ಕೊನೆಯಲ್ಲಿ ಸಿರಾಜ್​ ಔಟಾದಾಗ ಹೇಗನಿಸಿತು? ಬ್ರಿಟನ್​ ಕಿಂಗ್​ ಚಾರ್ಲ್ಸ್​ ಪ್ರಶ್ನೆಗೆ ಗಿಲ್​ ಕೊಟ್ಟ ಉತ್ತರ ಹೀಗಿತ್ತು... Shubman Gill

Shubman Gill
Published on

Shubman Gill : ಇಂಗ್ಲೆಂಡ್​ ಪ್ರವಾಸದಲ್ಲಿರುವ ಟೀಮ್​ ಇಂಡಿಯಾ ನಿನ್ನೆ ಬ್ರಿಟನ್​ನ ಕಿಂಗ್ ಚಾರ್ಲ್ಸ್ III ಅವರನ್ನು ಭೇಟಿ ಮಾಡಿತು. ಇದೇ ವೇಳೆ ಕಿಂಗ್ ಚಾರ್ಲ್ಸ್ ಭಾರತ ತಂಡದ ನಾಯಕ ಶುಭಮಾನ್​ ಗಿಲ್​ ಬಳಿ ಕೊನೆಯಲ್ಲಿ ಮೊಹಮ್ಮದ್​ ಸಿರಾಜ್​ ಔಟ್​ ಆದಾಗ ಹೇಗನಿಸಿತು ಎಂದು ಪ್ರಶ್ನಿಸಿದರು. ಈ ವೇಳೆ ಗಿಲ್​ ನೀಡಿದ ಉತ್ತರ ವೈರಲ್​ ಆಗಿದೆ.

ಸೋಮವಾರ (ಜುಲೈ 14) ಲಾರ್ಡ್ಸ್‌ನಲ್ಲಿ ಕೊನೆಗೊಂಡ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 22 ರನ್‌ಗಳಿಂದ ಸೋತಿತು. ಅಗ್ರ ಕ್ರಮಾಂಕದ ಬ್ಯಾಟರ್​ಗಳು ಪ್ರಭಾವ ಬೀರಲು ವಿಫಲವಾದರು ಕೂಡ ಒಂದು ಹಂತದಲ್ಲಿ ಕೊನೆಯ ಆಟಗಾರರು ಅದ್ಭುತ ಹೋರಾಟ ನೀಡಿದ್ದರಿಂದ ಭಾರತೀಯ ತಂಡ ಗೆಲ್ಲುತ್ತದೆ ಎಂದು ತೋರುತ್ತಿತ್ತು. ಆದರೆ, ಮೊಹಮ್ಮದ್​ ಸಿರಾಜ್ ಕೊನೆಯ ವಿಕೆಟ್​ ಒಪ್ಪಿಸಿದಾಗ ಟೀಮ್ ಇಂಡಿಯಾದ ಭರವಸೆ ಹುಸಿಯಾಯಿತು. ಬಶೀರ್ ಎಸೆದ ಚೆಂಡನ್ನು ಸಿರಾಜ್ ರಕ್ಷಿಸಲು ಪ್ರಯತ್ನಿಸಿದರು ಆದರೆ, ಚೆಂಡು ನಿಧಾನವಾಗಿ ಹೋಗಿ ವಿಕೆಟ್‌ಗಳನ್ನು ತಟ್ಟಿತು. ಇದರೊಂದಿಗೆ ಭಾರತ ಸೋಲುವುದು ಖಚಿತವಾಯಿತು.

