

ನವದೆಹಲಿ: ಐಪಿಎಲ್ನಲ್ಲಿ ಆರ್ಸಿಬಿ&ಎಲ್ಎಸ್ಜಿ ನಡುವಿನ ಪಂದ್ಯದ ವೇಳೆ ಜಗಳವಾಡಿದ್ದ ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ಭಾರತ-ಆಫ್ಘನ್ ನಡುವಿನ ವಿಶ್ವಕಪ್ ಪಂದ್ಯದಲ್ಲಿ ಮುಖಾಮುಖಿ ಆದಾಗ ಹಳೆ ದ್ವೇಷ ಮುಂದುವರಿಸುವ ನಿರೀಕ್ಷೆ ಎಲ್ಲರದಾಗಿತ್ತು. ಅದಕ್ಕೆ ತಕ್ಕಂತೆ ಪ್ರೇಕ್ಷಕರೂ ತುಪ್ಪ ಸುರಿಯಲು ಯತ್ನಿಸಿದರು. ಆದರೆ ಪಂದ್ಯದ ನಡುವೆ ಇಬ್ಬರೂ ಹಳೆ ಸಿಟ್ಟು ಮರೆತು ರಾಜಿಯಾಗಿಬಿಟ್ಟರು!
ಭಾರತದ ಚೇಸಿಂಗ್ ವೇಳೆ ವೇಗಿ ನವೀನ್ ಉಲ್ ಹಕ್ ಬೌಲಿಂಗ್ಗೆ ಬಂದಾಗ ಪ್ರೇಕ್ಷಕರು "ಕೊಹ್ಲಿ, ಕೊಹ್ಲಿ' ಎನ್ನುತ್ತ ಮತ್ತಷ್ಟು ಬಿಸಿ ಏರಿಸಲು ಪ್ರಯತ್ನಿಸಿದರು. ಆದರೆ ಕೊಹ್ಲಿ ಹಾಗೆ ಮಾಡಬೇಡಿ, ಎದುರಾಳಿಯನ್ನೂ ಗೌರವಿಸಿ ಎಂದು ಪ್ರೇಕ್ಷಕರಿಗೆ ಸನ್ನೆ ತೋರಿದರು. ಕೊಹ್ಲಿ ಅವರ ಈ ನಡೆ ಕ್ರಿಕೆಟ್ ಪ್ರೇಮಿಗಳ ಹೃದಯವನ್ನು ಮಾತ್ರ ಗೆದ್ದಿದ್ದಲ್ಲ, ನವೀನ್ ಕೋಪವನ್ನೂ ತಣ್ಣಗಾಗಿಸಿತು. ಕೊಹ್ಲಿ-ನವೀನ್ ಇಬ್ಬರೂ ನಗುತ್ತ ಹಸ್ತಲಾವ ನೀಡಿ ಪರಸ್ಪರ ತಬ್ಬಿಕೊಂಡರು. ಪಂದ್ಯದ ನಂತರವೂ ಇಬ್ಬರ ನಡುವೆ ಸೌಹಾರ್ದ ಮಾತುಕತೆ ನಡೆಯಿತು. ಬೆನ್ನಲ್ಲೇ ಇದರ ಚಿತ್ರ-ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದವು.
"ಪ್ರೇಕ್ಷಕರು ತವರಿನ ಆಟಗಾರರನ್ನು ಬೆಂಬಲಿಸುವುದು ಸಾಮಾನ್ಯ. ಅದರಂತೆ ದೆಹಲಿ ಪ್ರೇಕ್ಷಕರೂ ವರ್ತಿಸಿದರು. ಕೊಹ್ಲಿಗೆ ಅವರೊಬ್ಬ ಉತ್ತಮ ವ್ಯಕ್ತಿ, ಆಟಗಾರ. ನಾವಿಬ್ಬರು ಪರಸ್ಪರ ಶೇಕ್ ಹ್ಯಾಂಡ್ ಮಾಡಿದೆವು. ನಮ್ಮ ನಡುವೆ ಏನಾಯಿತೋ ಅದು ಮೈದಾನದಲ್ಲೇ ಇರಲಿದೆ. ಮೈದಾನದಿಂದ ಹೊರಗೆ ಹೋಗುವುದಿಲ್ಲ. ಜನರಷ್ಟೇ ಅದನ್ನು ದೊಡ್ಡದು ಮಾಡಿದರು. ನಾವು ಅದನ್ನು ಮುಕ್ತಾಯಗೊಳಿಸೋಣ ಎಂದು ಕೊಹ್ಲಿ ಹೇಳಿದರು. ನಾನು ಓಕೆ ಹೇಳಿದೆ' ಎಂದು 24 ವರ್ಷದ ನವೀನ್ ಉಲ್ ಹಕ್ ಪಂದ್ಯದ ಬಳಿಕ ಹೇಳಿದರು.