ಒಂದೂವರೆ ದಿನದಲ್ಲೇ ಟೆಸ್ಟ್​ ಮುಗಿಸಿದ ಕೇಪ್​ಟೌನ್​ ಪಿಚ್​ಗೆ ಅತೃಪ್ತಿಕರ ರೇಟಿಂಗ್​ ನೀಡಿದ ಐಸಿಸಿ!

cape town web
Published on

ದುಬೈ: ಆತಿಥೇಯ ದಣ ಆಫ್ರಿಕಾ ವಿರುದ್ಧ ಭಾರತ ತಂಡ ಒಂದೂವರೆ ದಿನದಲ್ಲೇ ಗೆಲುವು ಸಾಧಿಸಿದ ಕೇಪ್​ಟೌನ್​ನ ನ್ಯೂಲ್ಯಾಂಡ್ಸ್​ ಮೈದಾನದ ಪಿಚ್​ಗೆ ಐಸಿಸಿ, "ಅತೃಪ್ತಿಕರ' ರೇಟಿಂಗ್​ ನೀಡಿದೆ. ಜತೆಗೆ ಒಂದು ಡಿಮೆರಿಟ್​ ಅಂಕವನ್ನೂ ನೀಡಲಾಗಿದೆ. ಕೇವಲ 107 ಓವರ್​ಗಳಲ್ಲೇ ಮುಗಿದ ಈ ಪಂದ್ಯ ಟೆಸ್ಟ್​ ಕ್ರಿಕೆಟ್​ ಇತಿಹಾಸದ ಅತ್ಯಂತ ಸಣ್ಣ ಪಂದ್ಯ ಎನಿಸಿದೆ. ಈ ಗೆಲುವಿನೊಂದಿಗೆ ಭಾರತ ಸರಣಿಯಲ್ಲಿ 1-1 ಸಮಬಲದ ಗೌರವ ಪಡೆದಿತ್ತು.

ಐಸಿಸಿಯ ಪಿಚ್​ ಮತ್ತು ಔಟ್​ಫೀಲ್ಡ್​ ಮಾನಿಟರಿಂಗ್​ ಪ್ರಕ್ರಿಯೆಯ ಅನ್ವಯ ಮ್ಯಾಚ್​ ರೆಫ್ರಿ ಕ್ರಿಸ್​ ಬ್ರಾಡ್​ ಈ ರೇಟಿಂಗ್​ ನೀಡಿದ್ದಾರೆ. "ನ್ಯೂಲ್ಯಾಂಡ್ಸ್​ ಪಿಚ್​ ಬ್ಯಾಟಿಂಗ್​ಗೆ ಕಠಿಣವಾಗಿತ್ತು. ಚೆಂಡು ಬೇಗನೆ ಬೌನ್ಸ್​ ಆಗುತ್ತಿತ್ತು ಮತ್ತು ಕೆಲವೊಮ್ಮೆ ಅಪಾಯಕಾರಿ ಎನಿಸುತ್ತಿತ್ತು. ಇದರಿಂದ ಹೊಡೆತಗಳನ್ನು ಆಡುವುದು ಕಠಿಣವಾಗಿತ್ತು. ಕೆಲ ಬ್ಯಾಟರ್​ಗಳಿಗೆ ಚೆಂಡು ಬಡಿದಿದೆ. ವಿಚಿತ್ರ ಬೌನ್ಸ್​ನಿಂದಾಗಿ ಹೆಚ್ಚಿನ ವಿಕೆಟ್​ ಉರುಳಿದವು' ಎಂದು ರೆಫ್ರಿ ಐಸಿಸಿಗೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಪಂದ್ಯದ ಮೊದಲ ದಿನವೇ ದಾಖಲೆಯ 23 ವಿಕೆಟ್​ಗಳು ಉರುಳಿದ್ದವು.

ಐಸಿಸಿ ಪ್ರತಿ ಟೆಸ್ಟ್​ ಪಂದ್ಯದ ಪಿಚ್​ಗಳಿಗೆ ಅತ್ಯುತ್ತಮ, ಉತ್ತಮ, ಸಾಧಾರಣ, ಅತೃಪ್ತಿಕರ, ಕೆಟ್ಟ ಮತ್ತು ಅನರ್ಹ ಎಂಬ ರೇಟಿಂಗ್​ ನೀಡುವುದು ಸಾಮಾನ್ಯವಾದ ಪ್ರಕ್ರಿಯೆ. ಇದರನ್ವಯ ಸಾಧಾರಣಕ್ಕಿಂತ ಕೆಳಗಿನ ಪಿಚ್​ಗಳಿಗೆ ಡಿಮೆರಿಟ್​ ಅಂಕಗಳನ್ನು ನೀಡಲಾಗುತ್ತದೆ. ಅತೃಪ್ತಿಕರಕ್ಕೆ 1, ಕೆಟ್ಟದ್ದಕ್ಕೆ 3 ಮತ್ತು ಅನರ್ಹಕ್ಕೆ 5 ಡಿಮೆರಿಟ್​ ಅಂಕ ನೀಡಲಾಗುತ್ತದೆ. ಈ ಅಂಕ 5 ವರ್ಷಗಳ ಕಾಲ ಸಕ್ರಿಯವಾಗಿರುತ್ತದೆ. ಯಾವುದಾದರು ಕ್ರೀಡಾಂಗಣದ ಅಂಕ 6ಕ್ಕೆ ತಲುಪಿದರೆ, ಅಂತಾರಾಷ್ಟ್ರೀಯ ಪಂದ್ಯ ಆಯೋಜನೆಯಿಂದ 12 ತಿಂಗಳು ನಿಷೇಧಿಸಲ್ಪಡುತ್ತದೆ.

ರೋಹಿತ್​ ಟೀಕಿಸಿದ್ದರು

ಪಂದ್ಯ ಗೆಲುವಿನ ನಡುವೆ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ ಕೇಪ್​ಟೌನ್​ ಪಿಚ್​ಅನ್ನು ಟೀಕಿಸಿದ್ದರು. "ನಾನು ಇಂಥ ಪಿಚ್​ಗಳಲ್ಲಿ ಆಡುವ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಅದೇ ರೀತಿ ಭಾರತೀಯ ಪಿಚ್​ಗಳ ಬಗ್ಗೆಯೂ ಮೌನವಾಗಿರಬೇಕಾಗುತ್ತದೆ. ಭಾರತದ ಪಿಚ್​ಗಳ ಬಗ್ಗೆ ಅತಿಯಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಯಾಕೆಂದರೆ ಟೆಸ್ಟ್​ ಕ್ರಿಕೆಟ್​ ಸವಾಲಿನದ್ದಾಗಿರುತ್ತದೆ. ಇಂಥ ಪಿಚ್​ಗಳೂ ಸವಾಲಿನದ್ದಾಗಿವೆ. ಭಾರತೀಯ ಪಿಚ್​ಗಳೂ ಇದೇ ರೀತಿಯ ಸವಾಲು ಒಡ್ಡುತ್ತವೆ. ಆದರೆ ಭಾರತದ ಪಿಚ್​ಗಳಲ್ಲಿ ಚೆಂಡು ತಿರುವು ಪಡೆಯಲಾರಂಭಿಸಿದ ಕೂಡಲೆ ಅಸಂಬದ್ಧ ಚರ್ಚೆಗಳು ಶುರುವಾಗುತ್ತವೆ' ಎಂದು ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ದಣ ಆಫ್ರಿಕಾ ತಂಡದ ಕೋಚ್​ ಶುಕ್ರಿ ಕಾನ್ರಾಡ್​ ಕೂಡ ಪಿಚ್​ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net