ICC Champions Trophy: ಇಂದು ಇಂಗ್ಲೆಂಡ್​-ಅಫ್ಘಾನಿಸ್ತಾನ ಮಾಡು ಇಲ್ಲವೆ ಮಡಿ ಹೋರಾಟ

web eng vs afghan
Published on

ಲಾಹೋರ್​: ಆರಂಭಿಕ ಪಂದ್ಯದಲ್ಲಿ ಸೋಲು ಕಂಡಿರುವ ಇಂಗ್ಲೆಂಡ್​ ಮತ್ತು ಅಫ್ಘಾನಿಸ್ತಾನ ತಂಡಗಳು ಐಸಿಸಿ ಚಾಂಪಿಯನ್ಸ್​ ಟ್ರೋಫಿಯಲ್ಲಿ ಬುಧವಾರ ಮುಖಾಮುಖಿ ಆಗಲಿದ್ದು, ಸೆಮಿಫೈನಲ್​ ಆಸೆ ಜೀವಂತವಿಡಲು ಮಾಡು ಇಲ್ಲವೆ ಮಡಿ ಹೋರಾಟ ನಡೆಸಲಿವೆ.

ಇಂಗ್ಲೆಂಡ್​ ಮೊದಲ ಪಂದ್ಯದಲ್ಲಿ ಆಸ್ಟ್ರೆಲಿಯಾ ಎದುರು ಬೃಹತ್​ ಮೊತ್ತ ಪೇರಿಸಿಯೂ ಸೋಲು ಅನುಭವಿಸಿದ್ದರೆ, ಅಫ್ಘಾನಿಸ್ತಾನ ತಂಡ ದ. ಆಫ್ರಿಕಾಕ್ಕೆ ಮಣಿದಿತ್ತು. ಹೀಗಾಗಿ ಈ ಪಂದ್ಯದಲ್ಲೂ ಸೋತ ತಂಡ ಸೆಮೀಸ್​ ರೇಸ್​ನಿಂದ ಹೊರಬೀಳುವ ಅಪಾಯವನ್ನು ಹೊಂದಿದೆ.

ಕೆಲ ವರ್ಷಗಳ ಹಿಂದೆ ವೈಟ್​ ಬಾಲ್​ ಕ್ರಿಕೆಟ್​ನಲ್ಲಿ ಪ್ರಾಬಲ್ಯ ಸಾಧಿಸಿದ್ದ ಆಂಗ್ಲರು ಇದೀಗ ಅದೇ ನಿರ್ವಹಣೆ ಪುನರಾವರ್ತಿಸಲು ವಿಫಲರಾಗುತ್ತಿದ್ದಾರೆ. 2019ರ ವಿಶ್ವ ಚಾಂಪಿಯನ್​ ತಂಡ ಕಳೆದ ಪಂದ್ಯದಲ್ಲಿ ಆಸೀಸ್​ ಎದುರು 350 ಪ್ಲಸ್​ ಮೊತ್ತ ಪೇರಿಸಿದರೂ ಅದನ್ನು ರಕ್ಷಿಸಿಕೊಳ್ಳುವಲ್ಲಿ ವಿಫಲವಾಗಿತ್ತು. ಆಸೀಸ್​ ಪ್ರಮುಖ ವೇಗಿಗಳ ಗೈರಿನಲ್ಲಿ ಇಂಗ್ಲೆಂಡ್​ ಬ್ಯಾಟರ್​ಗಳು ಲಾಭ ಪಡೆದರೂ, ಬೌಲರ್​ಗಳು ಹೆಚ್ಚು ಪರಿಣಾಮಕಾರಿ ಎನಿಸಲಿಲ್ಲ. ಇದೀಗ ಆಫ್ಘನ್​ ವಿರುದ್ಧದ ಕಾದಾಟದಲ್ಲಿ ಇಂಗ್ಲೆಂಡ್​ ಬೌಲರ್​ಗಳು ನಿರ್ವಹಣೆ ಸುಧಾರಿಸಿಕೊಳ್ಳುವುದು ಅಗತ್ಯವಾಗಿದೆ. ಇನ್ನು ಬ್ಯಾಟಿಂಗ್​ ವಿಭಾಗದಲ್ಲಿ ಆರಂಭಿಕ ಫಿಲ್​ ಸಾಲ್ಟ್​ ಮತ್ತು ಹ್ಯಾರಿ ಬ್ರೂಕ್​ ಅಸ್ಥಿರ ನಿರ್ವಹಣೆಯೂ ಆಂಗ್ಲರಿಗೆ ಹಿನ್ನಡೆ ತಂದಿದೆ. ಪಾಕಿಸ್ತಾನದಲ್ಲಿ ಆಡಿದ ಟೆಸ್ಟ್​ ಸರಣಿಗಳಲ್ಲಿ ರನ್​ಮಳೆ ಹರಿಸಿರುವ ಬ್ರೂಕ್​, ಅದನ್ನೇ ಈಗ ಏಕದಿನದಲ್ಲೂ ಪುನರಾವರ್ತಿಸಬೇಕಾದ ಅಗತ್ಯವಿದೆ. ನಾಯಕ ಜೋಸ್​ ಬಟ್ಲರ್​ ಅಸ್ಥಿರ ನಿರ್ವಹಣೆಯೂ ಆಂಗ್ಲರಿಗೆ ಹೊಡೆತ ನೀಡಿದೆ.

