ಭಾರತಕ್ಕೆ ಇಂದು ಬಾಂಗ್ಲಾದೇಶ ಸವಾಲು: ಗೆಲುವಿನ ಓಟ ಮುಂದುವರಿಸುವ ತವಕದಲ್ಲಿ ಹರ್ವನ್​ಪ್ರೀತ್ ಕೌರ್ ಪಡೆ

Smitha
Published on

ಪರ್ತ್: ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಹಾಗೂ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಸದೆಬಡಿಯುವ ಮೂಲಕ ಭರ್ಜರಿ ಶುಭಾರಂಭ ಕಂಡಿರುವ ಭಾರತ ತಂಡ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೋಮವಾರ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಪರ್ತ್​ನಲ್ಲಿ ನಡೆಯಲಿರುವ ಎ ಗುಂಪಿನ ತನ್ನ 2ನೇ ಪಂದ್ಯದಲ್ಲೂ ಗೆಲುವಿನ ಓಟ ಮುಂದುವರಿಸುವತ್ತ ಹರ್ವನ್​ಪ್ರೀತ್ ಕೌರ್ ಬಳಗ ಗಮನ ಹರಿಸಿದೆ.

2018ರ ಟಿ20 ಏಷ್ಯಾಕಪ್​ನಲ್ಲಿ ಬಾಂಗ್ಲಾದೇಶ ವಿರುದ್ಧ 2 ಬಾರಿ (ಲೀಗ್ ಮತ್ತು ಫೈನಲ್​ನಲ್ಲಿ) ಸೋತಿರುವುದರಿಂದ ಭಾರತ ತಂಡ ಎದುರಾಳಿಯನ್ನು ಲಘುವಾಗಿ ಪರಿಗಣಿಸದೆ, ಆಸೀಸ್ ವಿರುದ್ಧ ತೋರಿದ ನಿರ್ವಹಣೆಯನ್ನೇ ಪುನರಾವರ್ತಿಸುವ ಹಂಬಲದಲ್ಲಿದೆ. ಭಾರತ ತಂಡದಲ್ಲಿ ಈಗ ಯುವ ಆಕ್ರಮಣ ಕಾರಿ ಬ್ಯಾಟುಗಾರ್ತಿಯರಿದ್ದು, 2018ರ ಏಷ್ಯಾಕಪ್ ಸೋಲಿಗೆ ಸೇಡು ತೀರಿಸಿಕೊಳ್ಳಲು ನೆರವಾಗುವ ನಿರೀಕ್ಷೆ ಇದೆ. ಉಭಯ ತಂಡಗಳ ಕೊನೇ 5 ಮುಖಾಮುಖಿಗಳಲ್ಲಿ ಭಾರತ 3-2 ಮುನ್ನಡೆ ಹೊಂದಿದ್ದು, ಈ ಪಂದ್ಯದ ಗೆಲುವು ಭಾರತವನ್ನು ನಾಕೌಟ್ ಹಂತದ ಸನಿಹಕ್ಕೂ ಕೊಂಡೊಯ್ಯಲಿದೆ.

ಬ್ಯಾಟಿಂಗ್ ಸುಧಾರಣೆ ಅಗತ್ಯ: ಆಸೀಸ್ ವಿರುದ್ಧ ಸಾಧಾರಣ ಮೊತ್ತವನ್ನು ರಕ್ಷಿಸಿಕೊಳ್ಳಲು ಭಾರತಕ್ಕೆ ಪೂನಂ ಯಾದವ್ ಲೆಗ್ ಸ್ಪಿನ್ ಮ್ಯಾಜಿಕ್ ನೆರವಾಗಿತ್ತು. ಆದರೆ ಇತ್ತೀಚೆಗಿನ ದಿನಗಳಲ್ಲಿ ಅಸ್ಥಿರ ನಿರ್ವಹಣೆ ತೋರುತ್ತಿರುವ ಭಾರತದ ಬ್ಯಾಟಿಂಗ್ ವಿಭಾಗ ಸುಧಾರಿತ ನಿರ್ವಹಣೆ ತೋರುವುದು ಅಗತ್ಯವಾಗಿದೆ. ಪ್ರಮುಖವಾಗಿ ಅನುಭವಿಗಳಾದ ಎಡಗೈ ಬ್ಯಾಟುಗಾರ್ತಿ ಸ್ಮೃತಿ ಮಂದನಾ ಮತ್ತು ನಾಯಕಿ ಹರ್ವನ್​ಪ್ರೀತ್ ಕೌರ್ ಅವರಿಂದ ಸ್ಥಿರ ನಿರ್ವಹಣೆಯ ನಿರೀಕ್ಷೆ ಇದೆ. ಮಧ್ಯಮ ಕ್ರಮಾಂಕದಲ್ಲಿ ಆಲ್ರೌಂಡರ್ ದೀರ್ಪಿ ಶರ್ಮ ಬ್ಯಾಟಿಂಗ್ ತಂಡಕ್ಕೆ ಹೆಚ್ಚಿನ ಬಲ ತಂದಿದೆ. ವೇಗಿ ಶಿಖಾ ಪಾಂಡೆ ಕೂಡ ಆಸೀಸ್ ವಿರುದ್ಧ ಉತ್ತಮ ದಾಳಿ ನಡೆಸಿದ್ದರು. ನಾಯಕಿ ಹರ್ವನ್​ಪ್ರೀತ್ ಕೌರ್ ಹೇಳಿರುವ ಪ್ರಕಾರ, ಭಾರತ ತಂಡ ಈಗ ಕೆಲವೇ ಆಟಗಾರ್ತಿಯರನ್ನು ಅವಲಂಬಿಸದಿರುವುದು ಸಮಾಧಾನದ ವಿಚಾರ. -ಪಿಟಿಐ/ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net