

ನವದೆಹಲಿ: ಕಗ್ಗಂಟಾಗಿ ಉಳಿದಿರುವ ಚೇರ್ಮನ್ ಆಯ್ಕೆ ಕುರಿತಂತೆ ಗುರುವಾರ ನಡೆಯಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಸಭೆಯಲ್ಲಿ ಪ್ರಮುಖ ವಿಷಯವಾಗಿ ಚರ್ಚೆ ನಡೆಯಲಿದೆ. ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಯಲಿದೆ. ಆಸ್ಟ್ರೇಲಿಯಾದಲ್ಲಿ ನಿಗದಿಯಾಗಿರುವ ಟಿ20 ವಿಶ್ವಕಪ್ ಆಯೋಜನೆ ಕುರಿತಂತೆ ಮುಂದಿನ ತಿಂಗಳು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಐಸಿಸಿ ಈಗಾಗಲೇ ಸ್ಪಷ್ಟಪಡಿಸಿರುವುದರಿಂದ ಈ ಕುರಿತು ಚರ್ಚೆ ನಡೆಯುವ ಸಾಧ್ಯತೆಗಳು ಕಡಿಮೆ. ಇದೀಗ ಬಹುಮುಖ್ಯವಾಗಿ ಚೇರ್ಮನ್ ಆಯ್ಕೆಗಾಗಿ ದಿನಾಂಕ ನಿಗದಿಪಡಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
‘ಈಗ ಏನು ಹೇಳಲು ಸಾಧ್ಯವಿಲ್ಲ. ಅಧ್ಯಕ್ಷ ಸ್ಥಾನದ ಚುನಾವಣೆ ದಿನಾಂಕ (ಆಯ್ಕೆ) ಪ್ರಕಟಿಸುವ ಸಾಧ್ಯತೆ ತೀರ ಕಡಿಮೆ. ಆದರೆ, ನೂತನ ಚೇರ್ಮನ್ ಆಯ್ಕೆಯೇ ಸಭೆಯಲ್ಲಿ ಪ್ರಧಾನವಾಗಲಿದೆ’ ಎಂದು ಐಸಿಸಿ ಮಂಡಳಿ ಸದಸ್ಯರೊಬ್ಬರು ಹೇಳಿಕೊಂಡಿದ್ದಾರೆ. ಸದ್ಯ ಈ ಹುದ್ದೆಯಲ್ಲಿ ಭಾರತದ ಶಶಾಂಕ್ ಮನೋಹರ್ ಇದ್ದಾರೆ. ‘ಸದಸ್ಯರುಗಳು ಸದ್ಯ ತಮ್ಮ ದೇಶಗಳಲ್ಲಿ ಇರುವ ಪರಿಸ್ಥಿತಿ ಕುರಿತು ಮಾಹಿತಿ ನೀಡಲಿದ್ದು, ಸದ್ಯಕ್ಕೆ ಬೇರೆ ಯಾವುದೇ ವಿಷಯದ ಬಗ್ಗೆ ಚರ್ಚೆ ನಡೆಸಲಾಗುವುದಿಲ್ಲ’ ಎಂದು ಹೇಳಿದ್ದಾರೆ.
ಚೇರ್ಮನ್ ಆಯ್ಕೆ ಕಗ್ಗಂಟು: ಚೇರ್ಮನ್ ಹುದ್ದೆಗೆ ಸ್ಪರ್ಧಿಸುವವರು ಕನಿಷ್ಠ 2 ಐಸಿಸಿ ಸಭೆಗಳಿಗೆ ಹಾಜರಾಗಿರಬೇಕು, ಜತೆಗೆ ಒಂದು ಮಂಡಳಿಯಿಂದ ನಾಮನಿರ್ದೇಶನಗೊಂಡಿದ್ದರಷ್ಟೇ ಈ ಹುದ್ದೆಗೆ ಸ್ಪರ್ಧಿಸಲು ಸಾಧ್ಯ. ಐಸಿಸಿ ಮಂಡಳಿಯಲ್ಲಿ 12 ಟೆಸ್ಟ್ ಆಡುವ ದೇಶಗಳು, 3 ಸಹಾಯಕ ಸದಸ್ಯರ ಸ್ವತಂತ್ರ ಮಹಿಳಾ ನಿರ್ದೇಶಕಿ (ಇಂದ್ರಾ ನೂಯಿ) ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನು ಸಾವ್ನೆ ಸೇರಿ ನೂತನ ಚೇರ್ಮನ್ ಆಯ್ಕೆ ಮಾಡಬೇಕಿದೆ. ಆದರೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಮತದಾನದ ಹಕ್ಕು ಇರುವುದಿಲ್ಲ.