ಮನೀಷ್ ಪಾಂಡೆಗೆ ಐವರು ಗೆಳತಿಯರು! ಯಾರವರು ಗೊತ್ತೇ?

manish-WEB
Published on

ಬೆಂಗಳೂರು: ಐಪಿಎಲ್‌ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯರೆಂಬ ಹೆಗ್ಗಳಿಕೆ ಹೊಂದಿರುವ ಕರ್ನಾಟಕದ ಬ್ಯಾಟ್ಸ್‌ಮನ್ ಮನೀಷ್ ಪಾಂಡೆ ಕಳೆದ ವರ್ಷಾಂತ್ಯದಲ್ಲಿ ತುಳುನಾಡ ಕುವರಿ ಆಶ್ರಿತಾ ಶೆಟ್ಟಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದರ ನಡುವೆಯೂ ಟೀಮ್ ಇಂಡಿಯಾ ಆಟಗಾರನಿಗೆ ಐವರು ಗರ್ಲ್‌ ಫ್ರೆಂಡ್‌ಗಳಿದ್ದಾರೆ ಎಂಬುದು ನಿಮಗೆ ಗೊತ್ತೇ? ಈ ವಿಷಯವನ್ನು ಸ್ವತಃ ಮನೀಷ್ ಪಾಂಡೆ ಅವರೇ ಬಹಿರಂಗಪಡಿಸಿದ್ದು, ಈ ಐವರೂ ಸದಾ ತಮ್ಮ ಬ್ಯಾಗ್‌ನಲ್ಲಿರುತ್ತಾರೆ ಎಂದೂ ಹೇಳಿಕೊಂಡಿದ್ದಾರೆ. ಗೊಂದಲ ಬೇಡ. ಈ ಐವರು ಗೆಳತಿಯರು ಅವರ ಬ್ಯಾಟ್‌ಗಳು! ತಮ್ಮ ಪಾಲಿಗೆ ವಿಶೇಷವಾದ ಐದು ಬ್ಯಾಟ್‌ಗಳನ್ನು ಅವರು ಗರ್ಲ್ ಫ್ರೆಂಡ್‌ಗಳಿಗೆ ಹೋಲಿಸಿದ್ದಾರೆ!

‘ನನ್ನ ಮಟ್ಟಿಗೆ ನನ್ನ ಬ್ಯಾಟ್‌ಗಳು ನನಗೆ ಗರ್ಲ್‌ ಫ್ರೆಂಡ್​‌ಗಳಿದ್ದಂತೆ. ನಾನು ಪಂದ್ಯಗಳನ್ನು ಆಡುವಾಗ ಅವು ನನ್ನ ಜತೆಗಿರುತ್ತವೆ. ನನ್ನ ನಿಜವಾದ ಗರ್ಲ್ ಫ್ರೆಂಡ್ (ಪತ್ನಿ ಆಶ್ರಿತಾ ಶೆಟ್ಟಿ) ಆಗ ನನ್ನ ಜತೆಗಿರುವುದಿಲ್ಲ. ನಾನು ನನ್ನ ಬ್ಯಾಟ್‌ಗಳ ಜತೆಗೆ ಜಗಳವನ್ನೂ ಮಾಡುತ್ತೇನೆ. ನಾನು ಚೆಂಡುಗಳನ್ನು ಎಡ್ಜ್ ಮಾಡಲು ಆರಂಭಿಸಿದಾಗ, ನೀನು ಬದಲಾಗಿದ್ದೀಯಾ ಎಂದು ಬ್ಯಾಟ್‌ಗೆ ಹೇಳುತ್ತೇನೆ. ಆಗ ಅದು ನನಗೆ, ಇಲ್ಲ ನೀನೇ ಬದಲಾಗಿದ್ದೀಯಾ ಎಂದು ಹೇಳಿದಂತಾಗುತ್ತದೆ’ ಎಂದು ಮನೀಷ್ ಪಾಂಡೆ ‘ಸ್ಪೈಸ್ ಪಿಚ್’ ಸರಣಿಯಲ್ಲಿ ಹೇಳಿದ್ದಾರೆ.

‘ನನ್ನ ಬ್ಯಾಗ್‌ನಲ್ಲಿ ಐವರು ಗರ್ಲ್ ಫ್ರೆಂಡ್‌ಗಳಿದ್ದಾರೆ. ಅವರೆಲ್ಲರೂ ವಿಶೇಷವಾದವರು. ನಾನು ಐಪಿಎಲ್‌ನಲ್ಲಿ ಶತಕ ಸಿಡಿಸಿದ ಬ್ಯಾಟ್‌ಅನ್ನು ಶಾಡೋ (ಛಾಯೆ) ಎಂದು ಕರೆಯುತ್ತೇನೆ. ನನಗೆ ಆತ್ಮವಿಶ್ವಾಸ ಬೇಕೆಂದಾಗ ಅಥವಾ ದೊಡ್ಡ ಕ್ಷಣವೊಂದಕ್ಕೆ ಸಜ್ಜಾಗಬೇಕಾದಾಗ ಅದನ್ನು ಬಳಸುತ್ತೇನೆ’ ಎಂದು 30 ವರ್ಷದ ಮನೀಷ್ ಪಾಂಡೆ ವಿವರಿಸಿದ್ದಾರೆ. 2008ರಲ್ಲಿ 19 ವಯೋಮಿತಿ ವಿಶ್ವಕಪ್ ಜಯಿಸಿದ ಭಾರತ ತಂಡದಲ್ಲಿ ಮನೀಷ್, ನಾಯಕ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾಗೆ ಸಹ-ಆಟಗಾರರಾಗಿದ್ದರು.

ಉತ್ತರಾಖಂಡ ಮೂಲದ ಮನೀಷ್ ಕಳೆದ ಡಿಸೆಂಬರ್‌ನಲ್ಲಿ ಮಂಗಳೂರು ಮೂಲದ ನಟಿ ಆಶ್ರಿತಾ ಶೆಟ್ಟಿ ಅವರನ್ನು ಮುಂಬೈನಲ್ಲಿ ವಿವಾಹವಾಗಿದ್ದರು. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಪ್ರಶಸ್ತಿ ಗೆಲುವಿನತ್ತ ಮುನ್ನಡೆಸಿದ ಮರುದಿನವೇ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅವರು ಭಾರತ ಪರ ಇದುವರೆಗೆ 26 ಏಕದಿನ ಮತ್ತು 37 ಟಿ20 ಪಂದ್ಯಗಳನ್ನು ಆಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net