿ ನರೇಂದ್ರ ಮೋದಿಯವರು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತಪಡಿಸಿದ ಅಭಿನಂದನಾ ಸಂದೇಶಗಳು ಈ ಗೆಲುವನ್ನು ಇನ್ನಷ್ಟು ವಿಶೇಷವಾಗಿಸಿದವು. "ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ 2025 ರ ಫೈನಲ್‌ನಲ್ಲಿ ಭಾರತ ತಂಡವು ಗಮನಾರ್ಹ ಗೆಲುವು ಸಾಧಿಸಿತು. ಫೈನಲ್‌ನಲ್ಲಿ ಅವರ ಪ್ರದರ್ಶನವು ಉತ್ತಮ ಕೌಶಲ್ಯ ಮತ್ತು ಆತ್ಮವಿಶ್ವಾಸದಿಂದ ಕೂಡಿತ್ತು. ತಂಡವು ಪಂದ್ಯಾವಳಿಯಾದ್ಯಂತ ಅಸಾಧಾರಣ ತಂಡ ಮನೋಭಾವ ಮತ್ತು ದೃಢನಿಶ್ಚಯವನ್ನು ಪ್ರದರ್ಶಿಸಿತು. ನಮ್ಮ ಆಟಗಾರ್ತಿಯರಿಗೆ ಅಭಿನಂದನೆಗಳು. ಈ ಐತಿಹಾಸಿಕ ಗೆಲುವು ಭವಿಷ್ಯದ ಚಾಂಪಿಯನ್‌ಗಳು ಕ್ರೀಡೆಯನ್ನು ಕೈಗೆತ್ತಿಕೊಳ್ಳಲು ಸ್ಫೂರ್ತಿ ನೀಡುತ್ತದೆ" ಎಂದು ಟ್ವೀಟ್ ಮಾಡಿದ್ದಾರೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಹರಿಣರು, ಹರ್ಮನ್‌ಪ್ರೀತ್ ಕೌರ್ ಪಡೆಗೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿತು. 50 ಓವರ್ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ ಭಾರತ 298 ರನ್ ಕಲೆಹಾಕಿತು. ತಂಡದ ಪರ ಬ್ಯಾಟರ್ಗಳಾದ ಶೆಫಾಲಿ ವರ್ಮಾ, ಸ್ಮೃತಿ ಮಂಧಾನ, ದೀಪ್ತಿ ಶರ್ಮಾ ಉತ್ತಮ ಬ್ಯಾಟಿಂಗ್ ಕೊಡುಗೆ ನೀಡಿದರು. ಈ ಬೃಹತ್ ರನ್ಗಳ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾಕಕ್ಕೆ ಆರಂಭಿಕ ಬ್ಯಾಟ್ಸ್ವುಮನ್ ಲೌರಾ ವೋಲ್ವಾರ್ಡಟ್ (101 ರನ್) ಅವರ ಶತಕದಾಟ ಬಿಟ್ಟರೆ ಇನ್ಯಾರ ಪ್ರದರ್ಶನವೂ ಸಾಥ್ ನೀಡಲಿಲ್ಲ. ಇದು ತಂಡದ ಸೋಲಿಗೆ ಮುಖ್ಯ ಕಾರಣವಾಯಿತು.