

ದುಬೈ: ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮ ಹಾಗೂ ನಾಯಕ ವಿರಾಟ್ ಕೊಹ್ಲಿ, ಬುಧವಾರ ಪ್ರಕಟವಾದ 2019ರ ಸಾಲಿನ ಐಸಿಸಿ ವಾರ್ಷಿಕ ಪ್ರಶಸ್ತಿ ಗೌರವಕ್ಕೆ ಭಾಜನರಾಗಿದ್ದಾರೆ. ಅದ್ಭುತ ಲಯದಲ್ಲಿರುವ ರೋಹಿತ್ ಶರ್ಮ ವರ್ಷದ ಏಕದಿನ ಆಟಗಾರ ಪ್ರಶಸ್ತಿಗೆ ಆಯ್ಕೆಯಾಗಿದ್ದರೆ, ವಿರಾಟ್ ಕೊಹ್ಲಿಗೆ ಸ್ಪಿರಿಟ್ ಆಫ್ ಕ್ರಿಕೆಟ್ ಗೌರವ ದೊರೆತಿದೆ. ಇಂಗ್ಲೆಂಡ್ನ ಅಗ್ರ ಆಲ್ರೌಂಡರ್ ಬೆನ್ ಸ್ಟೋಕ್ಸ್ ವರ್ಷದ ಆಟಗಾರನಿಗೆ ನೀಡಲಾಗುವ ಸರ್ ಗ್ಯಾರಿಫೀಲ್ಡ್ ಸೋಬರ್ಸ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಐಸಿಸಿಯ ವರ್ಷದ ಟೆಸ್ಟ್ ಹಾಗೂ ಏಕದಿನ ತಂಡಕ್ಕೆ ನಾಯಕರಾಗಿ ಆಯ್ಕೆಯಾಗಿದ್ದಾರೆ. ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್, ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿ ಗೆದ್ದಿದ್ದಾರೆ. ಕಳೆದ ವರ್ಷ ಆಡಿದ 12 ಟೆಸ್ಟ್ ಪಂದ್ಯಗಳಿಂದ 59 ವಿಕೆಟ್ ಉರುಳಿಸಿರುವ ಕಮ್ಮಿನ್ಸ್, ಸದ್ಯ ವಿಶ್ವ ನಂ.1 ಟೆಸ್ಟ್ ಬೌಲರ್ ಎನಿಸಿದ್ದಾರೆ. ಟೀಮ್ ಇಂಡಿಯಾ ವೇಗಿ ದೀಪಕ್ ಚಹರ್, ಬಾಂಗ್ಲಾದೇಶ ವಿರುದ್ಧದ ಟಿ20 ಪಂದ್ಯದಲ್ಲಿ 7 ರನ್ಗೆ 6 ವಿಕೆಟ್ ಉರುಳಿಸಿದ ಸಾಧನೆ, ವರ್ಷದ ಟಿ20 ನಿರ್ವಹಣೆಯ ಗೌರವಕ್ಕೆ ಭಾಜನವಾಯಿತು. ಆಸ್ಟ್ರೇಲಿಯಾದ ಮಾರ್ನಸ್ ಲಬುಶೇನ್ ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿ ಜಯಿಸಿದರೆ, ಸ್ಕಾಟ್ಲೆಂಡ್ನ ಕೈಲ್ ಕೋಯ್ಜರ್ ವರ್ಷದ ಸಹಸದಸ್ಯ ಆಟಗಾರ ಪ್ರಶಸ್ತಿ ಜಯಿಸಿದರು. 32 ವರ್ಷದ ರೋಹಿತ್ ಶರ್ಮ, ಇಂಗ್ಲೆಂಡ್ ಆತಿಥ್ಯದಲ್ಲಿ ನಡೆದ ವಿಶ್ವಕಪ್ ವೇಳೆ ಆಡಿದ 9 ಪಂದ್ಯಗಳಿಂದ 81ರ ಸರಾಸರಿಯಲ್ಲಿ ಐದು ಶತಕ ಹಾಗೂ ಒಂದು ಅರ್ಧಶತಕದೊಂದಿಗೆ 648 ರನ್ ಬಾರಿಸಿದ್ದರು. ಅದಲ್ಲದೆ, ಒಂದೇ ಆವೃತ್ತಿಯ ವಿಶ್ವಕಪ್ನಲ್ಲಿ ಐದು ಶತಕ ಬಾರಿಸಿದ ವಿಶ್ವದ ಏಕೈಕ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು. 2019ರಲ್ಲಿ ಆಡಿದ 28 ಏಕದಿನ ಪಂದ್ಯಗಳಿಂದ 1409 ರನ್ ಬಾರಿಸುವ ಮೂಲಕ ತಮ್ಮ ಭರ್ಜರಿ ಬ್ಯಾಟಿಂಗ್ಅನ್ನು ಮುಂದುವರಿಸಿದ್ದರು. ಇದರಲ್ಲಿ ಏಳು ಶತಕಗಳು ಸೇರಿದ್ದವು.
