

ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್ಐ)ದ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಬೆಂಬಲದ ಅಭ್ಯರ್ಥಿ, ಡಬ್ಲ್ಯುಎಫ್ಐನ ಉನ್ನತ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬೆನ್ನಲ್ಲೇ ತೀವ್ರ ಅಸಮಾಧಾನಗೊಂಡಿರುವ ಒಲಿಂಪಿಕ್ ಪದಕ ವಿಜೇತೆ ಮತ್ತು ಕುಸ್ತಿಪಟು ಸಾಕ್ಷಿ ಮಲ್ಲಿಕ್ ಅವರು ಕ್ರೀಡೆಯನ್ನು ತೊರೆಯುವುದಾಗಿ ನಿರ್ಧರಿಸಿದ್ದಾರೆ.
ಬ್ರಿಜ್ ಭೂಷನ್ ಶರಣ್ ಸಿಂಗ್ ಅವರ ಬಹುಕಾಲ ಸಹಾಯಕ ಸಂಜಯ್ ಸಿಂಗ್ ಡಬ್ಲ್ಯುಎಫ್ಐನ ನೂತನ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಬ್ರಿಜ್ ಭೂಷಣ್ ಅವರು 12 ವರ್ಷಗಳ ಕಾಲ ಈ ಹುದ್ದೆಯನ್ನು ಅಲಂಕರಿಸಿದ್ದರು. ಉತ್ತರ ಪ್ರದೇಶದ ಬಿಜೆಪಿ ಸಂಸದರಾಗಿರುವ ಬ್ರಿಜ್ ವಿರುದ್ಧ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪವಿದೆ. ಸಾಕ್ಷಿ ಮಲ್ಲಿಕ್ ಸಹ ಆರೋಪ ಮಾಡಿದ್ದರು. ಅಲ್ಲದೆ, ಬ್ರಿಜ್ ವಿರುದ್ಧ ಭಾರಿ ಪ್ರತಿಭಟನೆಯೇ ನಡೆದಿತ್ತು.
ಇಂದು ನಡೆದ ಚುನಾವಣೆಯಲ್ಲಿ ಸಂಜಯ್ ಸಿಂಗ್ 47 ರಲ್ಲಿ 40 ಮತಗಳನ್ನು ಗಳಿಸಿ ವಿಜಯಶಾಲಿಯಾಗಿದ್ದಾರೆ. ಸಿಂಗ್ ವಿರುದ್ಧ ಸ್ಪರ್ಧಿಸಿದ್ದ ಕಾಮನ್ವೆಲ್ತ್ ಗೇಮ್ಸ್ನ ಚಿನ್ನದ ಪದಕ ವಿಜೇತೆ ಅನಿತಾ ಶೆರಾನ್ ಕೇವಲ 7 ಮತಗಳನ್ನು ಮಾತ್ರ ಗಳಿಸಿದರು.
ಚುನಾವಣಾ ಫಲಿತಾಂಶದ ಮೇಲೆ ದೇಶದ ಪ್ರಮುಖ ಕುಸ್ತಿ ಪಟುಗಳಾದ ಸಾಕ್ಷಿ ಮಲ್ಲಿಕ್, ವಿನೇಶ್ ಫೋಗಟ್ ಮತ್ತು ಭಜರಂಗ್ ಪೂನಿಯಾ ಅಸಮಾಧಾನ ಹೊರಹಾಕಿದ್ದಾರೆ. ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್ನ ಚಿನ್ನದ ಪದಕ ವಿಜೇತೆ ವಿನೇಶ್ ಫೋಗಟ್ ಅವರು ಮಾಧ್ಯಮಗಳ ಮುಂದೆ ಮಾತನಾಡುವಾಗ ಕಣ್ಣೀರಾಕಿದರು. ಡಬ್ಲ್ಯುಎಫ್ಐ ಅಧ್ಯಕ್ಷರಾಗಿ ಇದೀಗ ಸಂಜಯ್ ಸಿಂಗ್ ಆಯ್ಕೆಯಾಗಿದ್ದು, ಮಹಿಳಾ ಕುಸ್ತಿಪಟಿಗಳ ಮೇಲಿನ ಲೈಂಗಿಕ ಕಿರುಕುಳ ಮುಂದುವರಿಲಿದೆ ಎಂದರು. ಅಲ್ಲದೆ, ದೇಶದಲ್ಲಿ ಹೇಗೆ ನ್ಯಾಯವನ್ನು ಹುಡುಕಿಕೊಳ್ಳಬೇಕು ಎಂಬುದರ ಸುಳಿವು ಇಲ್ಲ. ನಮ್ಮ ಕುಸ್ತಿ ವೃತ್ತಿಯ ಭವಿಷ್ಯದ ಕತ್ತಲಲ್ಲಿದೆ. ನಾವು