ಐಸಿಸಿ ನಿಯಮಗಳು ಕನ್ನಡಕ್ಕೆ ತರ್ಜುಮೆ, ಲಾರ್ಡ್ಸ್ ವೆಬ್‌ಸೈಟ್‌ನಲ್ಲಿ ಕನ್ನಡದ ಕಂಪು

icc kannada
Published on

ಬೆಂಗಳೂರು: ಕ್ರಿಕೆಟ್ ಎಂದರೆ ಒಂದು ಕಾಲದಲ್ಲಿ ಇಂಗ್ಲಿಷರ ಆಟ ಎಂದೇ ಹೆಸರಾಗಿತ್ತು. ಕಾಲಕ್ರಮೇಣ ಈ ಕ್ರಿಕೆಟ್ ಎಂಬುದು ವೃತ್ತಿಪರವಾಗಿ ಬೆಳೆದು ಇಂದು ವಿಶ್ವದೆಲ್ಲೆಡೆ ಪಸರಿಸಿದೆ. ಅದರಲ್ಲೂ ಭಾರತೀಯರ ಪಾಲಿಗೆ ಕ್ರಿಕೆಟ್ ಧರ್ಮವಾಗಿದೆ. ಇಂಗ್ಲಿಷ್ ಬಲ್ಲವರಿಗಷ್ಟೇ ಮತ್ತು ನಗರ ಪ್ರದೇಶದವರಿಗೆ ಮೀಸಲಾಗಿದ್ದ ಕ್ರಿಕೆಟ್ ಇಂದು ನನ್ನ ವ್ಯಾಪ್ತಿಯನ್ನು ಗ್ರಾಮೀಣದ ಪ್ರದೇಶದ ಗಲ್ಲಿಗಲ್ಲಿಗೂ ಹರಡಿದೆ. ಕ್ರಿಕೆಟ್ ಇರಲಿ, ಯಾವುದೇ ಕ್ರೀಡೆಗಳಿರಲಿ ಅಂಪೈರ್, ರೆಫ್ರಿಗಳ ಪಾತ್ರ ಬಹುಮುಖ್ಯವಾಗಿರುತ್ತದೆ. ಕ್ರೀಡೆ ಮೇಲೆ ಆಳವಾದ ಜ್ಞಾನದ ಜತೆಗೆ ಕ್ರೀಡೆಯ ನಿಯಮಾವಳಿಗಳ ಬಗ್ಗೆಯೂ ತಿಳಿದುಕೊಂಡಿರಬೇಕು. ಇಂಗ್ಲಿಷ್‌ರ ಆಟ ಎಂದು ಕರೆಸಿಕೊಂಡಿರುವ ಕ್ರಿಕೆಟ್‌ನ ನಿಯಮಾವಳಿ ಸಂಪೂರ್ಣ ಇಂಗ್ಲಿಷ್ ಮಯವಾಗಿದ್ದ ನಡುವೆ, 1998ರಲ್ಲೇ ಅದನ್ನು ಕನ್ನಡಕ್ಕೆ ಮೊದಲ ಬಾರಿಗೆ ತರ್ಜುಮೆ ಮಾಡಿದ್ದವರು ವಿನಾಯಕ ಕುಲಕರ್ಣಿ. ಇದೀಗ 2019ರಲ್ಲಿ ತಿದ್ದುಪಡಿಯಾದ ಐಸಿಸಿ ನಿಯಮಾವಳಿಯನ್ನು ಮತ್ತೊಮ್ಮೆ ಅನುವಾದಿಸಲಾಗಿದೆ. ಜತೆಗೆ ಪ್ರತಿಷ್ಠಿತ ಲಾರ್ಡ್ಸ್ ವೆಬ್‌ಸೈಟ್‌ನಲ್ಲಿ ಕನ್ನಡದಲ್ಲೂ ಕ್ರಿಕೆಟ್ ನಿಯಮಾವಳಿಗಳು ಸಿಗುವಂತೆ ಮಾಡಿದ್ದಾರೆ 65 ವರ್ಷದ ವಿನಾಯಕ ಕುಲಕರ್ಣಿ.

