

ಲಂಡನ್: ಸೀಮಿತ ಓವರ್ ಕ್ರಿಕೆಟ್ ಪಂದ್ಯಕ್ಕೆ ಮಳೆ ಅಡಚಣೆ ತಂದಾಗ ಬಳಸಲಾಗುವ ಡಕ್ವರ್ತ್-ಲೂಯಿಸ್ ನಿಯಮವನ್ನು ರೂಪಿಸಿದ್ದ ಇಂಗ್ಲೆಂಡ್ನ ಗಣಿತ ತಜ್ಞ ಟೋನಿ ಲೂಯಿಸ್ ಬುಧವಾರ ನಿಧನ ಹೊಂದಿದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಸಹ ಗಣಿತ ತಜ್ಞ ಫ್ರಾಂಕ್ ಡಕ್ವರ್ತ್ ಜತೆಗೂಡಿ ಲೂಯಿಸ್ ರೂಪಿಸಿದ್ದ, ಅವರಿಬ್ಬರದೇ ಹೆಸರಿನ ಡಿ-ಎಲ್ ನಿಯಮ 1996-97ರಲ್ಲಿ ಜಿಂಬಾಬ್ವೆ-ಇಂಗ್ಲೆಂಡ್ ನಡುವಿನ ಏಕದಿನ ಪಂದ್ಯದಲ್ಲಿ ಮೊದಲ ಬಾರಿ ಬಳಕೆಯಾಗಿತ್ತು.
1999ರ ವಿಶ್ವಕಪ್ನಲ್ಲಿ ಐಸಿಸಿ ಅಧಿಕೃತವಾಗಿ ಈ ನಿಯಮವನ್ನು ಜಾರಿಗೆ ತಂದಿತ್ತು. ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ ಗಣಿತ ತಜ್ಞ ಸ್ಟೀವನ್ ಸ್ಟರ್ನ್ ಎಂಬುವವರು 2014ರಲ್ಲಿ ಈ ನಿಯಮವನ್ನು ಮತ್ತಷ್ಟು ಪರಿಷ್ಕರಿಸಿದ ಬಳಿಕ ಇದು ಡಕ್ವರ್ತ್-ಲೂಯಿಸ್-ಸ್ಟರ್ನ್ (ಡಿಎಲ್ಎಸ್) ಎಂದು ಬದಲಾಗಿದೆ. 2015ರ ವಿಶ್ವಕಪ್ನಿಂದ ಇದು ಬಳಕೆಯಲ್ಲಿದೆ.
ಟೋನಿ ಲೂಯಿಸ್ ಕ್ರಿಕೆಟ್ಗೆ ನೀಡಿರುವ ಕೊಡುಗೆ ಅಪಾರ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ. ಲಂಕಾಷೈರ್ನ ಬೋಲ್ಟನ್ನಲ್ಲಿ ಜನಿಸಿದ್ದ ಟೋನಿ ಲೂಯಿಸ್, ಶೆಫೀಲ್ಡ್ ವಿಶ್ವವಿದ್ಯಾಲಯದಲ್ಲಿ ಗಣಿತ ಮತ್ತು ಸಂಖ್ಯಾಶಾಸ್ತ್ರದಲ್ಲಿ ಪದವಿ ಪಡೆದಿದ್ದರು.
ಕ್ರಿಕೆಟ್ ಮತ್ತು ಗಣಿತಕ್ಕೆ ನೀಡಿದ ಕೊಡುಗೆಗಳಿಗಾಗಿ 2010ರಲ್ಲಿ ಲೂಯಿಸ್ ಮತ್ತು ಡಕ್ವರ್ತ್ಗೆ ಬ್ರಿಟನ್ನಲ್ಲಿ ಎಂಬಿಇ ಗೌರವ ಲಭಿಸಿತ್ತು. 80 ವರ್ಷದ ಫ್ರಾಂಕ್ ಡಕ್ವರ್ತ್ ಲಂಕಾಷೈರ್ನಲ್ಲೇ ನಿವೃತ್ತ ಜೀವನ ನಡೆಸುತ್ತಿದ್ದಾರೆ.
