ಆತನ ಬ್ಯಾಟಿಂಗ್​ ನೋಡಲು 100 ಕಿ.ಮೀ ಬರಿಗಾಲಲ್ಲಿ ಹೋಗುವೆ! ಟೀಮ್ ಇಂಡಿಯಾ ಆಟಗಾರನ ಬಗ್ಗೆ ನವಜೋತ್​ ಸಿಂಗ್ ಗುಣಗಾನ | Navjot Singh

ವಿಜಯವಾಣಿ - 2025-03-06T133837.083
Published on

Navjot Singh Sidhu: ಪ್ರಸಕ್ತ ದುಬೈ ಮತ್ತು ಪಾಕಿಸ್ತಾನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸತತ ನಾಲ್ಕು ಗೆಲುವನ್ನು ದಾಖಲಿಸಿರುವ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನೂ ಗೆದ್ದು ಇದೀಗ ನೇರವಾಗಿ ಫೈನಲ್​ಗೆ ಲಗ್ಗೆಯಿಟ್ಟಿದೆ.

ಬಾಂಗ್ಲಾದೇಶ, ಪಾಕಿಸ್ತಾನ, ನ್ಯೂಜಿಲೆಂಡ್​ ಮತ್ತು ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳನ್ನು ಗೆದ್ದು ಫೈನಲ್​ಗೆ ಎಂಟ್ರಿಕೊಟ್ಟಿರುವ ರೋಹಿತ್ ಶರ್ಮ ಪಡೆ, ಚಾಂಪಿಯನ್ಸ್​ ಟ್ರೋಫಿ ಫೈನಲ್​ ಹಣಾಹಣಿಯಲ್ಲಿ ಕಿವೀಸ್​ ಪಡೆ ವಿರುದ್ಧ ಗೆಲುವಿಗಾಗಿ ಸೆಣಸಲಿದೆ. ಈ ಪಂದ್ಯ ಖಂಡಿತ ರೋಚಕವಾಗಿರಲಿದೆ ಎಂಬುದು ಕ್ರಿಕೆಟ್​ ಅಭಿಮಾನಿಗಳ ಆಶಯ. ಇದೆಲ್ಲದರ ಮಧ್ಯೆ ಟೀಮ್ ಇಂಡಿಯಾ ಪರವಾಗಿ ಕಳೆದೆರೆಡು ಪಂದ್ಯಗಳಲ್ಲಿ ಮಿಂಚಿದ ದಾಖಲೆಗಳ ಸರದಾರ, ತಂಡದ ಸ್ಟಾರ್ ಬ್ಯಾಟರ್​ ವಿರಾಟ್​ ಕೊಹ್ಲಿ, ಪಾಕಿಸ್ತಾನ ವಿರುದ್ಧ ಶತಕ ಮತ್ತು ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಆಕರ್ಷಕ ಅರ್ಧ ಶತಕ ಸಿಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಚಾಂಪಿಯನ್ಸ್ ಟ್ರೋಫಿ ಟೂರ್ನಿಗೂ ಮುನ್ನ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದ ವಿರಾಟ್​, ಫ್ಲಾಪ್​ ಪಟ್ಟಿ ಸೇರಿದ್ದರು. ಕೊಹ್ಲಿಯ ಸರಣಿಯ ಫ್ಲಾಪ್​ ಪ್ರದರ್ಶನ ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸತ್ತು. ಆದ್ರೆ, ವಿರಾಟ್​ ಕೊಹ್ಲಿ ಅವರ ಅದ್ಭುತ ಇನ್ನಿಂಗ್ಸ್​ ಮತ್ತು ಬ್ಯಾಟಿಂಗ್ ವೈಖರಿಯನ್ನು ಕೊಂಡಾಡಿರುವ ಟೀಮ್ ಇಂಡಿಯಾ ಮಾಜಿ ಹಿರಿಯ ಆಟಗಾರ ನವಜೋತ್ ಸಿಂಗು ಸಿಧು, "ವಿರಾಟ್​ರನ್ನು ಅನುಮಾನಿಸಿದವರ ಮುಖಕ್ಕೆ ಕಪಾಳಮೋಕ್ಷ ಮಾಡಿ. ನಾನು ಯಾವಾಗಲೂ ಅವರನ್ನು ಮತ್ತು ಬಾಬರ್ ಅಜಮ್ ಅವರಂತಹ ಆಟಗಾರರನ್ನು ಬೆಂಬಲಿಸಿದ್ದೇನೆ. ಭಾರತ ತಂಡಕ್ಕೆ ಹಲವಾರು ಪಂದ್ಯ ಗೆಲ್ಲಿಸಿಕೊಟ್ಟವರ ಸಾಲಿಗೆ ವಿರಾಟ್ ಮತ್ತು ಕೆ.ಎಲ್​. ರಾಹುಲ್​ ಸೇರುತ್ತಾರೆ. ಈ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ" ಎಂದರು.

"ಏಕದಿನ ಪಂದ್ಯಗಳಲ್ಲಿ ಅನೇಕರು ಅತ್ಯಧಿಕ ರನ್ ಗಳಿಸಿದ್ದಾರೆ. ಆದರೆ, ಅವರಲ್ಲಿ ಎಷ್ಟು ಮಂದಿ ಪಂದ್ಯಗಳನ್ನು ಗೆದ್ದಿದ್ದಾರೆ? ಮೈಲಿಗಲ್ಲುಗಳಿಗಿಂತ ಗೆಲುವು ಮುಖ್ಯ. ಈ ವಿಷಯದಲ್ಲಿ ವಿರಾಟ್ ಎಲ್ಲರಿಗಿಂತ ಮುಂದಿದ್ದಾರೆ. ಕ್ರಿಕೆಟ್​ಗಾಗಿ ಅವರ ಬದ್ಧತೆ ಪ್ರಶಂಸನೀಯ. ಕೊಹ್ಲಿ ಸಂತೋಷವನ್ನು ಹರಡಿಸಲೆಂದೇ ಜನಿಸಿದ್ದಾರೆ. ಅವರ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ನಾನು 100 ಕಿಮೀ ಬರಿಗಾಲಿನಲ್ಲಿ ನಡೆದುಕೊಂಡು ಹೋಗಬಲ್ಲೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net