

ನವದೆಹಲಿ: ಇಂಗ್ಲೆಂಡ್ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಆಲ್ರೌಂಡರ್ ಬೆನ್ ಸ್ಟೋಕ್ಸ್, ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮ ಮತ್ತು ನಾಯಕ ವಿರಾಟ್ ಕೊಹ್ಲಿ 2019ನೇ ಸಾಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಪ್ರಶಸ್ತಿ ಪಟ್ಟಿಯಲ್ಲಿ ಅತ್ಯುನ್ನತ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಸಂಕ್ರಾಂತಿ ಹಬ್ಬದಂದೇ ಐಸಿಸಿ ಪ್ರಶಸ್ತಿ ಪಟ್ಟಿ ಬಿಡುಗಡೆಯಾಗಿದ್ದು, ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಪ್ರತಿಷ್ಠಿತ ಸರ್ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿಗೆ ಅರ್ಹರಾಗುವ ಮೂಲಕ ವರ್ಷದ ಕ್ರಿಕೆಟಿಗ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಆ್ಯಂಡ್ರಿವ್ ಫ್ಲಿಂಟಪ್ ಮತ್ತು ಜೊನಾಥನ್ ಟ್ರಾಟ್ ಬಳಿಕ ಈ ಪ್ರಶಸ್ತಿಗೆ ಭಾಜನರಾದ ಇಂಗ್ಲೆಂಡ್ನ ಮೂರನೇ ಆಟಗಾರನೆಂಬ ಕೀರ್ತಿಯನ್ನು ಗಳಿಸಿದ್ದಾರೆ.
ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ 2019ನೇ ಇಸವಿಯಲ್ಲಿ ಸ್ಟೋಕ್ಸ್ ಛಾಪು ಮೂಡಿಸಿದ್ದಾರೆ. ಕಳೆದ ವರ್ಷದ ತವರು ನೆಲದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಉತ್ತಮ ಆಲ್ರೌಂಡರ್ ಪ್ರದರ್ಶನ ನೀಡಿ ತಂಡ ಮೊದಲನೇ ವಿಶ್ವಕಪ್ ಜಯಿಸಲು ಪ್ರಮುಖ ಕಾರಣರಾಗಿದ್ದರು. ವಿಶ್ವಕಪ್ ಟೂರ್ನಿಯಲ್ಲಿ 5 ಅರ್ಧ ಶತಕಗಳೊಂದಿಗೆ 465ರನ್ ಗಳಿಸಿದ್ದರು.
ಇದಲ್ಲದೆ, ಮೂರನೇ ಆ್ಯಸಸ್ ಟೆಸ್ಟ್ನಲ್ಲಿ ಸ್ಫೋಟಕ 135 ರನ್ ಸಿಡಿಸುವ ಮೂಲಕ ಆಸ್ಟ್ರೇಲಿಯಾ ನೀಡಿದ್ದ 356 ರನ್ ಗುರಿಯನ್ನು ಪವಾಡವೆಂಬಂತೆ ಬೆನ್ನಟ್ಟಿ ಇಂಗ್ಲೆಂಡ್ ಜಯ ಸಾಧಿಸಲು ಕಾರಣರಾಗಿದ್ದರು. ಹೀಗಾಗಿ 2019ರಲ್ಲಿ ಏಕದಿನ ಮತ್ತು ಟೆಸ್ಟ್ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದಲ್ಲದೆ, ಬೌಲಿಂಗ್ನಲ್ಲೂ ಗಮನ ಸೆಳೆದಿದ್ದಕ್ಕೆ ಸ್ಟೋಕ್ಸ್ ವರ್ಷದ ಕ್ರಿಕೆಟಿಗ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ರೋಹಿತ್ ಶರ್ಮ ಏಕದಿನ ವರ್ಷದ ಕ್ರಿಕೆಟಿಗ
2019ರಲ್ಲಿ ಬ್ಯಾಟಿಂಗ್ ಮೂಲಕ ಎಲ್ಲರನ್ನು ರಂಜಿಸಿದ ಟೀಮ್ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ವರ್ಷದ ಏಕದಿನ ಕ್ರಿಕೆಟಿಗ ಗೌರವಕ್ಕೆ ಪಾತ್ರರಾಗಿದ್ದಾರೆ. ವಿಶ್ವಕಪ್ ಟೂರ್ನಿಯೊಂದರಲ್ಲೇ 5 ಶತಕ ಹಾಗೂ ಒಟ್ಟಾರೆ ಏಕದಿನ ಕ್ರಿಕೆಟ್ನಲ್ಲಿ 7 ಶತಕಗಳನ್ನು ರೋಹಿತ್ ಬಾರಿದ್ದಾರೆ. ಹೀಗಾಗಿ ಈ ಪ್ರಶಸ್ತಿಗೆ ರೋಹಿತ್ ಪಾತ್ರರಾಗಿದ್ದಾರೆ.