ಕೇವಲ 4 ಭಾಷೆಗಳಲ್ಲಿದೆ ಕ್ರಿಕೆಟ್ ನಿಯಮಾವಳಿ
ಕ್ರಿಕೆಟ್‌ನಲ್ಲಿ ಇಂಗ್ಲಿಷ್ ಪ್ರಧಾನ ಭಾಷೆಯಾಗಿದ್ದರೂ ಆಯಾ ದೇಶಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ವೀಕ್ಷಕ ವಿವರಣೆ ಕೇಳುತ್ತಾ ಬಂದಿದ್ದೇವೆ. ಆದರೆ, ಕ್ರಿಕೆಟ್ ಸಂಬಂಧಿತ ನಿಯಮಾವಳಿಗಳು ಮಾತ್ರ ಇದುವರೆಗೂ ಇಂಗ್ಲಿಷ್‌ನಲ್ಲಿಯೇ ಇದ್ದವು. ಸ್ಥಳೀಯ ಭಾಷಿಗರು ಕೂಡ ಇಂಗ್ಲಿಷ್‌ನಲ್ಲಿರುವ ನಿಯಮಾವಳಿಗಳನ್ನೇ ಅವಲಂಬಿಸಬೇಕಾಗಿತ್ತು. ಆದರೆ, ಕರ್ನಾಟಕದ ಅಂಪೈರ್‌ಗಳು ಇಂಗ್ಲಿಷ್ ಹಾಗೂ ಕನ್ನಡ ಭಾಷೆಯಲ್ಲಿ ಕ್ರಿಕೆಟ್ ನಿಯಮಾವಳಿಗಳನ್ನು ಓದಿಕೊಳ್ಳುವ ಅವಕಾಶ ಲಭಿಸಿದೆ.

1998ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಕ್ರಿಕೆಟ್‌ನಲ್ಲಿ ಕೆಲವೊಂದು ಬದಲಾವಣೆ, ತಿದ್ದುಪಡಿ ಒಳಗೊಂಡಂತೆ ನೂತನ ನಿಯಮಾವಳಿ ಜಾರಿಗೆ ತಂದಿತು. ಇದರ ಬೆನ್ನಲ್ಲೇ ಇಂಗ್ಲಿಷ್‌ನಲ್ಲಿದ್ದ ನಿಯಮಾವಳಿಗಳನ್ನು ಕನ್ನಡಕ್ಕೆ ಅನುವಾದಿಸಿ ಕರ್ನಾಟಕದ ಅಂಪೈರ್‌ಗಳಿಗೆ ಸುಲಭವಾಗುವಂತೆ ಮಾಡಿದವರು ವಿನಾಯಕ ಕುಲಕರ್ಣಿ. ಬಳಿಕ 2017ರಲ್ಲೂ ಮತ್ತೊಮ್ಮೆ ಐಸಿಸಿ ನಿಯಮಗಳಿಗೆ ತಿದ್ದುಪಡಿ ತಂದರೆ, 2019ರಲ್ಲಿ ಕೆಲವೊಂದು ಪರಿಷ್ಕರಣೆಗಳನ್ನು ಮಾಡಲಾಯಿತು. ಇದರ ಬೆನ್ನಲ್ಲೇ ವಿನಾಯಕ ಕುಲಕರ್ಣಿ ಐಸಿಸಿ ಮಾದರಿಯಲ್ಲಿಯೇ ಕನ್ನಡಕ್ಕೆ ಅನುವಾದಿಸುವುದನ್ನು ಮಾತ್ರ ಮರೆಯಲಿಲ್ಲ.

ಕನ್ನಡದಲ್ಲಿ ರಚಿತವಾಗಿರುವ 125 ಪುಟಗಳ ನಿಯಮಾವಳಿಯನ್ನು ಐಸಿಸಿ ಲಾರ್ಡ್ಸ್ ಡಾಟ್ ಕಾಮ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. 2019ರ ಡಿಸೆಂಬರ್‌ನಿಂದಲೂ ಕನ್ನಡದಲ್ಲಿರುವ ಐಸಿಸಿ ಕಾನೂನು ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಇಂಗ್ಲಿಷ್ ಬಿಟ್ಟರೆ, ಕನ್ನಡ, ಹಿಂದಿ ಹಾಗು ್ರೆಂಚ್ ಭಾಷೆಯನ್ನು ಐಸಿಸಿ ನಿಯಮಾವಳಿಗಳನ್ನು ಬರೆಯಲಾಗಿದೆ.

ವಿನಾಯಕ ಕುಲಕರ್ಣಿ ಶ್ರಮ
ಪ್ರತಿಷ್ಠಿತ ಲಾರ್ಡ್ಸ್ ಡಾಟ್ ಕಾಮ್‌ನಲ್ಲಿ ಕನ್ನಡದ ಕ್ರಿಕೆಟ್ ನಿಯಮಾವಳಿ ಲಭ್ಯವಾಗಲು ವಿನಾಯಕ ಕುಲಕರ್ಣಿ ಅವರ ಶ್ರಮ ಸಾಕಷ್ಟಿದೆ. ಕ್ರಿಕೆಟ್‌ನಲ್ಲಿರುವ ತಾಂತ್ರಿಕ ಭಾಷೆಗೆ ಕನ್ನಡದಲ್ಲಿ ಶಬ್ದಗಳನ್ನು ಹುಡುಕಿದ್ದಾರೆ. ಕ್ಯಾಚ್ ಹಿಡಿಯುವುದು, ಬೌಲಿಂಗ್ ಮಾಡುವುದು, ಹೀಗೆ ಕೆಲವೊಂದು ಇಂಗ್ಲಿಷ್ ಪದಗಳನ್ನು ಉಳಿಸಿಕೊಂಡಿದ್ದರೆ, ವಿಕೆಟ್ ಕೀಪಿಂಗ್‌ಗೆ ಗುಟ್ಟ ರಕ್ಷಕ, ಬೌಲ್‌ಗೆ ಚೆಂಡು, ಕ್ಯಾಪ್ಟನ್-ಕಾಪ್ಟನ್ ಎಂದು ಕನ್ನಡ ಪದಗಳನ್ನು ನೀಡಿರುವುದಾಗಿ ವಿನಾಯಕ ಕುಲಕರ್ಣಿ ‘ವಿಜಯವಾಣಿ’ಗೆ ತಿಳಿಸಿದರು.