ಆಘಾತ ನೀಡುವ ತವಕದಲ್ಲಿ ಆಫ್ಘನ್​

ಭಾರತದಲ್ಲಿ 2023ರಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ಇಂಗ್ಲೆಂಡ್​ಗೆ ಆಘಾತ ನೀಡಿದ್ದ ಅಫ್ಘಾನಿಸ್ತಾನ ಈ ಬಾರಿ ಮತ್ತೆ ಅದನ್ನೇ ಪುನರಾವರ್ತಿಸುವ ಹಂಬಲದಲ್ಲಿದೆ. ಟೂರ್ನಿಗೆ ಮುನ್ನ ಭಾರತ ಪ್ರವಾಸಕ್ಕೆ ಆಗಮಿಸಿದ್ದ ಇಂಗ್ಲೆಂಡ್​, ಸ್ಪಿನ್ನರ್​ಗಳ ಎದುರು ತಿಣುಕಾಡಿತ್ತು. ರಶೀದ್​ ಖಾನ್​, ನೂರ್​ ಅಹ್ಮದ್​ ಮತ್ತು ಮೊಹಮದ್​ ನಬಿ ಅವರಂಥ ಸ್ಪಿನ್​ ತ್ರಿವಳಿಗಳನ್ನು ಹೊಂದಿರುವ ಆಫ್ಘನ್​, ಇಂಗ್ಲೆಂಡ್​ ಬ್ಯಾಟರ್​ಗಳ ಎದುರು ಮೇಲುಗೈ ಸಾಧಿಸುವ ತವಕದಲ್ಲಿದೆ. 2024ರ ಟಿ20 ವಿಶ್ವಕಪ್​ನಲ್ಲಿ ಸೆಮಿಫೈನಲ್​ಗೇರಿದ್ದ ಆಫ್ಘನ್​, ಈಗಿನ ತಂಡದಲ್ಲೂ ಬಹುತೇಕ ಅದೇ ಆಟಗಾರರನ್ನು ಹೊಂದಿದೆ. ಆದರೆ ಏಕದಿನ ಕ್ರಿಕೆಟ್​ನಲ್ಲಿ ಬ್ಯಾಟರ್​ಗಳು ಪ್ರದರ್ಶಿಸಬೇಕಾದ ದೊಡ್ಡ ಇನಿಂಗ್ಸ್​ಗಳ ಕೊರತೆ ಎದುರಾಗಿದೆ. ಜತೆಗೆ ತನ್ನ ಕಾರ್ಯತಂತ್ರಗಳನ್ನೂ ಸಮರ್ಥವಾಗಿ ಕಾರ್ಯಗತಗೊಳಿಸಬೇಕಾಗಿದೆ.