ವಿರಾಟ್ಗೆ ಸ್ಪಿರಿಟ್ ಆಫ್ ಕ್ರಿಕೆಟ್ ಗೌರವ
ಅದ್ಭುತ ಬ್ಯಾಟಿಂಗ್ ಹಾಗೂ ನಾಯಕತ್ವದಿಂದ ವಿಶ್ವಕಪ್ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಕ್ರೀಡಾ ಸ್ಫೂರ್ತಿ ಮೆರೆಯುವ ಮೂಲಕ ಅಗ್ರೆಸಿವ್ನೆಸ್ ನನ್ನ ಪ್ರವೃತ್ತಿಯಲ್ಲ ಎಂಬುದನ್ನು ಸಾಬೀತು ಪಡಿಸಿದ್ದರು. ಕನ್ನಿಂಗ್ಟನ್ನ ಓವಲ್ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಪಂದ್ಯವು ಕ್ರೀಡಾ ಸ್ಫೂರ್ತಿಗೆ ಸಾಕ್ಷಿಯಾಗಿತ್ತು. ಆಸಿಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಬೌಂಡರಿ ಗೆರೆಯ ಬಳಿ ಕ್ಷೇತ್ರ ರಕ್ಷಣೆ ಮಾಡುವಾಗ ಟೀಂ ಇಂಡಿಯಾದ ಅಭಿಮಾನಿಗಳು ಚೆಂಡು ವಿರೂಪ ಪ್ರಕರಣದಲ್ಲಿ ಒಂದು ವರ್ಷ ಬ್ಯಾನ್ ಆಗಿದ್ದ ಸ್ಮಿತ್ ಕಡೆ ನೋಡುತ್ತಾ, ಕೂಗುತ್ತಾ ಅಪಹಾಸ್ಯ ಮಾಡುತ್ತಿದ್ದರು. ಇದನ್ನು ಗಮನಿಸಿದ ಕೊಹ್ಲಿ ಮುಂದೆ ಬಂದು ಅಭಿಮಾನಿಗಳನ್ನು ಸುಮ್ಮನಿರುವಂತೆ ಹೇಳಿ, ಹೀಗೆ ಮಾಡುವುದರ ಬದಲು ಚಪ್ಪಾಳೆ ತಟ್ಟಿ ಹುರಿದುಂಬಿಸಿ ಎಂದು ಹೇಳಿದ್ದರು. ಈ ವಿಶೇಷ ಕ್ಷಣವನ್ನು ಮೆಲಕು ಹಾಕಿರುವ ಐಸಿಸಿ, ವಿರಾಟ್ ಕೊಹ್ಲಿಗೆ "ಸ್ಪಿರಿಟ್ ಆಫ್ ಕ್ರಿಕೆಟ್" ಪ್ರಶಸ್ತಿ ಗೌರವಿಸಿದೆ.
