ಭಾರತ-ಆಸೀಸ್​ ಟಿ20 ಸರಣಿಯ ಕೊನೇ ಪಂದ್ಯ ಬೆಂಗಳೂರಿಗೆ ಸ್ಥಳಾಂತರ ಸಾಧ್ಯತೆ; ಹೀಗಿದೆ ಕಾರಣ...

beng web
Published on

ಬೆಂಗಳೂರು: ಏಕದಿನ ವಿಶ್ವಕಪ್​ ಮುಕ್ತಾಯಗೊಂಡ ಬೆನ್ನಲ್ಲೇ ಭಾರತ ತಂಡ ಪ್ರವಾಸಿ ಆಸ್ಟ್ರೆಲಿಯಾ ತಂಡದ ವಿರುದ್ಧ 5 ಪಂದ್ಯಗಳ ಏಕದಿನ ಸರಣಿ ಆಡಲಿದೆ. ವಿಶ್ವಕಪ್​ ಮುಗಿದ 4 ದಿನಗಳ ಬಳಿಕ ಅಂದರೆ ನವೆಂಬರ್​ 23ರಂದು ವಿಶಾಖಪಟ್ಟಣದಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದ್ದು, ಡಿಸೆಂಬರ್​ 3ರಂದು ಹೈದರಾಬಾದ್​ನಲ್ಲಿ 5ನೇ ಹಾಗೂ ಕೊನೇ ಟಿ20 ಪಂದ್ಯ ನಿಗದಿಯಾಗಿದೆ. ಆದರೆ ಅದೇ ದಿನ ತೆಲಂಗಾಣ ರಾಜ್ಯ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯಲಿದೆ. ಹೀಗಾಗಿ ಭದ್ರತಾ ಕಾರಣಗಳಿಂದಾಗಿ ಅದೇ ದಿನ ಹೈದರಾಬಾದ್​ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯವೊಂದನ್ನು ಆಯೋಜಿಸುವುದು ಕಠಿಣವೆನಿಸಿದ್ದು, ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸ್ಥಳಾಂತರಗೊಳ್ಳಲಿದೆ ಎನ್ನಲಾಗಿದೆ.

ಈ ಮುನ್ನ ಹೈದರಾಬಾದ್​ನಲ್ಲಿ ಸೆಪ್ಟೆಂಬರ್​ 29ರಂದು ವಿಶ್ವಕಪ್​ ಟೂರ್ನಿಯ ಅಭ್ಯಾಸ ಪಂದ್ಯವನ್ನು ನಿಗದಿಪಡಿಸಲಾಗಿತ್ತು. ಆದರೆ ಅದೇ ದಿನ ನಗರದಲ್ಲಿ ಗಣೇಶ ವಿಸರ್ಜನೆ ಇದ್ದ ಕಾರಣದಿಂದಾಗಿ ಪಂದ್ಯಕ್ಕೆ ಭದ್ರತಾ ಕಳವಳ ಉಂಟಾಗಿತ್ತು. ಅದರಿಂದಾಗಿ ಪಾಕಿಸ್ತಾನ-ನ್ಯೂಜಿಲೆಂಡ್​ ನಡುವಿನ ಆ ಪಂದ್ಯಕ್ಕೆ ಪ್ರೇಕ್ಷಕರಿಗೆ ಪ್ರವೇಶ ನೀಡದೆ, ಖಾಲಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಬಾರಿ ಮತ್ತೆ, ಚುನಾವಣಾ ಫಲಿತಾಂಶ ಪ್ರಕಟ ದಿನಾಂಕದ ಸಂರ್ಷದಿಂದಾಗಿ ತೆಲಂಗಾಣ ಪೊಲೀಸರು ಪಂದ್ಯಕ್ಕೆ ಭದ್ರತೆ ಒದಗಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದಾರೆ. ಈ ಬಾರಿ ಪಂದ್ಯವನ್ನು ಖಾಲಿ ಕ್ರೀಡಾಂಗಣದಲ್ಲಿ ನಡೆಸಲು ಬಿಸಿಸಿಐ ಸಿದ್ಧವಿಲ್ಲ. ಹೀಗಾಗಿ ಪಂದ್ಯವನ್ನು ಸ್ಥಳಾಂತರಗೊಳಿಸುವುದು ಉತ್ತಮ ನಿರ್ಧಾರವೆನಿಸಿದೆ.