ಎಲ್ಲಿಗೆ ಹೋಗಬೇಕು ಎಂಬುದು ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಒಲಿಂಪಿಕ್ ಕಂಚಿನ ಪದಕ ವಿಜೇತ ಭಜರಂಗ್ ಪೂನಿಯಾ ಮಾತನಾಡಿ, ಸರಕಾರ ನಮಗೆ ನೀಡಿದ ಭರವಸೆಯನ್ನು ಈಡೇರಿಸದಿರುವುದು ದುರಾದೃಷ್ಟಕರ. ನಾವು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ ಮತ್ತು ರಾಜಕೀಯ ಮಾಡಲು ನಾವಿಲ್ಲಿಗೆ ಬಂದಿಲ್ಲ. ನಾವು ಸತ್ಯಕ್ಕಾಗಿ ಹೋರಾಡುತ್ತಿದ್ದೇವೆ. ಆದರೆ, ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಬೆಂಬಲಿಗ ಇದೀಗ ಡಬ್ಲ್ಯುಎಫ್ಐ ಅಧ್ಯಕ್ಷರಾಗಿದ್ದಾರೆ ಎಂದು ನೋವಿನಿಂದ ಹೇಳಿದರು.
ಸಾಕ್ಷಿ ಮಲ್ಲಿಕ್ ಮಾತನಾಡಿ, ಕುಸ್ತಿ ಒಕ್ಕೂಟವೂ ಮಹಿಳಾ ಮುಖ್ಯಸ್ಥರನ್ನು ಪಡೆಯಬೇಕೆಂದು ನಾವು ಬಯಸಿದ್ದೆವು. ಆದರೆ, ಅದು ಸಂಭವಿಸಲಿಲ್ಲ. ಇದಕ್ಕಾಗಿ ನಾವು ತುಂಬಾ ಹೋರಾಡಿದೆವು. ಆದರೆ, ಹೊಸದಾಗಿ ಆಯ್ಕೆಯಾದ ಅಧ್ಯಕ್ಷರು ಬ್ರಿಜ್ ಭೂಷಣ್ ಅವರ ಸಹಾಯಕರಾಗಿದ್ದಾರೆ ಮತ್ತು ವ್ಯಾಪಾರದಲ್ಲಿ ಪಾಲುದಾರರಾಗಿದ್ದರೆ. ಹೀಗಾಗಿ ನಾನು ಕುಸ್ತಿಯನ್ನು ತ್ಯಜಿಸುತ್ತೇನೆ ಎಂದು ಒಲಿಂಪಿಕ್ ಕಂಚಿನ ಪದಕ ವಿಜೇತೆ ತನ್ನ ಬೂಟುಗಳನ್ನು ಮೇಜಿನ ಮೇಲೆ ಇರಿಸಿ, ನೋವಿನ ಮಾತುಗಳನ್ನಾಡಿದರು.
ಈ ವರ್ಷದ ಜನವರಿಯಲ್ಲಿ ಈ ಮೂವರು ಕುಸ್ತಿಪಟುಗಳು ಜಂತರ್ ಮಂತರ್ನಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿದರು. ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಹಲವಾರು ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಮತ್ತು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಸರ್ಕಾರ ತನಿಖೆಗೆ ಆದೇಶಿಸಿದ ಬಳಿಕ ಪ್ರತಿಭಟನೆಯನ್ನು ಕೈಬಿಟ್ಟರು. ಚುನಾವಣೆಯಲ್ಲಿ ಬ್ರಿಜ್ ಕುಟುಂಬದ ಸದಸ್ಯರಿಗಾಗಲಿ, ಸಹಾಯಕರಿಗಾಗಲಿ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಲಾಗಿತ್ತು. ಆದರೆ, ಎಲ್ಲವು ಸುಳ್ಳಾಗಿದೆ. ಹೀಗಾಗಿ ಕುಸ್ತಿಪಟುಗಳು ಮತ್ತೊಮ್ಮೆ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ. (ಏಜೆನ್ಸೀಸ್)