ಯಾರು ಈ ವಿನಾಯಕ ಕುಲಕರ್ಣಿ?
ಬೆಳಗಾವಿಯ ಅಥಣಿಯವರಾದ ವಿನಾಯಕ ನಾರಾಯಣರಾವ್ ಕುಲಕರ್ಣಿ, ಕಳೆದ 40 ವರ್ಷಗಳಿಂದಲೂ ಅಂಪೈರ್ ವೃತ್ತಿಯಲ್ಲಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿಎಸ್‌ಸಿ ಪದವಿ ಪಡೆದು ಸ್ಟೇಟ್ ಬ್ಯಾಂಕ್‌ನಲ್ಲಿ ಉದ್ಯೋಗಕ್ಕೆ ಸೇರಿದರು. 1975ರಲ್ಲಿ ಮಹಾರಾಷ್ಟ್ರ ಕರಾಡ್‌ನಲ್ಲಿ ಉದ್ಯೋಗದಲ್ಲಿದ್ದ ವೇಳೆ ಎಂಜಿ ದೇಶಪಾಂಡೆ ಮಾರ್ಗದರ್ಶನದಲ್ಲಿ ಮೊದಲ ಬಾರಿಗೆ ಅಂಪೈರ್ ಆಗಿ ಕಾರ್ಯನಿರ್ವಹಿಸಿದರು. ಇದರಿಂದಾಗಿ 1978 ಮಹಾರಾಷ್ಟ್ರ ರಾಜ್ಯದ ಅಂಪೈರ್ ಪ್ಯಾನಲ್ ಸೇರ್ಪಡೆಗೊಂಡಿದ್ದರು. 1984ರಲ್ಲಿ ಬೆಂಗಳೂರಿಗೆ ವರ್ಗವಾದ ಬಳಿಕ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯೊಂದಿಗೆ ಒಡನಾಟ ಮುಂದುವರಿಸಿದರು. ಸ್ಟೇಟ್‌ಬ್ಯಾಂಕ್ ಉದ್ಯೋಗದ ಜತೆಗೆ 1990ರಲ್ಲಿ ಬಿಆರ್ ಕೇಶವಮೂರ್ತಿ ಮಾರ್ಗದರ್ಶನದಲ್ಲಿ ಅಂಪೈರ್ ವೃತ್ತಿ ಮುಂದುವರಿಸಿದರು. ಅದೇ ವರ್ಷ ಬಿಸಿಸಿಐ ವತಿಯಿಂದ ನಡೆದ ಅಂಪೈರ್ ಪರೀಕ್ಷೆಯಲ್ಲಿ ಪಾಸಾದ ಅವರು, ಅದೇ ವರ್ಷ ರಣಜಿ ೈನಲ್ ಪಂದ್ಯದಲ್ಲಿ ಕಾರ್ಯನಿರ್ವಹಿಸಿದ್ದರು. 1999ರಲ್ಲಿ ಪುಣೆಯಲ್ಲಿ ನಡೆದ ಭಾರತ-ಶ್ರೀಲಂಕಾ ನಡುವಿನ ಪಂದ್ಯಕ್ಕೆ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವೊಂದಕ್ಕೆ ಅಂಪೈರ್ ಆಗಿದ್ದರು. ಇದುವರೆಗೂ 2 ಏಕದಿನ, 4 ಬಾರಿ ನಾಲ್ಕನೇ ಅಂಪೈರ್, 35 ಪ್ರಥಮ ದರ್ಜೆ, 100 ಮಂಡಳಿ ಪಂದ್ಯಗಳಿಗೆ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

*ಕ್ರಿಕೆಟ್ ನಿಯಮಾವಳಿ ಸ್ಥಳೀಯ ಭಾಷೆಯಲ್ಲಿ ಸಿಗಬೇಕು ಎನ್ನುವುದು ನನ್ನ ಆಶಯವಾಗಿತ್ತು. ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ತೆರಳಿದ್ದ ವೇಳೆ ಇಂಗ್ಲಿಷ್ ಬದಲಿಗೆ ಕನ್ನಡದಲ್ಲಿರುವ ನಿಯಮಾವಳಿ ನೀಡಿದರೆ ಸ್ಥಳೀಯ ಅಂಪೈರ್‌ಗಳು ಬೇಗ ಅರ್ಥಮಾಡಿಕೊಳ್ಳುತ್ತಾರೆ. ಇದರಿಂದ ಹೆಚ್ಚು ಕನ್ನಡಿಗರಿಗೆ ಅನುಕೂಲವಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಎಂಸಿಸಿ ಲಾರ್ಡ್ಸ್ ವೆಬ್‌ಸೈಟ್‌ನಲ್ಲಿ ಕನ್ನಡದ ಅನುವಾದವನ್ನು ಪ್ರಕಟಿಸಿದೆ.
| ವಿನಾಯಕ ಕುಲಕರ್ಣಿ ಅನುವಾದಕರು, ಅಂಪೈರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net