ಐಸಿಸಿ ವಾರ್ಷಿಕ ಪ್ರಶಸ್ತಿ: ಸರ್ ಗ್ಯಾರಿಫೀಲ್ಡ್ ಸೋಬರ್ಸ್ ಪ್ರಶಸ್ತಿ (ವರ್ಷದ ಆಟಗಾರ): ಬೆನ್ ಸ್ಟೋಕ್ಸ್, ವರ್ಷದ ಟೆಸ್ಟ್ ಅಟಗಾರ: ಪ್ಯಾಟ್ ಕಮ್ಮಿನ್ಸ್, ವರ್ಷದ ಏಕದಿನ ಆಟಗಾರ: ರೋಹಿತ್ ಶರ್ಮ, ವರ್ಷದ ಉದಯೋನ್ಮುಖ ಆಟಗಾರ: ಮಾರ್ನಸ್ ಲಬುಶೇನ್, ಸ್ಪಿರಿಟ್ ಆಫ್ ಕ್ರಿಕೆಟ್: ವಿರಾಟ್ ಕೊಹ್ಲಿ, ಟಿ20 ವರ್ಷದ ನಿರ್ವಹಣೆ: ದೀಪಕ್ ಚಹರ್, ವರ್ಷದ ಅಂಪೈರ್: ರಿಚರ್ಡ್ ಇಲ್ಲಿಂಗ್ವರ್ತ್, ಸಹಸದಸ್ಯ ರಾಷ್ಟ್ರದ ವರ್ಷದ ಆಟಗಾರ: ಕೋಯ್್ಲ ಕೂಟ್ಜರ್.
ನನ್ನ ನಿರ್ವಹಣೆಗೆ ಈ ಪ್ರಶಸ್ತಿ ಸಿಕ್ಕಿರುವು ದರಿಂದ ಸಂತಸವಾಗಿದೆ. 2019ರಲ್ಲಿ ಒಂದು ತಂಡವಾಗಿ ನಾವು ತೋರಿದ ನಿರ್ವಹಣೆಯ ಬಗ್ಗೆ ನನಗೆ ಹೆಮ್ಮೆ ಇದೆ. ಬಹುಶಃ ಅದಕ್ಕಿಂತ ಉತ್ತಮ ನಿರ್ವಹಣೆ ತೋರುವ ಅವಕಾಶ ನಮಗಿದ್ದವು. ಆದರೂ, ಸಾಕಷ್ಟು ಧನಾತ್ಮಕ ಅಂಶಗಳು ನಮಗೆ ಸಿಕ್ಕಿದ್ದು, 2020ರಲ್ಲೂ ಅದೇ ನಿರ್ವಹಣೆ ಎದುರು ನೋಡುತ್ತಿದ್ದೇನೆ. | ರೋಹಿತ್ ಶರ್ಮ ನನಗೆ ಅಚ್ಚರಿಯಾಗಿದೆ. ಇಷ್ಟು ವರ್ಷಗಳ ಕಾಲ ಐಸಿಸಿಯಿಂದ ಕೆಟ್ಟ ವರ್ತನೆಗಳ ಕಾರಣಕ್ಕಾಗಿಯೇ ನಾನು ಸುದ್ದಿಯಲ್ಲಿದ್ದೆ. ಈಗ ಸ್ಪಿರಿಟ್ ಆಫ್ ಕ್ರಿಕೆಟ್ಗೆ ನಾನು ಭಾಜನವಾಗಿರುವುದು ಸಹಜವಾಗಿಯೇ ನನಗೆ ಅಚ್ಚರಿ ತಂದಿದೆ. | ವಿರಾಟ್ ಕೊಹ್ಲಿ
2019ರ ಏಕದಿನ ವಿಶ್ವಕಪ್ನಲ್ಲಿ ಆಸೀಸ್ ವಿರುದ್ಧ ಲೀಗ್ ಪಂದ್ಯದ ವೇಳೆ ಫೀಲ್ಡರ್ ಸ್ಟೀವನ್ ಸ್ಮಿತ್ಗೆ ಚೆಂಡು ವಿರೂಪ ಪ್ರಕರಣದ ಕಾರಣಕ್ಕಾಗಿ ಭಾರತೀಯ ಅಭಿಮಾನಿಗಳು ಕಿಚಾಯಿಸುತ್ತಿದ್ದ ವೇಳೆ, ಕ್ರೀಸ್ನಲ್ಲಿದ್ದ ವಿರಾಟ್ ಕೊಹ್ಲಿ ಅದನ್ನು ತಡೆದಿದ್ದರು. ನಿಂದಿಸುವ ಬದಲಾಗಿ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿ ಎಂದು ಕೈಸನ್ನೆ ಮಾಡಿ ಎಲ್ಲರ ಹೃದಯ ಗೆದ್ದಿದ್ದರು. ಈ ಕಾರಣಕ್ಕಾಗಿ ಕೊಹ್ಲಿ ಸ್ಪಿರಿಟ್ ಆಫ್ ಕ್ರಿಕೆಟ್ ಗೌರವವನ್ನು ಗೆದ್ದಿದ್ದಾರೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಪಿರಿಟ್ ಆಫ್ ಕ್ರಿಕೆಟ್ನ ಪ್ರಶಸ್ತಿ ಬರುತ್ತದೆ ಎನ್ನುವ ನಿರೀಕ್ಷೆಯನ್ನೇ ಇಟ್ಟಿರಲಿಲ್ಲ ಎಂದಿದ್ದಾರೆ. ‘ಕ್ರೀಡಾಪಟುಗಳು ಪರಸ್ಪರ ಸೌಹಾರ್ದವಾಗಿರಬೇಕು ಎನ್ನುವ ರೀತಿಯಲ್ಲಿ ಮಾತ್ರವೇ ನನ್ನ ತಲೆಯಲ್ಲಿತ್ತು. ಆ ಕ್ಷಣದಲ್ಲಿ ನಾನು ಸಂಪೂರ್ಣವಾಗಿ ವ್ಯಕ್ತಿಯೊಬ್ಬರ ಮನಃಸ್ಥಿತಿಯ ಬಗ್ಗೆ ಯೋಚನೆ ಮಾಡುತ್ತಿದ್ದೆ. ನೀವು ಸ್ಲೆಡ್ಜ್ ಮಾಡಬಹುದು, ಮೈದಾನದಲ್ಲಿ ಎದುರಾಳಿಯನ್ನು ಕೆಣಕಿ ಏನನ್ನಾದರೂ ಮಾತನಾಡಿ ಅವರನ್ನು ಸೋಲಿಸಲು ಪ್ರಯತ್ನಿಸಬಹುದು. ಆದರೆ, ಅಭಿಮಾನಿಗಳು ಯಾವುದೋ ಒಂದು ಕಾರಣಕ್ಕಾಗಿ ಒಬ್ಬರನ್ನು ಕಿಚಾಯಿಸುವುದು ಕ್ರೀಡಾಸ್ಪೂರ್ತಿಯಲ್ಲ. ನಾನು ಅದನ್ನು ಬೆಂಬಲಿಸುವುದೂ ಇಲ್ಲ’ ಎಂದು ಕೊಹ್ಲಿ ಹೇಳಿದ್ದಾರೆ.
ಬಾಂಗ್ಲಾದೇಶ ವಿರುದ್ಧ 7 ರನ್ಗೆ 6 ವಿಕೆಟ್ ಉರುಳಿಸಿದ ನಿರ್ವಹಣೆಗೆ ಪ್ರಶಸ್ತಿ ಬಂದ ಬಗ್ಗೆ ಮಾತನಾಡಿರುವ ದೀಪಕ್ ಚಹರ್, ‘ಇದು ತಮ್ಮ ಸ್ಮರಣೀಯ ಪಂದ್ಯ. ವೃತ್ತಿಜೀವನದುದ್ದಕ್ಕೂ ನೆನಪಿನಲ್ಲಿ ಇರುತ್ತದೆ’ ಎಂದು ಹೇಳಿದ್ದಾರೆ. ‘ಕೇವಲ 7 ರನ್ ಬಿಟ್ಟುಕೊಟ್ಟು 6 ವಿಕೆಟ್ ಉರುಳಿಸುವುದು ಕನಸಿನಲ್ಲಿ ಯೋಚಿಸಬಹುದಾದ ನಿರ್ವಹಣೆಯಾಗಿತ್ತು. ಹಾಗಾಗಿ ಆ ಪಂದ್ಯದ ನಿರ್ವಹಣೆ ನನ್ನ ಹೃದಯಕ್ಕೆ ಹತ್ತಿರವಾಗಿರುತ್ತದೆ’ ಎಂದಿದ್ದಾರೆ.