

ಮುಂಬೈ: ಟೀಂ ಇಂಡಿಯಾ ಕ್ರಿಕೆಟರ್ ಹಾರ್ದಿಕ್ ಪಾಂಡ್ಯಾ ಹೊಸವರ್ಷದಂದೇ ಗೆಳತಿ, ನಟಿ ನತಾಶಾ ಸ್ಟ್ಯಾಂಕೋವಿಕ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಯೋಗರಾಜ ಭಟ್ ನಿರ್ದೇಶನದ ದನ ಕಾಯೋನು ಸಿನಿಮಾದಲ್ಲಿ ಅಭಿನಯ ಮಾಡಿದ್ದ ಬಾಲಿವುಡ್ ನಟಿ ನತಾಶಾ ಹಾಗೂ ಹಾರ್ದಿಕ್ ಪಾಂಡ್ಯಾ ನಿಶ್ಚಿತಾರ್ಥ ಅವರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು.
ಆದರೆ ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಹಾರ್ದಿಕ್ ಪಾಂಡ್ಯಾ ಎಂಗೇಜ್ಮೆಂಟ್ ಬರೀ ಅಭಿಮಾನಿಗಳಿಗಷ್ಟೇ ಅಲ್ಲ ಅವರ ಕುಟುಂಬದವರಲ್ಲೂ ಅಚ್ಚರಿ ಮೂಡಿಸಿದೆ. ಹಾರ್ದಿಕ್ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಎಂದು ಅವರ ತಂದೆಗೇ ಗೊತ್ತಿರಲಿಲ್ಲವಂತೆ !
ಈ ಬಗ್ಗೆ ಹಾರ್ದಿಕ್ ಪಾಂಡ್ಯಾ ತಂದೆ ಹಿಮಾಂಶು ಅವರೇ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನತಾಶಾ ಒಳ್ಳೆಯ ಹುಡುಗಿ. ನಾವು ಆಕೆಯನ್ನು ಮುಂಬೈನಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಭೇಟಿಯಾಗಿದ್ದೇವೆ. ಹಾರ್ದಿಕ್ ಹಾಗೂ ನತಾಶಾ ದುಬೈಗೆ ಪ್ರವಾಸಕ್ಕೆ ಹೋಗಿದ್ದಾರೆಂದು ಗೊತ್ತಿತ್ತು. ಆದರೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ನಮಗೂ ಆಶ್ಚರ್ಯವಾಗಿದೆ ಎಂದಿದ್ದಾರೆ.
ಹಾರ್ದಿಕ್ ಪಾಂಡ್ಯ ಎಂಗೇಜ್ಮೆಂಟ್ ಆಗಿದ್ದರೂ ಮದುವೆಯ ದಿನಾಂಕವನ್ನು ಇನ್ನೂ ನಿಗದಿ ಮಾಡಿಲ್ಲ. ಬಹುಶಃ ಮುಂದಿನ ವರ್ಷ ಇರಬಹುದು ಎಂದು ಅವರ ಸ್ನೇಹಿತರೊಬ್ಬರು ತಿಳಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)