

ದುಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಬುಧವಾರ ಪ್ರಕಟಿಸಿದ ಟೆಸ್ಟ್ ರ್ಯಾಂಕಿಂಗ್ನ ಬ್ಯಾಟಿಂಗ್ ವಿಭಾಗದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಟೆಸ್ಟ್ ತಜ್ಞರಾದ ಅಜಿಂಕ್ಯ ರಹಾನೆ ಹಾಗೂ ಚೇತೇಶ್ವರ ಪೂಜಾರ ರ್ಯಾಂಕಿಂಗ್ನಲ್ಲಿ ಕುಸಿತ ಕಂಡಿದ್ದಾರೆ. 928 ಪಾಯಿಂಟ್ಸ್ ಸಂಗ್ರಹಿಸಿರುವ ಕೊಹ್ಲಿ, ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್
ಮನ್ ಸ್ಟೀವನ್ ಸ್ಮಿತ್ಗಿಂತ (911) 17 ಪಾಯಿಂಟ್ಸ್ ಮುಂದಿದ್ದಾರೆ. 791 ಪಾಯಿಂಟ್ಸ್ ಹೊಂದಿರುವ ಪೂಜಾರ 6ನೇ ಸ್ಥಾನದಲ್ಲಿದ್ದರೆ, 759 ಪಾಯಿಂಟ್ಸ್ ಹೊಂದಿರುವ ರಹಾನೆ 9ನೇ ಸ್ಥಾನ ಪಡೆದಿದ್ದಾರೆ.
ಬೆನ್ನು ನೋವಿನಿಂದಾಗಿ ಕಳೆದ 4 ತಿಂಗಳಿನಿಂದ ಕ್ರಿಕೆಟ್ನಿಂದ ದೂರವಿದ್ದ ಜಸ್ಪ್ರೀತ್ ಬುಮ್ರಾ ಬೌಲಿಂಗ್ ವಿಭಾಗದಲ್ಲಿ 6ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಗುಜರಾತ್ ವೇಗಿ 794 ಅಂಕ ಹೊಂದಿದ್ದಾರೆ. ಸ್ಪಿನ್ನರ್ ಆರ್.ಅಶ್ವಿನ್ (772) ಹಾಗೂ ವೇಗಿ ಮೊಹಮದ್ ಶಮಿ (771) ಕ್ರಮವಾಗಿ 9ನೇ ಹಾಗೂ 10ನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ 25 ವರ್ಷದ ಬ್ಯಾಟ್ಸ್ಮನ್ ಮಾರ್ನಸ್ ಲಬುಶೇನ್ ಜೀವನಶ್ರೇಷ್ಠ 3ನೇ ಸ್ಥಾನಕ್ಕೇರಿದ್ದಾರೆ. ಇತ್ತೀಚೆಗೆ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ವಿರುದ್ಧದ 5 ಟೆಸ್ಟ್ ಪಂದ್ಯಗಳಿಂದ ಲಬುಶೇನ್ 896 ರನ್ ಸಿಡಿಸಿದ್ದರು.