ಕರ್ಸ್​ ಬದಲಿಗೆ ರೆಹನ್​

ಇಂಗ್ಲೆಂಡ್​ ಆಲ್ರೌಂಡರ್​ ಬೆಡನ್​ ಕರ್ಸ್​ ಕಾಲ್ಬೆರಳು ನೋವಿನಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಇಂಗ್ಲೆಂಡ್​ ತಂಡ ಲೆಗ್​ ಸ್ಪಿನ್ನರ್​ ರೆಹನ್​ ಅಹ್ಮದ್​ ಅವರನ್ನು ಸೇರಿಸಿಕೊಂಡಿದೆ. ಈ ಮೂಲಕ ಇಂಗ್ಲೆಂಡ್​ ತಂಡ ತನ್ನ ಸ್ಪಿನ್​ ಬೌಲಿಂಗ್​ ವಿಭಾಗಕ್ಕೆ ಹೆಚ್ಚಿನ ಬಲ ತುಂಬಿಸಿಕೊಂಡಿದೆ. ಆದಿಲ್​ ರಶೀದ್​ಗೆ ರೆಹನ್​ ಅಹ್ಮದ್​ ಉತ್ತಮ ಬೆಂಬಲ ಒದಗಿಸುವ ನಿರೀಕ್ಷೆ ಇದೆ. ಸ್ಪಿನ್​ ಬೌಲಿಂಗ್​ ಆಲ್ರೌಂಡರ್​ ಲಿಯಾಮ್​ ಲಿವಿಂಗ್​ಸ್ಟೋನ್​ ಒಬ್ಬರೇ ಇದುವರೆಗೆ ರಶೀದ್​ ಬೆಂಬಲಕ್ಕಿದ್ದರು.

*ಮುಖಾಮುಖಿ: 3

ಇಂಗ್ಲೆಂಡ್​: 2

ಅಫ್ಘಾನಿಸ್ತಾನ: 1

*ಆರಂಭ: ಮಧ್ಯಾಹ್ನ 2.30

*ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​.

ರನ್​ಮಳೆ ನಿರೀಕ್ಷೆ

ಲಾಹೋರ್​ನ ಗಡಾಫಿ ಸ್ಟೇಡಿಯಂ ಪಿಚ್​ ಇತ್ತೀಚೆಗಿನ ದಿನಗಳಲ್ಲಿ ಸಂಪೂರ್ಣ ಬ್ಯಾಟಿಂಗ್​ ಸ್ನೇಹಿ ಎನಿಸಿದೆ. ಕಳೆದ ಆಸೀಸ್​-ಇಂಗ್ಲೆಂಡ್​ ನಡುವಿನ ಪಂದ್ಯ ಇದಕ್ಕೊಂದು ತಾಜಾ ಉದಾಹರಣೆ. 2022ರ ನಂತರ ಇಲ್ಲಿ ನಡೆದಿರುವ 9 ಏಕದಿನ ಪಂದ್ಯಗಳಲ್ಲಿ 5ರಲ್ಲಿ ಚೇಸಿಂಗ್​ ಮಾಡಿದ ತಂಡವೇ ಜಯಿಸಿದೆ. ಈ ಪೈಕಿ 2ರಲ್ಲಿ 300 ಪ್ಲಸ್​ ಮೊತ್ತವನ್ನೇ ಚೇಸಿಂಗ್​ ಮಾಡಲಾಗಿದೆ. ಈ 9 ಪಂದ್ಯಗಳ ಸರಾಸರಿ ಮೊದಲ ಇನಿಂಗ್ಸ್​ ಮೊತ್ತ 297 ರನ್​ ಆಗಿದೆ. ಇಬ್ಬನಿ ಸಮಸ್ಯೆ ಕಾಡುವ ಭೀತಿ ಇರುವುದರಿಂದ ಟಾಸ್​ ಗೆದ್ದ ತಂಡದ ನಾಯಕ ಬೌಲಿಂಗ್​ ಆಯ್ದುಕೊಳ್ಳುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net