

ಕೇಪ್ಟೌನ್: ದಕ್ಷಿಣ ಆಫ್ರಿಕಾ ತಂಡದ ಸ್ಪಿನ್ನರ್ ಕೇಶವ್ ಮಹಾರಾಜ್ ಇತ್ತೀಚೆಗೆ ಭಾರತ ವಿರುದ್ಧದ ಕ್ರಿಕೆಟ್ ಸರಣಿಯಲ್ಲಿ ಬ್ಯಾಟಿಂಗ್ಗೆ ಬಂದಾಗಲೆಲ್ಲ ಮೈದಾನದ ಡಿಜೆ, "ರಾಮ್ ಸಿಯಾ ರಾಮ್' ಹಾಡು ಮೊಳಗಿಸುತ್ತಿದ್ದರು. ಇದರ ಹಿಂದಿನ ಕಾರಣವನ್ನು ಬಹಿರಂಗಪಡಿಸಿರುವ ಕೇಶವ್ ಮಹಾರಾಜ್, "ನಾನು ಹನುಮಂತ ಮತ್ತು ರಾಮ ದೇವರ ಭಕ್ತ. ಹೀಗಾಗಿ ನಾನು ಮೈದಾನ ಪ್ರವೇಶಿಸುವ ವೇಳೆ ಆ ಹಾಡು ಹಾಕುವಂತೆ ಡಿಜೆಯನ್ನು ವಿನಂತಿಸಿಕೊಂಡಿದ್ದೆ' ಎಂದು ಹೇಳಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ತಂಡದಲ್ಲಿರುವ ಏಕೈಕ ಹಿಂದು ಕ್ರಿಕೆಟಿಗರಾಗಿರುವ ಕೇಶವ್ ಮಹಾರಾಜ್, ಬ್ಯಾಟ್ ಮೇಲೆ "ಓಂ' ಸ್ಟಿಕ್ಕರ್ ಅಂಟಿಸಿಕೊಂಡಿದ್ದಾರೆ.
ಕೇಪ್ಟೌನ್ ಟೆಸ್ಟ್ನಲ್ಲಿ ಕೇಶವ್ ಬ್ಯಾಟಿಂಗ್ಗೆ ಬಂದ ಸಮಯದಲ್ಲಿ "ರಾಮ್ ಸಿಯಾ ರಾಮ್' ಹಾಡು ಮೊಳಗಿದಾಗ ವಿರಾಟ್ ಕೊಹ್ಲಿ, ರಾಮನಂತೆ ಬಿಲ್ಲುಬಾಣ ಹಿಡಿದ ಪೋಸು ನೀಡಿ ಗಮನಸೆಳೆದಿದ್ದರು. ಕನ್ನಡಿಗ ಹಾಗೂ ವಿಕೆಟ್ ಕೀಪರ್ ಕೆಎಲ್ ರಾಹುಲ್, "ನೀನು ಬಂದಾಗಲೆಲ್ಲಾ ಈ ಹಾಡು ಮೊಳಗುತ್ತದಲ್ಲ?' ಎಂದು ಕೇಶವ್ ಬಳಿಯೇ ಪ್ರಶ್ನಿಸಿದ್ದು ಕೂಡ ಸುದ್ದಿಯಾಗಿತ್ತು.