ವಿಶ್ವ ನಂ.1 ಪಟ್ಟಕ್ಕೇರಿದ ಆಲ್ರೌಂಡರ್ ರವೀಂದ್ರ ಜಡೇಜಾ

jadeja icc world number 1
Published on

ದುಬೈ: ಭಾರತದ ಸ್ಟಾರ್ ಆಟಗಾರ ರವೀಂದ್ರ ಜಡೇಜಾ, ಐಸಿಸಿ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಬುಧವಾರ ನಂ.1 ಪಟ್ಟಕ್ಕೇರಿದ್ದಾರೆ. ಮೊಹಾಲಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಜಡೇಜಾ ಅಜೇಯ 175ರನ್ ಸಿಡಿಸಿದ್ದರು. ಜತೆಗೆ ಪಂದ್ಯದಲ್ಲಿ 9 ವಿಕೆಟ್ ಕಬಳಿಸಿದ್ದರು. ‘ಶ್ರೀಲಂಕಾ ಎದುರು ಜಡೇಜಾ ಉತ್ತಮ ನಿರ್ವಹಣೆ ತೋರಿದ್ದರು. ಇದು ನಂ.1 ಪಟ್ಟಕ್ಕೇರಲು ಸಹಕಾರಿಯಾಯಿತು’ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಬ್ಯಾಟಿಂಗ್ ವಿಭಾಗದಲ್ಲಿ 54ನೇ ಸ್ಥಾನದಿಂದ 37ನೇ ಸ್ಥಾನಕ್ಕೆ ಜಿಗಿದ ಜಡೇಜಾ, ಬೌಲಿಂಗ್‌ನಲ್ಲಿ 17ನೇ ಸ್ಥಾನ ಪಡೆದಿದ್ದಾರೆ. ಶ್ರೀಲಂಕಾ ಎದುರು ಜಡೇಜಾ ಆಲ್ರೌಂಡ್ ನಿರ್ವಹಣೆ ಮೂಲಕ ಗಮನಸೆಳೆದಿದ್ದರು. 2021ರ ಫೆಬ್ರವರಿಯಿಂದ ನಂ.1 ಪಟ್ಟದಲ್ಲಿದ್ದ ವೆಸ್ಟ್ ಇಂಡೀಸ್ ತಂಡದ ಜೇಸನ್ ಹೋಲ್ಡರ್ ಅವರನ್ನು ಹಿಂದಿಕ್ಕಿ ಜಡೇಜಾ ಈ ಸ್ಥಾನ ಅಲಂಕರಿಸಿದ್ದಾರೆ.

ಇದಕ್ಕೂ ಮೊದಲು ಜಡೇಜಾ, 2017ರ ಆಗಸ್ಟ್ ತಿಂಗಳಲ್ಲಿ ನಂ.1 ಪಟ್ಟಕ್ಕೇರಿದ್ದರು. ಕೇವಲ ಒಂದು ವಾರವಷ್ಟೇ ಈ ಸ್ಥಾನದಲ್ಲಿದ್ದರು. ಭಾರತ ತಂಡ ಮೂರೇ ದಿನಕ್ಕೆ ಜಯಿಸಿದ ಮೊಹಾಲಿ ಟೆಸ್ಟ್‌ನಲ್ಲಿ ಜಡೇಜಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದರು. ಆಲ್ರೌಂಡರ್ ವಿಭಾಗದಲ್ಲಿ ಭಾರತದ ಮತ್ತೋರ್ವ ಆಟಗಾರ ಆರ್.ಅಶ್ವಿನ್ ನಂ.3ನೇ ಸ್ಥಾನಕ್ಕೆ ಕುಸಿದರೆ, ಅಕ್ಷರ್ ಪಟೇಲ್ 14ನೇ ಸ್ಥಾನಕ್ಕಿಳಿದಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಅಕ್ಷರ್ ಪಟೇಲ್ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದರು.

ಬ್ಯಾಟಿಂಗ್ ವಿಭಾಗದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ನಂ.5ನೇ ಸ್ಥಾನಕ್ಕೇರಿದರೆ, ರೋಹಿತ್ ಶರ್ಮ 6ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ವಿಕೆಟ್ ಕೀಪರ್ ರಿಷಭ್ ಪಂತ್ (10) ಅಗ್ರ 10ರೊಳಗೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಆಸ್ಟ್ರೇಲಿಯಾದ ಮಾರ್ನಸ್ ಲಬುಶೇನ್ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net