

ನವದೆಹಲಿ: ಆರಂಭಿಕ ರೋಹಿತ್ ಶರ್ಮ, ವಿಕೆಟ್ ಕೀಪರ್ ರಿಷಭ್ ಪಂತ್ ಮತ್ತು ಸ್ಪಿನ್ನರ್ ಆರ್. ಅಶ್ವಿನ್ ಐಸಿಸಿ ಗುರುವಾರ ಪ್ರಕಟಿಸಿದ 2021ರ ವರ್ಷದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಟಿ20ಯಂತೆ ವರ್ಷದ ಏಕದಿನ ತಂಡದಲ್ಲೂ ಭಾರತದ ಆಟಗಾರರು ಸ್ಥಾನ ಪಡೆಯಲು ವಿಲರಾಗಿದ್ದಾರೆ. ಐಸಿಸಿ ವರ್ಷದ ಟೆಸ್ಟ್ ತಂಡಕ್ಕೆ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಮತ್ತು ವರ್ಷದ ಏಕದಿನ ತಂಡಕ್ಕೆ ಪಾಕಿಸ್ತಾನದ ಬಾಬರ್ ಅಜಮ್ ನಾಯಕರಾಗಿದ್ದಾರೆ.
2021ರಲ್ಲಿ ಕೇವಲ 6 ಏಕದಿನ ಪಂದ್ಯ ಆಡಿದ್ದರಿಂದ ಭಾರತೀಯರಿಗೆ ವರ್ಷದ ತಂಡದಲ್ಲಿ ಮನ್ನಣೆ ಲಭಿಸಿಲ್ಲ. ಮತ್ತೊಂದೆಡೆ ಕಳೆದ ವರ್ಷ 14 ಟೆಸ್ಟ್ ಆಡಿದ್ದರಿಂದ ಭಾರತದಿಂದ ಗರಿಷ್ಠ ಮೂವರಿಗೆ ವರ್ಷದ ಟೆಸ್ಟ್ ತಂಡದಲ್ಲಿ ಸ್ಥಾನ ಲಭಿಸಿದೆ. ರೋಹಿತ್ 2021ರ ಕ್ಯಾಲೆಂಡರ್ ವರ್ಷದಲ್ಲಿ 2 ಶತಕ ಸಹಿತ 906 ರನ್ ಬಾರಿಸಿದ್ದರೆ, ಪಂತ್ 748 ರನ್ ಸಿಡಿಸಿದ್ದರು. ಜತೆಗೆ ವಿಕೆಟ್ ಹಿಂದೆ 23 ಇನಿಂಗ್ಸ್‌ಗಳಲ್ಲಿ 39 ಬಲಿ ಪಡೆದಿದ್ದರು. ಅಶ್ವಿನ್ ಕಳೆದ ವರ್ಷ 9 ಟೆಸ್ಟ್‌ಗಳಲ್ಲಿ 54 ವಿಕೆಟ್ ಕಬಳಿಸಿದ್ದರು.
ಐಸಿಸಿ ವರ್ಷದ ಟೆಸ್ಟ್ ತಂಡ: ದಿಮುತ್ ಕರುಣರತ್ನೆ, ರೋಹಿತ್ ಶರ್ಮ, ಮಾರ್ನಸ್ ಲಬುಶೇನ್, ಜೋ ರೂಟ್, ಕೇನ್ ವಿಲಿಯಮ್ಸನ್ (ನಾಯಕ), ವಾದ್ ಅಲಮ್, ರಿಷಭ್ ಪಂತ್ (ವಿ.ಕೀ), ಆರ್. ಅಶ್ವಿನ್, ಕೈಲ್ ಜೇಮಿಸನ್, ಹಸನ್ ಅಲಿ, ಶಹೀನ್ ಷಾ ಅಫ್ರಿದಿ.
ಐಸಿಸಿ ವರ್ಷದ ಏಕದಿನ ತಂಡ: ಪೌಲ್ ಸ್ಟರ್ಲಿಂಗ್, ಜಾನೆಮನ್ ಮಲಾನ್, ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ವಾನ್ ಡರ್ ಡುಸೆನ್, ಶಕೀಬ್ ಅಲ್ ಹಸನ್, ಮುಶ್ಫೀಕರ್ ರಹೀಂ (ವಿ.ಕೀ), ವಾನಿಂದು ಹಸರಂಗ, ಮುಸ್ತಾಫಿಜುರ್ ರೆಹಮಾನ್, ಸಿಮಿ ಸಿಂಗ್, ದುಶ್ಮಂತ ಚಮೀರ.
ಮಹಿಳಾ ಏಕದಿನ ತಂಡದಲ್ಲಿ ಮಿಥಾಲಿ, ಜೂಲನ್
ಐಸಿಸಿ ವರ್ಷದ ಮಹಿಳಾ ಏಕದಿನ ತಂಡದಲ್ಲಿ ಭಾರತ ತಂಡದ ನಾಯಕಿ ಮಿಥಾಲಿ ರಾಜ್ ಮತ್ತು ವೇಗಿ ಜೂಲನ್ ಗೋಸ್ವಾಮಿ ಸ್ಥಾನ ಪಡೆದಿದ್ದಾರೆ. 39 ವರ್ಷದ ಮಿಥಾಲಿ 2021ರಲ್ಲಿ 6 ಅರ್ಧಶತಕಗಳ ಸಹಿತ 503 ರನ್ ಬಾರಿಸಿದ್ದರೆ, ಜೂಲನ್ 15 ವಿಕೆಟ್ ಕಬಳಿಸಿದ್ದರು. ಇಂಗ್ಲೆಂಡ್‌ನ ಹೀದರ್ ನೈಟ್ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಟಾಮಿ ಬೆಯುಮೊಂಟ್ ತಂಡದಲ್ಲಿರುವ ಮತ್ತೋರ್ವ ಇಂಗ್ಲೆಂಡ್ ಆಟಗಾರ್ತಿ. ದಕ್ಷಿಣ ಆಫ್ರಿಕಾದ ಲೈಜೆಲ್ ಲೀ, ಮರಿಜಾನ್ ಕಾಪ್, ಶಬ್ನಿಮ್ ಇಸ್ಮಾಯಿಲ್, ಆಸ್ಟ್ರೇಲಿಯಾದ ಅಲಿಸ್ಸಾ ಹೀಲಿ, ವೆಸ್ಟ್ ಇಂಡೀಸ್‌ನ ಹೀಲಿ ಮ್ಯಾಥ್ಯೂಸ್, ಅನಿಸಾ ಮೊಹಮದ್ ಮತ್ತು ಪಾಕಿಸ್ತಾನದ ಫಾತಿಮಾ ಸನಾ ತಂಡದಲ್ಲಿದ್ದಾರೆ.