

ದುಬೈ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ತಂಡಗಳ ಸಂಖ್ಯೆಯನ್ನು 16ರಿಂದ 20ಕ್ಕೆ ಏರಿಸಲು ಐಸಿಸಿ ಚಿಂತನೆ ನಡೆಸಿದೆ. ಈ ಮೂಲಕ ಟಿ20 ಕ್ರಿಕೆಟ್ ಅನ್ನು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ವಿಸ್ತರಿಸುವ ಗುರಿಯನ್ನು ಐಸಿಸಿ ಹೊಂದಿದೆ. ಭಾರತದಲ್ಲಿ ಈ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಪೂರ್ವನಿಗದಿಯಂತೆ 16 ತಂಡಗಳೇ ಆಡಲಿದ್ದು, 2024ರ ಆವೃತ್ತಿಗೆ 4 ಹೊಸ ತಂಡಗಳನ್ನು ಸೇರಿಸಲು ಐಸಿಸಿ ಯೋಜನೆ ಹಾಕಿಕೊಂಡಿದೆ. ಈ 20 ತಂಡಗಳನ್ನು ತಲಾ 5ರಂತೆ 4 ಗುಂಪುಗಳಲ್ಲಿ ವಿಭಾಗಿಸಲಾಗುವುದು ಎಂದೂ ಹೇಳಲಾಗಿದೆ.
ಕ್ರಿಕೆಟ್ ಆಟವನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸಲು ಟಿ20 ಪ್ರಕಾರವೇ ಪ್ರಮುಖ ಅಸವಾಗಿದ್ದು, ಈ ಹಿಂದೆಯೂ ಟಿ20 ವಿಶ್ವಕಪ್ ತಂಡಗಳ ಸಂಖ್ಯೆ ವಿಸ್ತರಿಸುವ ಬಗ್ಗೆ ಚರ್ಚೆ ನಡೆದಿತ್ತು. ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಆಡುವ ತಂಡಗಳ ಸಂಖ್ಯೆಯನ್ನು 2026ರ ಆವೃತ್ತಿಯಲ್ಲಿ 10ರಿಂದ 12ಕ್ಕೆ ಏರಿಸಲಾಗುವುದು ಎಂದು ಐಸಿಸಿ ಈಗಾಗಲೆ ಖಚಿತಪಡಿಸಿದೆ. ಮಹಿಳಾ ಏಕದಿನ ವಿಶ್ವಕಪ್‌ನಲ್ಲೂ 2029ರ ವೇಳೆಗೆ ತಂಡಗಳ ಸಂಖ್ಯೆಯನ್ನು 8ರಿಂದ 10ಕ್ಕೆ ಏರಿಸುವುದಾಗಿ ತಿಳಿಸಿದೆ.
2028 ಅಥವಾ 2032ರ ಒಲಿಂಪಿಕ್ಸ್‌ಗೆ ಕ್ರಿಕೆಟ್ ಆಟವನ್ನು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಐಸಿಸಿ ಪ್ರಯತ್ನ ನಡೆಸುತ್ತಿರುವ ಕಾರಣದಿಂದಲೂ ಜಾಗತಿಕ ಮಟ್ಟದಲ್ಲಿ ಕ್ರಿಕೆಟ್‌ಅನ್ನು ವಿಸ್ತರಿಸುವ ಅಗತ್ಯ ಎದುರಾಗಿದೆ. ಆದರೆ ಒಲಿಂಪಿಕ್ಸ್‌ಗೆ ಕ್ರಿಕೆಟ್‌ನ ಯಾವ ಪ್ರಕಾರವನ್ನು ಸೇರಿಸಲಾಗುತ್ತದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಟಿ10 ಕ್ರಿಕೆಟ್ ಪ್ರಕಾರವನ್ನು ಒಲಿಂಪಿಕ್ಸ್‌ಗೆ ಸೇರಿಸುವ ಬಗ್ಗೆಯೂ ಚರ್ಚೆಗಳು ನಡೆದಿವೆ. ಒಲಿಂಪಿಕ್ಸ್ ಕ್ರೀಡಾಕೂಟದ ಅವಧಿ ಕಡಿಮೆ ಇರುವುದರಿಂದ ಕಡಿಮೆ ತಂಡಗಳು ಮತ್ತು ಕಿರು ಪ್ರಕಾರ ಇದ್ದರೆ ಉತ್ತಮ ಎನ್ನಲಾಗಿದೆ.
ಏಕದಿನ ವಿಶ್ವಕಪ್‌ಗೆ 14 ತಂಡಗಳು?
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುವ ತಂಡಗಳ ಸಂಖ್ಯೆಯನ್ನು ಮತ್ತೆ 14ಕ್ಕೆ ಏರಿಸುವ ಬಗ್ಗೆಯೂ ಐಸಿಸಿ ಚಿಂತನೆ ನಡೆಸಿದೆ ಎನ್ನಲಾಗಿದೆ. 2007ರ ಏಕದಿನ ವಿಶ್ವಕಪ್‌ನಲ್ಲಿ ಗರಿಷ್ಠ 16 ತಂಡಗಳು ಆಡಿದ್ದವು. 2011ರಲ್ಲಿ ಇದು 14ಕ್ಕೆ ಇಳಿದಿತ್ತು. 2019ರಲ್ಲಿ 10ಕ್ಕೆ ಇಳಿದಿತ್ತು. 2023ರಲ್ಲೂ 10 ತಂಡಗಳಷ್ಟೇ ಆಡಲಿವೆ. ಹೆಚ್ಚಿನ ಏಕಪಕ್ಷೀಯ ಪಂದ್ಯಗಳನ್ನು ತಪ್ಪಿಸಿ, ಟೂರ್ನಿಯ ಸ್ಪರ್ಧಾತ್ಮಕತೆ ಹೆಚ್ಚಿಸಲು ತಂಡಗಳ ಸಂಖ್ಯೆ ಇಳಿಸಲಾಗಿತ್ತು. ಆದರೆ 2023ರ ನಂತರ ಮತ್ತೆ ತಂಡಗಳ ಸಂಖ್ಯೆ 14ಕ್ಕೆ ಏರುವ ಸಾಧ್ಯತೆ ಎದುರಾಗಿದೆ.