

ರಾವಲ್ಪಿಂಡಿ: ಮಾಜಿ ಚಾಂಪಿಯನ್ಗಳಾದ ಆಸ್ಟ್ರೆಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಮಂಗಳವಾರ ನಿಗದಿಯಾಗಿದ್ದ ಪಂದ್ಯ ಭಾರಿ ಮಳೆಯಿಂದಾಗಿ ಒಂದೂ ಎಸೆತವಿಲ್ಲದೆ ರದ್ದುಗೊಂಡಿದೆ. ಇದರಿಂದಾಗಿ ಉಭಯ ತಂಡಗಳು ತಲಾ ಒಂದು ಅಂಕ ಹಂಚಿಕೊಂಡಿವೆ. ಇದರಿಂದಾಗಿ ಬಿ ಗುಂಪಿನ ಸೆಮಿಫೈನಲ್ ಲೆಕ್ಕಾಚಾರವೂ ಬದಲಾವಣೆ ಕಂಡಿದೆ.
ರಾವಲ್ಪಿಂಡಿಯಲ್ಲಿ ಅನಿರೀತವಾಗಿ ಸುರಿದ ಭಾರಿ ಮಳೆಯಿಂದಾಗಿ ಕನಿಷ್ಠ ಟಾಸ್ ಪ್ರಕ್ರಿಯೆ ಕೂಡ ನಡೆಸಲು ಸಾಧ್ಯವಾಗಲಿಲ್ಲ. ಕನಿಷ್ಠ ತಲಾ 20 ಓವರ್ಗಳ ಪಂದ್ಯ ಆಡಿಸಲು ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8 ಗಂಟೆಯವರೆಗೂ ಕಾಯಲು ಅವಕಾಶವಿತ್ತು. ಆದರೆ ಎಡಬಿಡದೆ ಸುರಿದ ಮಳೆಯಿಂದಾಗಿ ಮೈದಾನ ಪೂರ್ತಿ ಒದ್ದೆಯಾಗಿದ್ದರಿಂದ ಮಳೆ ನಿಂತರೂ ಪಂದ್ಯ ನಡೆಸುವುದು ಅಸಾಧ್ಯವೆನಿಸಿತು. ಇದರಿಂದಾಗಿ ಭಾರತೀಯ ಕಾಲಮಾನ ಪ್ರಕಾರ ಸಂಜೆ 5.40ರ ವೇಳೆಗೆ ಪಂದ್ಯವನ್ನು ರದ್ದುಗೊಳಿಸಲು ಅಂಪೈರ್ಗಳು ತೀರ್ಮಾನಿಸಿದರು.
ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸೀಸ್-ಆಫ್ರಿಕಾ ನಡುವಿನ 8 ಮುಖಾಮುಖಿಗಳಲ್ಲಿ ಮಳೆಯಿಂದಾಗಿ ರದ್ದುಗೊಂಡ 4ನೇ ಪಂದ್ಯ ಇದಾಗಿದೆ.
ಸೆಮಿಫೈನಲ್ ಲೆಕ್ಕಾಚಾರ...
ಗೆಲುವಿನೊಂದಿಗೆ ಟೂರ್ನಿ ಆರಂಭಿಸಿದ್ದ ಆಸೀಸ್-ದ. ಆಫ್ರಿಕಾ ತಂಡಗಳ 2ನೇ ಪಂದ್ಯ ರದ್ದುಗೊಳ್ಳುವುದರೊಂದಿಗೆ ತಲಾ 3 ಅಂಕಗಳನ್ನು ಹೊಂದಿವೆ. ಇದರಿಂದಾಗಿ ಉಭಯ ತಂಡಗಳೂ ಬಿ ಗುಂಪಿನಿಂದ ಸೆಮಿಫೈನಲ್ಗೇರಲು ಕೊನೇ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿವೆ. ಸ್ಟೀವನ್ ಸ್ಮಿತ್ ಪಡೆ ತನ್ನ ಕೊನೇ ಲೀಗ್ ಪಂದ್ಯದಲ್ಲಿ ಶುಕ್ರವಾರ ಲಾಹೋರ್ನಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸಬೇಕೇಕಾಗಿದೆ. ಇತ್ತ ದ. ಆಫ್ರಿಕಾಕ್ಕೆ ಕೊನೇ ಲೀಗ್ ಪಂದ್ಯದಲ್ಲಿ ಶನಿವಾರ ಕರಾಚಿಯಲ್ಲಿ ಇಂಗ್ಲೆಂಡ್ ಸವಾಲು ಎದುರಾಗಲಿದ್ದು, ಆಫ್ಘನ್ ವಿರುದ್ಧ ಬುಧವಾರ ಇಂಗ್ಲೆಂಡ್ ಗೆದ್ದರೆ, ದ. ಆಫ್ರಿಕಾ-ಇಂಗ್ಲೆಂಡ್ ನಡುವಿನ ಬಿ ಗುಂಪಿನ ಕೊನೇ ಪಂದ್ಯ ಕ್ವಾರ್ಟರ್ಫೈನಲ್ ಎನಿಸಲಿದೆ. ಮತ್ತೊಂದೆಡೆ ಅಫ್ಘಾನಿಸ್ತಾನಕ್ಕೂ ಸದ್ಯ ಸೆಮೀಸ್ ಆಸೆ ಜೀವಂತವಿದ್ದು, ಇಂಗ್ಲೆಂಡ್ ಮತ್ತು ಆಸೀಸ್ ವಿರುದ್ಧದ ಎರಡೂ ಪಂದ್ಯ ಗೆದ್ದರೆ ಸೆಮಿಫೈನಲ್ಗೇರಬಹುದಾಗಿದೆ. ಇಂಗ್ಲೆಂಡ್ಗೂ ಸೆಮಿಫೈನಲ್ಗೇರಲು ಆಪ್ಘನ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಅನಿವಾರ್ಯವೆನಿಸಿದೆ.