

ನವದೆಹಲಿ: ದೇಶದ ಪ್ರತಿಷ್ಠಿತ ಟಾಟಾ ಗ್ರೂಪ್ ಸೋಮವಾರದವರೆಗೆ ಐಪಿಎಲ್ 13ನೇ ಆವೃತ್ತಿಯ ಶೀರ್ಷಿಕೆ ಪ್ರಾಯೋಜಕತ್ವ ರೇಸ್ನಲ್ಲಿ ಮುಂಚೂಣಿಯಲ್ಲಿತ್ತು. ಆದರೆ ಮಂಗಳವಾರ ನಡೆದ ಅಂತಿಮ ಹಂತದ ಬಿಡ್ಡಿಂಗ್ ಪ್ರಕ್ರಿಯೆಯ ವೇಳೆ ಟಾಟಾ ಗ್ರೂಪ್ ರೇಸ್ನಿಂದ ಸಂಪೂರ್ಣವಾಗಿ ಹೊರ ನಡೆಯಿತು. ಇದರ ಹಿಂದಿನ ಕಾರಣವೇನೆಂದು ಗೊತ್ತೇ?
ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಸಂಬಂಧಿಸಿ ಟಾಟಾ ಗ್ರೂಪ್ ಇಟ್ಟಿದ್ದ ಬೇಡಿಕೆಗೆ ಬಿಸಿಸಿಐ ಸಮ್ಮತಿಸದ ಕಾರಣ ಅದು ಹಿಂದೆ ಸರಿಯಬೇಕಾಯಿತು. ಟಾಟಾ ಗ್ರೂಪ್ ಪ್ರಾಯೋಜಕತ್ವದಲ್ಲಿ ತನ್ನ ಒಟ್ಟು 3 ಬ್ರಾಂಡ್ಗಳ ಪ್ರಚಾರವನ್ನು ಬಯಸಿತ್ತು. ಅದು ಟಾಟಾ ಟೀ, ಟಾಟಾ ಮೋಟಾರ್ಸ್ ಮತ್ತು ಟೈಟಾನ್ ಸಂಸ್ಥೆಗಳ ಬ್ರಾಂಡ್ಅನ್ನು ಶೀರ್ಷಿಕೆ ಪ್ರಾಯೋಜಕತ್ವದಲ್ಲಿ ಬಳಸಲು ಬಯಸಿತ್ತು. ಅಲ್ಲದೆ ಪಂದ್ಯದ ವೇಳೆ ಮತ್ತು ಕ್ರೀಡಾಂಗಣದೊಳಗೆ ಈ ಬ್ರಾಂಡ್ಗಳ ಪ್ರಚಾರ ನಡೆಸಲು ಅವಕಾಶ ಕೋರಿತ್ತು. ಆದರೆ ಬಿಸಿಸಿಐ ಯಾವುದಾದರೂ ಒಂದು ಬ್ರಾಂಡ್ಗೆ ಮಾತ್ರ ಅವಕಾಶ ನೀಡುವುದಾಗಿ ತಿಳಿಸಿತು.
'ಬಿಸಿಸಿಐ ತನ್ನದೇ ಆದ ಪಾಲಿಸಿಯಿಂದಾಗಿ ಈ ನಿರ್ಧಾರ ಕೈಗೊಂಡಿತ್ತು. ಟಾಟಾದ 3 ಬ್ರಾಂಡ್ಗಳ ಪ್ರಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದೇ ಆದರೆ, ಮಾರುಕಟ್ಟೆಯಲ್ಲಿರುವ ಅದರ ಎದುರಾಳಿಗಳಾದ ಮಹೀಂದ್ರ, ಟೆಟ್ಲೆ ಅಥವಾ ಇನ್ಫೋಸಿಸ್ ಕಂಪನಿಗಳನ್ನು ಪ್ರಾಯೋಜಕತ್ವಕ್ಕೆ ಆಹ್ವಾನಿಸುವ ಅವಕಾಶವೇ ಉಳಿಯುತ್ತಿರಲಿಲ್ಲ' ಎಂದು ಬಿಸಿಸಿಐ ಅಧಿಕಾರಿ ವಿವರಿಸಿದ್ದಾರೆ.
ಟಾಟಾ ಗ್ರೂಪ್ನ ಈ ಬಯಕೆಯ ನಂತರ ಬಿಸಿಸಿಐ, ಬಹು-ಬ್ರಾಂಡ್ಗಳನ್ನು ಹೊಂದಿರುವ ಕಂಪನಿಗಳಿಗೆ ಭವಿಷ್ಯದಲ್ಲಿ ಪ್ರಾಯೋಜಕತ್ವ ನೀಡುವ ಬಗ್ಗೆ ಪರಿಶೀಲನೆ ನಡೆಸಲು ಮುಂದಾಗಿದೆ. ಆದರೆ ಸದ್ಯದ ಮಟ್ಟಿಗೆ ಬಿಸಿಸಿಐ ತನ್ನ ನಿಯಮವನ್ನು ಸಡಿಲಿಸಿಲ್ಲ. ಇದರಿಂದಾಗಿ ಟಾಟಾ ಗ್ರೂಪ್, ಕ್ರಿಕೆಟ್ ಜತೆ ಉತ್ತಮ ನಂಟು ಬೆಳೆಸಿಕೊಳ್ಳುವುದನ್ನು ನೋಡಲು ಇನ್ನಷ್ಟು ಸಮಯ ಕಾಯಬೇಕಾಗಿದೆ. ಕಳೆದೊಂದು ದಶಕದಿಂದ ಟಾಟಾ ಗ್ರೂಪ್ನ ಬ್ರಾಂಡ್ಗಳ ಪ್ರಚಾರಕ್ಕೆ ಕ್ರಿಕೆಟ್ ಅಷ್ಟಾಗಿ ಬಳಕೆಯಾಗಿಲ್ಲ. ಅದು ಈ ಬಾರಿಯೂ ಮುಂದುವರಿದಂತಾಗಿದೆ.