2021-23ರ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅಂಕಪದ್ಧತಿ ಬದಲಾಯಿಸಿದ ಐಸಿಸಿ

icc wtc web
Published on

ದುಬೈ: ಮುಂದಿನ 2021-23ರ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಅಂಕಪದ್ಧತಿ ಬದಲಾಗಲಿದ್ದು, ಪ್ರತಿ ಗೆಲುವಿಗೆ ಒಂದೇ ರೀತಿಯ ಅಂಕವನ್ನು ನೀಡಲಾಗುವುದು ಎಂದು ಐಸಿಸಿ ಮಧ್ಯಂತರ ಸಿಇಒ ಜೆಫ್​ ಅಲ್ಲರ್ಡೈಸ್ ತಿಳಿಸಿದ್ದಾರೆ.

ಹಾಲಿ ಅಂಕಪದ್ಧತಿಯ ಅನ್ವಯ ಪ್ರತಿ ಸರಣಿಗೆ 120 ಅಂಕಗಳಿದ್ದು, ಸರಣಿಯಲ್ಲಿ 2ರಿಂದ 5ರವರೆಗೆ ಪಂದ್ಯಗಳಿದ್ದಾಗ ಪ್ರತಿ ಗೆಲುವಿಗೆ ಸಿಗುವ ಅಂಕವೂ 60ರಿಂದ 24ರವರೆಗೆ ಬದಲಾಗುತ್ತಿದೆ. ಆದರೆ ಇನ್ನು ಪ್ರತಿ ಗೆಲುವಿಗೆ ಒಂದೇ ಸಂಖ್ಯೆಯ ಅಂಕ ಸಿಗಲಿದ್ದು, ಅಂತಿಮವಾಗಿ ಒಟ್ಟು ಅಂಕಕ್ಕೆ ಬದಲಾಗಿ ಶೇಕಡಾವಾರು ಲೆಕ್ಕಾಚಾರದಲ್ಲಿ ಅಂಕಪಟ್ಟಿಯಲ್ಲಿ ಸ್ಥಾನ ನಿರ್ಣಯ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

2019-21ರ ಸಾಲಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಪ್ರತಿ ತಂಡಕ್ಕೂ 6 ಸರಣಿಗಳಿದ್ದು, ಪ್ರತಿ ಸರಣಿಯಲ್ಲೂ ಗರಿಷ್ಠ 120 ಅಂಕದಂತೆ ಒಟ್ಟು 720 ಅಂಕ ಬಾಚಿಕೊಳ್ಳುವ ಅವಕಾಶವಿತ್ತು. ಕರೊನಾ ಹಾವಳಿಗೆ ಮುನ್ನ ಒಟ್ಟು ಅಂಕದ ಅನ್ವಯ ಸ್ಥಾನ ನಿರ್ಣಯ ಮಾಡಲಾಗುತ್ತಿದ್ದರೂ, ಕರೊನಾದಿಂದಾಗಿ ಕೆಲ ಸರಣಿಗಳು ರದ್ದುಗೊಂಡ ಬಳಿಕ ಶೇಕಡಾವಾರು ಅಂಕಗಳಿಕೆಯ ಆಧಾರದಲ್ಲಿ ಸ್ಥಾನ ನಿರ್ಣಯ ಮಾಡಲಾಗಿತ್ತು. ಇದರಿಂದಾಗಿ ನ್ಯೂಜಿಲೆಂಡ್ ತಂಡ ಒಂದು ಸರಣಿಯಲ್ಲಿ ಆಡದಿದ್ದರೂ ಮತ್ತು ಒಟ್ಟು ಅಂಕಗಳಿಕೆಯಲ್ಲಿ ಹಿಂದಿದ್ದರೂ, ಶೇಕಡಾವಾರು ಅಂಕಗಳಿಕೆಯಲ್ಲಿ ಮೇಲುಗೈ ಸಾಧಿಸಿ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು.

ನ್ಯೂಜಿಲೆಂಡ್ ಫೈನಲ್‌ಗೇರಿದ್ದನ್ನು ಗಮನಿಸಿದಾಗ ಶೇಕಡಾವಾರು ಲೆಕ್ಕಾಚಾರ ನ್ಯಾಯೋಚಿತವಾದುದು ಎಂಬುದು ಸ್ಪಷ್ಟವಾಗಿದೆ ಎಂದವರು ತಿಳಿಸಿದ್ದಾರೆ. ಚಾಂಪಿಯನ್‌ಷಿಪ್‌ನ ನಡುವೆ ಅಂಕಪದ್ಧತಿ ಬದಲಾಯಿಸಿದ್ದು ಸರಿಯಾಗಿ ಕಾಣಿಸದಿದ್ದರೂ, ಕರೊನಾ ಹಾವಳಿಯ ನಡುವೆ ಅತ್ಯುತ್ತಮವಾದ 2 ತಂಡಗಳೇ ಫೈನಲ್‌ಗೇರುವುದನ್ನು ನಾವು ಖಾತ್ರಿಪಡಿಸಬೇಕಾಗಿತ್ತು ಎಂದಿದ್ದಾರೆ.

ಪ್ರತಿ ಸರಣಿಯಲ್ಲಿ 120 ಅಂಕ ನೀಡುವ ಪದ್ಧತಿಯಿಂದಾಗಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಸರಣಿಯಲ್ಲಿ ಪ್ರತಿ ಗೆಲುವಿಗೆ 60 ಅಂಕ ಗಳಿಸಿದ್ದರೆ, ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಸರಣಿಯಲ್ಲಿ ಪ್ರತಿ ಗೆಲುವಿಗೆ 30 ಅಂಕ ಪಡೆದಿತ್ತು. ಇದು ವಿಚಿತ್ರವಾಗಿ ಕಂಡಿತ್ತು. ಆದರೆ ಇನ್ನು ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ವಿರುದ್ಧದ ಗೆಲುವಿಗೆ ಒಂದೇ ಸಂಖ್ಯೆಯ ಅಂಕ ಸಿಗಲಿದೆ. ಆದರೆ ಈ ಅಂಕ ಎಷ್ಟು ಎಂಬುದನ್ನು ಐಸಿಸಿ ಇನ್ನಷ್ಟೇ ಪ್ರಕಟಿಸಬೇಕಾಗಿದೆ. ಆಗಸ್ಟ್‌ನಲ್ಲಿ ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯೊಂದಿಗೆ 2021-23ರ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ಗೆ ಚಾಲನೆ ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net