1992ರ ವಿಶ್ವಕಪ್ ವಿವಾದ ಸ್ಪೂರ್ತಿ
ಮೊದಲಿಗೆ ಕ್ರಿಕೆಟ್ ಪಂದ್ಯದಲ್ಲಿ ಮಳೆ ಬಂದಾಗ ಬಳಸಲಾಗುತ್ತಿದ್ದ ನಿಯಮ ಸಾಕಷ್ಟು ಲೋಪದೋಷಗಳಿಂದ ಕೂಡಿತ್ತು. 2ನೇ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡುವ ತಂಡ ಕಳೆದುಕೊಂಡ ವಿಕೆಟ್ ಪರಿಗಣನೆಗೆ ಬರುತ್ತಿರಲಿಲ್ಲ. 1992ರ ವಿಶ್ವಕಪ್ ಸೆಮಿಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ತಂಡ ಈ ನಿಯಮದಿಂದ ದೊಡ್ಡ ಹೊಡೆತ ತಿಂದಿತ್ತು. ಇಂಗ್ಲೆಂಡ್ ವಿರುದ್ಧದ ಆ ಪಂದ್ಯದಲ್ಲಿ 13 ಎಸೆತಗಳಲ್ಲಿ 22 ರನ್ ಗಳಿಸಬೇಕಾಗಿದ್ದಾಗ ಮಳೆ ಬಂದಿತ್ತು. ಬಳಿಕ ಮಳೆ ನಿಯಮ ಅಳವಡಿಸಿದಾಗ ದ. ಆಫ್ರಿಕಾ 1 ಎಸೆತದಲ್ಲೇ 21 ರನ್ ಗಳಿಸಬೇಕಾಗಿತ್ತು. ಈ ಘಟನೆಯ ಬಳಿಕ ಬ್ರಿಟನ್ ವಿವಿ ಗಣಿತ ಉಪನ್ಯಾಸಕರಾಗಿದ್ದ ಡಕ್ವರ್ತ್ ಮತ್ತು ಲೂಯಿಸ್ ಜತೆಗೂಡಿ ಹೊಸ ನಿಯಮವನ್ನು ರೂಪಿಸಲು ಆರಂಭಿಸಿದ್ದರು. ಯಾರಾದರೂ ಈಗಿರುವುದಕ್ಕಿಂತ ಉತ್ತಮ ನಿಯಮವನ್ನು ರೂಪಿಸಬೇಕಾಗಿದೆ. ಈ ಸಮಸ್ಯೆಗೆ ಗಣಿತಶಾಸ್ತ್ರದ ಮೂಲಕ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಆಗ ರೇಡಿಯೊದಲ್ಲಿ ಕೇಳಿಬಂದ ಮಾತಿನಿಂದ ಸ್ಪೂರ್ತಿ ಪಡೆದಿದ್ದೆವು’ ಎಂದು ಡಕ್ವರ್ತ್ ಹಿಂದೊಮ್ಮೆ ಹೇಳಿದ್ದರು. ಆದರೆ ಡಕ್ವರ್ತ್-ಲೂಯಿಸ್ ನಿಯಮವೂ ಕೂಡ ಹಲವು ಬಾರಿ ವಿವಾದಗಳನ್ನು ಸೃಷ್ಟಿಸಿದ ದೃಷ್ಟಾಂತಗಳಿವೆ. ಈ ನಿಯಮ ಸಾಮಾನ್ಯ ಕ್ರಿಕೆಟ್ ಪ್ರೇಮಿಗಳಿಗೆ ಅರ್ಥವಾಗುವುದಿಲ್ಲ ಎಂಬ ದೂರುಗಳೂ ಇವೆ.