

ರಾವಲ್ಪಿಂಡಿ: ಇಲ್ಲಿನ ರಾವಲ್ಪಿಂಡಿ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರವಾಸಿ ತಂಡವು ಆತಿಥೇಯರ ವಿರುದ್ಧ ಮೇಲುಗೈ ಸಾಧಿಸುವ ಮೂಲಕ ಶಾಕ್ ನೀಡಿದ್ದು, ಪಾಕಿಸ್ತಾನದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಕನಸನ್ನು ಭಗ್ನಗೊಳಿಸಿದೆ.
ಇತ್ತ ಪ್ರವಾಸಿ ತಂಡದ ವಿರುದ್ಧ ಹೀನಾಯ ಪ್ರದರ್ಶನಕ್ಕೆ ಪಾಕ್ ಸರಿಯಾದ ಬೆಲೆ ತೆತ್ತಿದ್ದು, ಭಾರೀ ಟೀಕೆಗೆ ಗುರಿಯಾಗಿದೆ. ಇತ್ತ ತಮ್ಮ ತಂಡದ ಪ್ರದರ್ಶನ ಕಂಡು ಕಿಡಿಕಾರಿರುವ ಮಾಜಿ ಕ್ರಿಕೆಟಿಗರು ಇದೊಂದು ನೋವಿನ ಸಂಗತಿ ಎಂದು ಹೇಳುವ ಮೂಲಕ ಬೇಸರವನ್ನು ಹೊರಹಾಕಿದ್ದಾರೆ. ಈ ಕುರಿತು ಮಾಜಿ ನಾಯಕ ಜಾವೇದ್ ಮಿಯಂದಾದ್ ಮಾತನಾಡಿದ್ದು, ತಂಡದ ಹೀನಾಯ ಪ್ರದರ್ಶನಕ್ಕೆ ಪಿಸಿಬಿ ಕಾರಣ ಎಂದು ಕಿಡಿಕಾರಿದ್ದಾರೆ.
ನಮ್ಮ ದೇಶದ ಕ್ರಿಕೆಟ್ ತಂಡ ಈ ಹಂತಕ್ಕೆ ಬಂದಿರುವುದು ನನಗೆ ತುಂಬಾ ನೋವುಂಟು ಮಾಡಿದೆ. ಬಾಂಗ್ಲಾದೇಶ ಅವರ ಶಿಸ್ತುಬದ್ಧ ಪ್ರದರ್ಶನಕ್ಕಾಗಿ ಮನ್ನಣೆಗೆ ಅರ್ಹವಾಗಿದೆ. ಆದರೆ ಈ ಸರಣಿಯಲ್ಲಿ ನಮ್ಮ ಬ್ಯಾಟಿಂಗ್ ಕುಸಿದಿರುವುದು ಕೆಟ್ಟ ಸಂಕೇತವಾಗಿದೆ. ತಂಡದ ಈ ಪ್ರದರ್ಶನಕ್ಕೆ ಆಡಳಿತ ಮಂಡಳಿಯಲ್ಲಿನ ಕಿತ್ತಾಟವೇ ಮುಖ್ಯ ಕಾರಣ ಎಂದು ಆರೋಪಿಸಿದ್ದಾರೆ.
ನಾನು ಆಟಗಾರರನ್ನು ದೂಷಿಸುವುದಿಲ್ಲ ಏಕೆಂದರೆ ಕಳೆದ ಒಂದೂವರೆ ವರ್ಷಗಳಲ್ಲಿ ಮಂಡಳಿಯಲ್ಲಿ ಏನಾಯಿತು ಮತ್ತು ನಾಯಕತ್ವ ಮತ್ತು ನಿರ್ವಹಣೆಯ ಬದಲಾವಣೆಗಳು ತಂಡದ ಮೇಲೆ ಪರಿಣಾಮ ಬೀರಿದೆ. ಇದು ಸರಣಿ ಸೋಲಿಗೆ ಕಾರಣ ಎಂದು ಮಾಜಿ ನಾಯಕ ಜಾವೇದ್ ಮಿಯಂದಾದ್ ದೂಷಿಸಿದ್ದಾರೆ.