

R Ashwin : ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಣೆ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಡಿ.18ರಂದು ಡ್ರಾನಲ್ಲಿ ಅಂತ್ಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಮೂರನೇ ಟೆಸ್ಟ್ ಪಂದ್ಯದ ಬಳಿಕ ಅಶ್ವಿನ್ ತಮ್ಮ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಈ ಹಠಾತ್ ನಿವೃತ್ತಿ ಘೋಷಣೆಯ ಬಳಿಕ ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಕೊನೆಗೂ ಮೌನ ಮುರಿದಿರುವ ಅಶ್ವಿನ್, ನಿವೃತ್ತಿಗೆ ಕಾರಣವನ್ನು ತಿಳಿಸಿದ್ದಾರೆ.
ಅಶ್ವಿನ್ ಅವರ ನಿರ್ಧಾರವನ್ನು ಅನೇಕರು ಖಂಡಿಸಿದರು. ಅವರಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಕೂಡ ಒಬ್ಬರು. ಅಶ್ವಿನ್ ಅವರು ನಿವೃತ್ತಿ ಘೋಷಣೆ ಮಾಡಿದ ಸಮಯ ಸರಿಯಲ್ಲ ಎಂದು ಟೀಕಿಸಿದರು. ಇದೇ ಸಂದರ್ಭದಲ್ಲಿ ಅಶ್ವಿನ್ ತಂದೆ ರವಿಚಂದ್ರನ್, ಹೇಳಿದ ಮಾತು ದೊಡ್ಡ ವಿವಾದವನ್ನೇ ಹುಟ್ಟು ಹಾಕಿತು.
ಸತತ ನಿರ್ಲಕ್ಷ್ಯದಿಂದ ಅವಮಾನ ಅನುಭವಿಸಿದ ಮಗ ನಿವೃತ್ತಿ ಘೋಷಿಸಿದ್ದಾನೆ ಎಂದು ಹೇಳಿದರು. ಇಷ್ಟೆಲ್ಲ ಆದರೂ ಅಶ್ವಿನ್ ಮಾತ್ರ ಮೌನವಾಗಿಯೇ ಇದ್ದರು. ಆದರೆ, ಇದೀಗ ಸ್ಕೈ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಅಶ್ವಿನ್ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.
ಮೈದಾನದಲ್ಲಿನ ಅನುಭವಗಳನ್ನು ಜೊತೆಯಲ್ಲಿ ಕೊಂಡೊಯ್ಯುವಂತಹ ವ್ಯಕ್ತಿ ನಾನಲ್ಲ. ನನ್ನ ಜೀವನದಲ್ಲಿ ನಾನೆಂದಿಗೂ ಅಭದ್ರತೆಯನ್ನು ಅನುಭವಿಸಿಲ್ಲ. ಇಂದು ನಾನು ಸಾಧಿಸಿದ ಸಾಧನೆಗಳೆಲ್ಲ ನಾಳೆಯೂ ನನ್ನದಾಗುತ್ತವೆ ಎಂಬ ನಂಬಿಕೆ ನನಗಿಲ್ಲ. ಈ ಅಂಶವೇ ನನ್ನನ್ನು ಇಷ್ಟು ದಿನ ಮುನ್ನಡೆಸಿದೆ ಎಂದು ಅಶ್ವಿನ್ ಸ್ಪಷ್ಟಪಡಿಸಿದ್ದಾರೆ.
ತಮ್ಮ ನಿವೃತ್ತಿಯ ಬಗ್ಗೆ ಮಾತನಾಡಿದ ಅಶ್ವಿನ್, ನಾನು ನಿವೃತ್ತಿಯ ಬಗ್ಗೆ ಹಲವು ಬಾರಿ ಯೋಚಿಸಿದ್ದೆ. ನನ್ನ ಕೌಶಲ್ಯದಿಂದ ಹೊಸದನ್ನು ಮಾಡಲು ನನ್ನಿಂದ ಸಾಧ್ಯವಿಲ್ಲ ಎಂದು ಭಾವಿಸಿದಾಗ ಮಾತ್ರ ನಾನು ಕ್ರಿಕೆಟ್ ತ್ಯಜಿಸುವ ಬಗ್ಗೆ ಯೋಚಿಸುತ್ತಿದ್ದೆ. ಆದರೆ, ಅಂದು ನನಗೆ ಇದ್ದಕ್ಕಿದ್ದಂತೆ ಹಾಗೆ ಅನಿಸಿತು. ಹೀಗಾಗಿ ನಿವೃತ್ತಿಯನ್ನು ಘೋಷಣೆ ಮಾಡಿದೆ ಎಂದು ಅಶ್ವಿನ್ ಹೇಳಿದರು.
ಅಂದಹಾಗೆ ಅಶ್ವಿನ್ ಅವರು 106 ಟೆಸ್ಟ್ ಪಂದ್ಯಗಳಲ್ಲಿ 24ರ ಸರಾಸರಿಯಲ್ಲಿ 537 ವಿಕೆಟ್‌ಗಳನ್ನು ಪಡೆದು ಟೆಸ್ಟ್ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. 132 ಟೆಸ್ಟ್‌ಗಳಲ್ಲಿ 619 ವಿಕೆಟ್‌ಗಳನ್ನು ಪಡೆದಿರುವ ಟೀಮ್ ಇಂಡಿಯಾದ ದಿಗ್ಗಜ ಆಟಗಾರ ಅನಿಲ್ ಕುಂಬ್ಳೆ ಬಳಿಕ ಭಾರತದ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿ ವೃತ್ತಿ ಬದುಕನ್ನು ಅಶ್ವಿನ್ ಕೊನೆಗೊಳಿಸಿದರು.
ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಮೂರು ಟೆಸ್ಟ್ ಪಂದ್ಯದಲ್ಲಿ ಕೇವಲ ಒಂದು ಟೆಸ್ಟ್ ಪಂದ್ಯದಲ್ಲಿ ಮಾತ್ರ ಅಶ್ವಿನ್ ಆಡಿದರು. ಅಡಿಲೇಡ್‌ನಲ್ಲಿ ನಡೆದ ಅಹರ್ನಿಶಿ ಪಂದ್ಯದಲ್ಲಿ 53ಕ್ಕೆ 1 ವಿಕೆಟ್ ಪಡೆದರು. ಈ ಹಿಂದಿನ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ತವರು ನೆಲದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ 3-0 ಸೋಲು ಅನುಭವಿಸಿತು. ಈ ಸರಣಿಯಲ್ಲಿ ಅಶ್ವಿನ್ 41.22 ಸರಾಸರಿಯಲ್ಲಿ ಒಂಬತ್ತು ವಿಕೆಟ್ಳನ್ನು ಪಡೆದಿದ್ದರು.
ಅಶ್ವಿನ್ ಅವರು ಬೌಲಿಂಗ್ನಲ್ಲಿ ಮಾತ್ರವಲ್ಲದೆ, ಆರು ಶತಕಗಳು ಮತ್ತು 14 ಅರ್ಧಶತಕಗಳೊಂದಿಗೆ 3503 ಟೆಸ್ಟ್ ರನ್‌ಗಳನ್ನು ಗಳಿಸಿ, ಬ್ಯಾಟಿಂಗ್ನಲ್ಲೂ ಮಿಂಚಿದ್ದಾರೆ. 3000ಕ್ಕೂ ಹೆಚ್ಚು ರನ್ ಮತ್ತು 300 ವಿಕೆಟ್‌ಗಳೊಂದಿಗೆ 11 ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದಾರೆ. (ಏಜೆನ್ಸೀಸ್)