

ದುಬೈ: ಏಷ್ಯಾಕಪ್ ಟಿ20 ಚಾಂಪಿಯನ್ ಭಾರತ ತಂಡಕ್ಕೆ ಟ್ರೋಫಿ ವಿತರಿಸದ ವಿವಾದವನ್ನು ಬಿಸಿಸಿಐ ಶುಕ್ರವಾರ, ಐಸಿಸಿ ಸಭೆಯಲ್ಲಿ ಪ್ರಸ್ತಾಪಿಸಿತು. ಈ ಬಿಕ್ಕಟ್ಟು ಪರಿಹರಿಸಲು ನೆರವಾಗುವ ಭರವಸೆ ನೀಡಿರುವ ಐಸಿಸಿ, ಅಗತ್ಯಬಿದ್ದರೆ ಇದೇ ಕಾರ್ಯಕ್ಕಾಗಿ ಸಮಿತಿಯೊಂದನ್ನು ರಚಿಸುವುದಾಗಿಯೂ ತಿಳಿಸಿದೆ.
ಸೆಪ್ಟೆಂಬರ್ 28ಕ್ಕೆ ಫೈನಲ್ ಪಂದ್ಯದ ನಂತರ ಸೂರ್ಯಕುಮಾರ್ ಬಳಗಕ್ಕೆ ಟ್ರೋಫಿ ನೀಡದೆ, ಸ್ಟೇಡಿಯಂನಿಂದ ಪಲಾಯನ ಮಾಡಿದ್ದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಶುಕ್ರವಾರ ಮಧ್ಯಾಹ್ನದ ನಂತರ ಐಸಿಸಿ ಸಭೆಗೆ ಹಾಜರಾದ ಬೆನ್ನಲ್ಲೇ ಬಿಸಿಸಿಐ ಪ್ರತಿನಿಧಿಯಾಗಿ ಭಾಗವಹಿಸಿದ್ದ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಏಷ್ಯಾಕಪ್ ಟ್ರೋಫಿ ವಿವಾದವನ್ನು ಪ್ರಸ್ತಾಪಿಸಿದರು.
ಭಾರತಕ್ಕೆ ಅರ್ಹವಾಗಿ ಸಲ್ಲಬೇಕಾದ ಟ್ರೋಫಿಯನ್ನು ನಖ್ವಿ ಹಿಡಿದಿಟ್ಟುಕೊಂಡಿದ್ದಾರೆ ಎಂದು ದೂರಿದರು. ಆದರೆ ಈ ಬಗ್ಗೆ ಕೋಪದ ವಾತಾವರಣದ ಬದಲಾಗಿ ಸೌಹಾರ್ದಯುತವಾಗಿಯೇ ಚರ್ಚೆ ನಡೆಯಿತು. ಇದರಿಂದ ಈ ವಿವಾದ ಶೀಘ್ರದಲ್ಲೇ ಬಗೆಹರಿಯುವ ನಿರೀಕ್ಷೆ ಮೂಡಿದೆ.