

ದುಬೈ: ಅಡಿಲೇಡ್ ಟೆಸ್ಟ್‌ನಲ್ಲಿ ಶತಕ-ಅರ್ಧಶತಕ ಸಿಡಿಸಿದ ಆಸ್ಟ್ರೇಲಿಯಾದ ಮಾರ್ನಸ್ ಲಬುಶೇನ್ ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ನೂತನ ವಿಶ್ವ ನಂ. 1 ಬ್ಯಾಟರ್ ಎನಿಸಿದ್ದಾರೆ. ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 6ರಿಂದ 7ನೇ ಸ್ಥಾನಕ್ಕೆ ಕುಸಿತ ಕಂಡಿದ್ದರೆ, 5ನೇ ಸ್ಥಾನದಲ್ಲಿರುವ ರೋಹಿತ್ ಶರ್ಮ ಭಾರತದ ಅಗ್ರ ಶ್ರೇಯಾಂಕಿತ ಟೆಸ್ಟ್ ಬ್ಯಾಟ್ಸ್‌ಮನ್ ಆಗಿ ಮುಂದುವರಿದಿದ್ದಾರೆ.
ಇಂಗ್ಲೆಂಡ್ ನಾಯಕ ಜೋ ರೂಟ್ (897 ಅಂಕ) ಅಗ್ರಸ್ಥಾನದಿಂದ 2ನೇ ಸ್ಥಾನಕ್ಕೆ ಕುಸಿದಿದ್ದರೆ, ಲಬುಶೇನ್ (912) ಇದೇ ಮೊದಲ ಬಾರಿಗೆ ನಂ. 1 ಸ್ಥಾನಕ್ಕೇರಿದ್ದಾರೆ. ಆಶಸ್ ಸರಣಿ ಆರಂಭಕ್ಕೆ ಮುನ್ನ 4ನೇ ಸ್ಥಾನದಲ್ಲಿದ್ದ ಲಬುಶೇನ್, ಬ್ರಿಸ್ಬೇನ್ ಟೆಸ್ಟ್‌ನಲ್ಲಿ 74 ರನ್ ಗಳಿಸಿದ ಬಳಿಕ 2ನೇ ಸ್ಥಾನಕ್ಕೇರಿದ್ದರು. ಅಡಿಲೇಡ್‌ನಲ್ಲಿ ಅವರು 103 ಮತ್ತು 51 ರನ್ ಗಳಿಸಿದ್ದರು.
ಬೌಲರ್‌ಗಳಲ್ಲಿ ಆಸೀಸ್ ವೇಗಿ ಪ್ಯಾಟ್ ಕಮ್ಮಿನ್ಸ್ ಅಗ್ರಸ್ಥಾನದಲ್ಲಿದ್ದರೆ, ಭಾರತದ ಸ್ಪಿನ್ನರ್ ಆರ್. ಅಶ್ವಿನ್ 2ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಆಲ್ರೌಂಡರ್ಸ್ ರ‌್ಯಾಂಕಿಂಗ್‌ನಲ್ಲೂ ಅಶ್ವಿನ್ 2ನೇ ಸ್ಥಾನದಲ್ಲಿದ್ದಾರೆ.
ಟಿ20ಯಲ್ಲಿ ಬಾಬರ್ ಅಜಮ್ ನಂ. 1
ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಐಸಿಸಿ ಟಿ20 ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೆ ಮರಳಿದ್ದಾರೆ. ವಾರದ ಹಿಂದಷ್ಟೇ ಅಗ್ರಸ್ಥಾನದಿಂದ 3ನೇ ಸ್ಥಾನಕ್ಕೆ ಕುಸಿದಿದ್ದ ಅಜಮ್, ವಿಂಡೀಸ್ ವಿರುದ್ಧ ಕೊನೇ ಟಿ20 ಪಂದ್ಯದಲ್ಲಿ 79 ರನ್ ಗಳಿಸಿದ ಸಾಧನೆಯಿಂದ ತಲಾ 805 ಅಂಕದೊಂದಿಗೆ ಇಂಗ್ಲೆಂಡ್‌ನ ಡೇವಿಡ್ ಮಲಾನ್ ಜತೆಗೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಪಾಕಿಸ್ತಾನದ ಮತ್ತೋರ್ವ ಬ್ಯಾಟರ್ ಮೊಹಮದ್ ರಿಜ್ವಾನ್ 3ನೇ ಸ್ಥಾನಕ್ಕೇರಿದ್ದಾರೆ. 5ನೇ ಸ್ಥಾನದಲ್ಲಿರುವ ಕನ್ನಡಿಗ ಕೆಎಲ್ ರಾಹುಲ್ ಭಾರತದ ಅಗ್ರ ಶ್ರೇಯಾಂಕಿತ ಟಿ20 ಬ್ಯಾಟರ್ ಎನಿಸಿದ್ದಾರೆ.