ನಾಗ್ಪುರ ಪಂದ್ಯವೂ ಶಿಫ್ಟ್​?: ಆಸೀಸ್​ ವಿರುದ್ಧದ ಟಿ20 ಸರಣಿಯ 2, 3 ಮತ್ತು 4ನೇ ಪಂದ್ಯಗಳು ಕ್ರಮವಾಗಿ ತಿರುವನಂತಪುರ (ನವೆಂಬರ್​ 26), ಗುವಾಹಟಿ (ನವೆಂಬರ್​ 28) ಮತ್ತು ನಾಗ್ಪುರದಲ್ಲಿ (ಡಿಸೆಂಬರ್​ 1) ನಿಗದಿಯಾಗಿವೆ. ಈ ಪೈಕಿ ನಾಗ್ಪುರದ ಪಂದ್ಯವೂ ರಾಯ್​ಪುರಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆಗಳಿವೆ. ನಾಗ್ಪುರದ ವಿಸಿಎ ಸ್ಟೇಡಿಯಂನಲ್ಲಿ ಸದ್ಯ ಒಳಚರಂಡಿ ವ್ಯವಸ್ಥೆ ಸುಧಾರಣೆಗಾಗಿ ಮೈದಾನವನ್ನು ಅಗೆದು ಕಾಮಗಾರಿ ನಡೆಸಲಾಗುತ್ತಿದೆ. ಡಿಸೆಂಬರ್​ 1ರೊಳಗೆ ಈ ಕೆಲಸ ಪೂರ್ಣಗೊಂಡು ಮೈದಾನ ಪಂದ್ಯಕ್ಕೆ ಸಜ್ಜಾಗುವುದು ಅನುಮಾನವೆನಿಸಿದೆ. ಹೀಗಾಗಿ ಪಂದ್ಯ ಸ್ಥಳಾಂತರದ ಸಾಧ್ಯತೆ ಹೆಚ್ಚಿದೆ.

ಭುವನೇಶ್ವರ್​, ಪರಾಗ್​ಗೆ ಚಾನ್ಸ್​?

ವಿಶ್ವಕಪ್​ನಲ್ಲಿ ಆಡುತ್ತಿರುವ ಭಾರತ ತಂಡದ ಪ್ರಮುಖ ಆಟಗಾರರಿಗೆ ಆಸೀಸ್​ ವಿರುದ್ಧದ ಟಿ20 ಸರಣಿಯಿಂದ ವಿಶ್ರಾಂತಿ ನೀಡುವುದು ಬಹುತೇಕ ಖಚಿತವೆನಿಸಿದ್ದು, ಇತ್ತೀಚೆಗೆ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಯಲ್ಲಿ ಮಿಂಚಿರುವ ಆಟಗಾರರಿಗೆ ಅವಕಾಶ ಲಭಿಸುವ ನಿರೀಕ್ಷೆ ಮೂಡಿದೆ. 10 ಪಂದ್ಯಗಳಲ್ಲಿ 510 ರನ್​ ಬಾರಿಸಿ ಅಸ್ಸಾಂ ತಂಡವನ್ನು ಸೆಮಿಫೈನಲ್​ಗೂ ಏರಿಸಿದ್ದ ರಿಯಾನ್​ ಪರಾಗ್​ ಅವಕಾಶ ಪಡೆಯುವ ನಿರೀಕ್ಷೆ ಇದೆ. ಅನುಭವಿ ವೇಗಿ ಭುವನೇಶ್ವರ್​ ಕುಮಾರ್​, ಸ್ವಿಂಗ್​ ಎಸೆತಗಳ ಮೂಲಕ ದೇಶೀಯ ಟಿ20ಯಲ್ಲಿ ಮತ್ತೆ ಮಿಂಚಿರುವುದರಿಂದ ಅವರೂ ಪುನರಾಗಮನ ಸಾರುವ ಸಾಧ್ಯತೆಗಳಿವೆ. ಈ ವಾರ ಭಾರತ ಟಿ20 ತಂಡ ಪ್ರಕಟಗೊಳ್ಳುವ ನಿರೀಕ್ಷೆ ಇದ್ದು, ಏಷ್ಯನ್​ ಗೇಮ್ಸ್​ನಲ್ಲಿ ಸ್ವರ್ಣ ಪದಕ ಗೆದ್ದ ತಂಡವನ್ನು ಮುನ್ನಡೆಸಿದ್ದ ಆರಂಭಿಕ ಋತುರಾಜ್​ ಗಾಯಕ್ವಾಡ್​ಗೆ ಹಂಗಾಮಿ ನಾಯಕತ್ವ ಒಲಿಯುವ ಸಾಧ್ಯತೆಗಳಿವೆ. ಸಂಜು ಸ್ಯಾಮ್ಸನ್​, ಯಶಸ್ವಿ ಜೈಸ್ವಾಲ್​, ಶಿವಂ ದುಬೆ, ತಿಲಕ್​ ವರ್ಮ, ರಿಂಕು ಸಿಂಗ್​ ತಂಡದಲ್ಲಿ ಸ್ಥಾನ ಪಡೆಯಲಿರುವ ಇತರ ಪ್ರಮುಖ ಆಟಗಾರರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net