

ಮುಂಬೈ: ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಭಾರತೀಯ ಕ್ರಿಕೆಟಿಗರ ಸಂಸ್ಥೆ (ಐಸಿಎ) ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಆರಂಭವಾಗುವ ಸಾಧ್ಯತೆ ಇದೆ. ಮುಂಬೈನಲ್ಲಿ ಕಚೇರಿ ಸ್ಥಳಕ್ಕೆ ಅತಿಯಾದ ಬಾಡಿಗೆ ಇರುವ ಕಾರಣ, ಐಸಿಎ ಬೆಂಗಳೂರನ್ನು ಕೇಂದ್ರ ಕಚೇರಿಗೆ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.
ಸುಪ್ರೀಂ ಕೋರ್ಟ್ ನೇಮಿಸಿದ ಲೋಧಾ ಸಮಿತಿಯ ಶಿಫಾರಸಿನ ಅನ್ವಯ ಭಾರತದ ಮೊಟ್ಟಮೊದಲ ಆಟಗಾರ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು, ಕಳೆದ ಭಾನುವಾರವಷ್ಟೇ ಬಿಸಿಸಿಐ, ಐಸಿಎ ತನ್ನ ವ್ಯವಹಾರ ಆರಂಭಿಸುವ ಸಲುವಾಗಿ 2 ಕೋಟಿ ರೂ. ಅನುದಾನ ನೀಡಿತ್ತು. ಕಳೆದ ಅಕ್ಟೋಬರ್ನಲ್ಲಿ ಐಸಿಎ ಆರಂಭವಾಗಿದ್ದರೂ, ಹಣಕಾಸಿನ ಅಭಾವ ಕಾಡುತ್ತಿದೆ. ‘ಬೆಂಗಳೂರಿನಲ್ಲಿ ಮುಂದಿನ 10-15 ದಿನಗಳಲ್ಲಿ ಕೇಂದ್ರ ಕಚೇರಿ ನಿರ್ವಣವಾಗಲಿದೆ. ಮುಂಬೈ ಬಹಳ ದುಬಾರಿ. ಅಲ್ಲಿನ ವೆಚ್ಚವನ್ನು ಸದ್ಯ ತೂಗಿಸಲು ಸಾಧ್ಯವಿಲ್ಲ. ಅದಲ್ಲದೆ, ಐಸಿಎ ಖಜಾಂಚಿ ಕೃಷ್ಣಸ್ವಾಮಿ ಅವರ ನಿವಾಸ ಬೆಂಗಳೂರಿನಲ್ಲಿಯೇ ಇರುವುದು ನಮಗೆ ಲಾಭವಾಗಲಿದೆ’ ಎಂದು ಐಸಿಎ ಅಧ್ಯಕ್ಷ ಅಶೋಕ್ ಮಲ್ಹೋತ್ರಾ ತಿಳಿಸಿದ್ದಾರೆ.