ಪ್ಯಾಟ್ ಕ್ಯುಮಿನ್ಸ್ಗೆ ಟೆಸ್ಟ್ ಕ್ರಿಕೆಟಿಗ ಗೌರವ
ಕಳೆದ ವರ್ಷ ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ ಬೌಲಿಂಗ್ ಮೂಲಕ ಜಾದೂ ಮಾಡಿದ ಆಸಿಸ್ ತಂಡದ ವೇಗದ ಬೌಲರ್ ಪ್ಯಾಟ್ ಕ್ಯುಮಿನ್ಸ್ ವರ್ಷದ ಟೆಸ್ಟ್ ಕ್ರಿಕೆಟಿಗ ಗೌರವಕ್ಕೆ ಪಾತ್ರರಾಗಿದ್ದಾರೆ. ಕಳೆದ ವರ್ಷ ಟೆಸ್ಟ್ನಲ್ಲಿ ಒಟ್ಟು 59 ವಿಕೆಟ್ ಪಡೆದಿರುವ ಕ್ಯುಮಿನ್ಸ್ ಇತರೆ ಬೌಲರ್ಗಳಿಗಿಂತ 14 ವಿಕೆಟ್ ಮುಂದಿದ್ದಾರೆ. ಈ ಸಾಧನೆಯೇ ಈ ಬಾರಿಯ ಐಪಿಎಲ್ಗೆ ದಾಖಲೆಯ ಬೆಲೆಯಲ್ಲಿ ಕ್ಯುಮಿನ್ಸ್ ಬಿಕರಿಯಾಗಿದ್ದಾರೆ.
ದೀಪಕ್ ಚಹಾರ್ಗೆ ಐಸಿಸಿ ಪುರುಷರ ಟಿ20 ಫರ್ಫಾರ್ಮೆನ್ಸ್ ಅವಾರ್ಡ್
ಕಳೆದ ನವೆಂಬರ್ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಟಿ20 ಕ್ರಿಕೆಟ್ ಇತಿಹಾದಲ್ಲೇ ದೀಪಕ್ ಚಹಾರ್ ಮಹತ್ವದ ಸಾಧನೆಯೊಂದನ್ನು ಮಾಡಿದರು. ಕೇವಲ 7 ರನ್ ನೀಡಿ 6 ವಿಕೆಟ್ ಗಳಿಸಿದ ಕಾರಣ ಟೀಂ ಇಂಡಿಯಾಗೆ ಟಿ20 ಸರಣಿ ಲಭಿಸಿತ್ತು. ಹೀಗಾಗಿ ದೀಪಕ್ ಚಹಾರ್ಗೆ ಐಸಿಸಿ ಪುರುಷರ ಟಿ20 ಫರ್ಫಾರ್ಮೆನ್ಸ್ ಅವಾರ್ಡ್ ದೊರಕಿದೆ.
ಉಳಿದಂತೆ
2019ರ ಟಿ20ವಿಶ್ವಕಪ್ ಟೂರ್ನಿಗೆ ಸ್ಕಾಟ್ಲೆಂಡ್ಗೆ ಅರ್ಹತೆ ದೊರಕಿಸಿಕೊಟ್ಟ ಕೈಲ್ ಕಿಯೋಟ್ಜರ್ ವರ್ಷದ ಅಸೋಸಿಯೇಟ್ ಕ್ರಿಕೆಟರ್ ಪ್ರಶಸ್ತಿಗೆ ಭಾಜನರಾಗಿದ್ದರೆ, ಆಸ್ಟ್ರೇಲಿಯಾದ ಮಾರ್ನಸ್ ಲಬಸ್ಛಗ್ನೆ ಟೆಸ್ಟ್ ಕ್ರಿಕೆಟ್ನಲ್ಲಿ 64.94 ಬ್ಯಾಟಿಂಗ್ ಸರಾಸರಿಯಲ್ಲಿ ರನ್ ಬಾರಿಸುವ ಮೂಲಕ ಐಸಿಸಿ ಮೆನ್ಸ್ ಎಮರ್ಜಿಂಗ್ ಕ್ರಿಕೆಟರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ರಿಚರ್ಡ್ ಇಲ್ಲಿಂಗ್ವೆರ್ತ್ ವರ್ಷದ ಅಂಪೈರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. (ಏಜೆನ್ಸೀಸ್)