

ಟೋಕಿಯೊ: ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳ ಪದಕ ಬೇಟೆ ಮುಂದುವರಿದಿದ್ದು, ಬ್ಯಾಡ್ಮಿಂಟನ್ ವಿಭಾಗದಲ್ಲಿ ಕನ್ನಡಿಗ ಸುಹಾಸ್ ಯತಿರಾಜ್ ಭಾನುವಾರ ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ಈ ಮೂಲಕ ಭಾರತದ ಪದಕಗಳ ಸಂಖ್ಯೆ 18ಕ್ಕೇರಿದೆ.
ಪುರುಷರ ಎಸ್ಎಲ್4 ಕ್ಯಾಟಗರಿಯಲ್ಲಿ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಚಾಂಪಿಯನ್ ಲುಕಾಸ್ ಮಜೂರ್ ವಿರುದ್ಧ 21-15, 21-15-21 ಅಂತರದಲ್ಲಿ ಸೋಲನ್ನು ಅನುಭವಿಸುವ ಮೂಲಕ ಚಿನ್ನದ ಪದಕದಿಂದ ವಂಚಿತರಾಗಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.
ಅಂದಹಾಗೆ 38 ವರ್ಷದ ಸುಹಾಸ್ ಯತಿರಾಜ್ ಮೂಲ ಕರ್ನಾಟಕ. ಐಎಎಸ್ ಅಧಿಕಾರಿಯಾಗಿದ್ದು, ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಮೊದಲ ಐಎಎಸ್ ಅಧಿಕಾರಿ ಎಂಬ ಇತಿಹಾಸವನ್ನು ನಿರ್ಮಿಸಿದ್ದಾರೆ.
ಇಂಜಿನಿಯರಿಂಗ್ ಓದಿರುವ ಸುಹಾಸ್ ಐಎಎಸ್ ಪಾಸ್ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಪ್ರಸ್ತುತ ಉತ್ತರ ಪ್ರದೇಶದ ನೋಯ್ಡಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಳ್ಳಿ ಗೆದ್ದ ಸುಹಾಸ್ಗೆ ಸಾಕಷ್ಟು ಅಭಿನಂದನೆಗಳು ಹರಿದುಬರುತ್ತಿದೆ. (ಏಜೆನ್ಸೀಸ್)