

ಸಿಡ್ನಿ: ಯುವ ಆಟಗಾರರ ಜತೆಗೆ ಅನೇಕ ಕ್ರಿಕೆಟಿಗರು ಲಾಭದಾಯಕ ಟಿ20 ಫ್ರಾಂಚೈಸಿ ಲೀಗ್‌ಗಳತ್ತ ಹೆಚ್ಚಿನ ಗಮನ ಹರಿಸುತ್ತಿರುವ ಹಿನ್ನೆಲೆಯಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಉತ್ತೇಜನ ನೀಡಲು ಐಸಿಸಿ, ₹125 ಕೋಟಿ (ಯುಎಸ್‌ಡಿ 15 ಮಿಲಿಯನ್) ಮೊತ್ತದ ನಿಧಿಯನ್ನು ಮೀಸಲಿಡಲು ನಿರ್ಧರಿಸಿದೆ. ಐಸಿಸಿ ಎದುರು ಕ್ರಿಕೆಟ್ ಆಸ್ಟ್ರೇಲಿಯಾ, ಈ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಐಸಿಸಿ ಮುಂದಿನ ಚೇರ್ಮನ್ ರೇಸ್‌ನಲ್ಲಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಸೇರಿ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಯೂ ಇದಕ್ಕೆ ಸಹಮತ ವ್ಯಕ್ತಪಡಿಸಿದೆ ಎನ್ನಲಾಗಿದೆ.
ಐಸಿಸಿಯ ಸ್ಥಾಪಿತ ನಿಧಿಯ ಹಣ ಟೆಸ್ಟ್ ಕ್ರಿಕೆಟ್ ಆಡಲಿರುವ ಆಟಗಾರರ ಪಂದ್ಯದ ಕನಿಷ್ಠ ಸಂಭಾವನೆಯನ್ನು ಹೆಚ್ಚಿಸಲಿದೆ. ಜತೆಗೆ ವಿದೇಶಿ ಸರಣಿಗಳಿಗೆ ತಂಡಗಳನ್ನು ಕಳುಹಿಸುವ ತಂಡದ ಪ್ರವಾಸ ಶುಲ್ಕದ ಜತೆಗೆ ಟೆಸ್ಟ್ ಕ್ರಿಕೆಟ್ ಆಡಲಿರುವ ಪ್ರತಿ ಆಟಗಾರರರಿಗೆ ಕನಿಷ್ಠ 8 ಲಕ್ಷ ರೂ. ಸಂಭಾವನೆ ನೀಡಲು ಇದು ನೆರವಾಗಲಿದೆ. ಇದು ಪ್ರಸ್ತುತ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಗೆ ಚೇತರಿಕೆ ನೀಡಲಿದೆ ಎನ್ನಲಾಗಿದೆ.
ಟೆಸ್ಟ್ ಕ್ರಿಕೆಟ್‌ಗೆ ಆದ್ಯತೆ ನೀಡುವ ಜತೆಗೆ ಆಟಗಾರರನ್ನು ಪ್ರೋತ್ಸಾಹಿಸಲು ಬಿಸಿಸಿಐ ಹೊಸ ಯೋಜನೆಯ ಅಡಿಯಲ್ಲಿ ಈಗಾಗಲೆ ಭಾರತದ ಟೆಸ್ಟ್ ಕ್ರಿಕೆಟಿಗರಿಗೆ ಬೋನಸ್ ರೂಪದಲ್ಲಿ ಹೆಚ್ಚಿನ ಸಂಭಾವನೆ ನೀಡುವ ಮಾದರಿಯನ್ನು ಪರಿಚಯಿಸಿದೆ. ವಾರ್ಷಿಕ ಶೇ.75 ಟೆಸ್ಟ್ ಪಂದ್ಯಗಳಲ್ಲಿ ಭಾರತದ ತಂಡವನ್ನು ಪ್ರತಿನಿಧಿಸಲಿರುವ ಆಟಗಾರರಿಗೆ ಪ್ರತಿ ಪಂದ್ಯಕ್ಕೆ ತಲಾ 45 ಲಕ್ಷ ರೂಪಾಯಿ ಜತೆಗೆ ಪಂದ್ಯದ ಶುಲ್ಕ ₹15 ಲಕ್ಷ ನೀಡಲಿದ್ದು, ಶೇ.50-70 ಪಂದ್ಯಗಳನ್ನು ಆಡಲಿರುವ ಆಟಗಾರರು ಪ್ರತಿ ಪಂದ್ಯಕ್ಕೆ ತಲಾ ₹30 ಲಕ್ಷ ಬೋನಸ್ ಪಡೆದುಕೊಳ್ಳಲಿದ್ದಾರೆ.