ಕಿಂಗ್ ಚಾರ್ಲ್ಸ್ ಅವರನ್ನು ಭೇಟಿಯಾದ ನಂತರ, ಗಿಲ್ ಕೆಲವು ವಿವರಗಳನ್ನು ಹಂಚಿಕೊಂಡರು. ಕಿಂಗ್ ಚಾರ್ಲ್ಸ್ ಅವರನ್ನು ಭೇಟಿಯಾಗಿದ್ದು ಸಂತೋಷವಾಯಿತು. ಅವರು ಬಹಳಷ್ಟು ವಿಷಯಗಳ ಬಗ್ಗೆ ಮಾತನಾಡಿದರು. ಮೂರನೇ ಟೆಸ್ಟ್‌ನಲ್ಲಿ ಕೊನೆಯ ಬ್ಯಾಟ್ಸ್‌ಮನ್ ಔಟಾದ ರೀತಿ ತುಂಬಾ ದುರದೃಷ್ಟಕರ ಎಂದು ಅವರು ಹೇಳಿದರು. ಚೆಂಡು ಆಕಸ್ಮಿಕವಾಗಿ ವಿಕೆಟ್‌ಗಳ ಮೇಲೆ ಹೋಯಿತು ಎಂದರು. ಆ ಸಮಯದಲ್ಲಿ ನಿಮಗೆ ಹೇಗನಿಸಿತು ಎಂದು ನನ್ನನ್ನು ಪ್ರಶ್ನಿಸಿದರು. ಅದು ದುರಾದೃಷ್ಟಕರ ಎಂದು ನಾನು ಹೇಳಿದೆ. ಸರಣಿಯ ಉಳಿದ ಎರಡು ಪಂದ್ಯಗಳಲ್ಲಿ ನಾವು ಉತ್ತಮ ಪ್ರದರ್ಶನ ನೀಡುತ್ತೇವೆ ಎಂದು ನಾವು ಕಿಂಗ್ ಚಾರ್ಲ್ಸ್‌ಗೆ ಹೇಳಿದ್ದೇವೆ ಎಂದರು.

ಇಂಗ್ಲೆಂಡ್‌ನಲ್ಲಿ ನಾವು ಎಲ್ಲೇ ಪಂದ್ಯಗಳನ್ನು ಆಡಿದರೂ ನಮಗೆ ಸಾಕಷ್ಟು ಬೆಂಬಲ ಸಿಗುತ್ತದೆ. ಅದಕ್ಕೆ ತಕ್ಕಂತೆ ಗೆಲ್ಲಲು ತಂಡ ಶ್ರಮಿಸುತ್ತಿದೆ. ಇದುವರೆಗಿನ ಸರಣಿಯಲ್ಲಿ ಎರಡೂ ತಂಡಗಳು ಉತ್ತಮ ಪ್ರದರ್ಶನ ನೀಡಿವೆ. ಮೂರೂ ಪಂದ್ಯಗಳು ಪ್ರೇಕ್ಷಕರನ್ನು ರಂಜಿಸಿವೆ. ಟೆಸ್ಟ್ ಪಂದ್ಯದ ಕೊನೆಯ ದಿನದ ಕೊನೆಯ ಅವಧಿಯಲ್ಲಿ ಒಂದು ತಂಡವು ಕಡಿಮೆ ಅಂತರದಿಂದ ಸೋತರೆ, ಅದು 'ಕ್ರಿಕೆಟ್' ಆ ಪಂದ್ಯವನ್ನು ಗೆದ್ದಂತೆ ಎಂದು ಗಿಲ್ ಹೇಳಿದರು.

ಕಿಂಗ್ ಚಾರ್ಲ್ಸ್​ ಅವರನ್ನು ಭೇಟಿಯಾದ ನಂತರ, ಪುರುಷರ ತಂಡವು ನಾಲ್ಕನೇ ಟೆಸ್ಟ್‌ಗಾಗಿ ಮ್ಯಾಂಚೆಸ್ಟರ್‌ಗೆ ತೆರಳಿತು, ಆದರೆ ಮಹಿಳಾ ತಂಡವು ODI ಸರಣಿಗಾಗಿ ಸೌತಾಂಪ್ಟನ್‌ಗೆ ಮರಳಿತು.

ಮಂಗಳವಾರ (ಜುಲೈ 15) ಲಂಡನ್‌ನ ಕ್ಲಾರೆನ್ಸ್ ಹೌಸ್ ಗಾರ್ಡನ್ಸ್‌ನಲ್ಲಿ ಕಿಂಗ್ ಚಾರ್ಲ್ಸ್, ಟೀಮ್​ ಇಂಡಿಯಾ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಇಂಗ್ಲೆಂಡ್‌ನ ಭಾರತೀಯ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ, ಉಪ ಹೈಕಮಿಷನರ್ ಸುಜಿತ್ ಘೋಷ್, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಕಾರ್ಯದರ್ಶಿ ದೇವಜಿತ್ ಸೈಕಿಯಾ ಮತ್ತು ಇತರರು ಭಾಗವಹಿಸಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net