

ನವದೆಹಲಿ: ಕ್ರಿಕೆಟ್ ಜಗತ್ತನ್ನು ಬೆಚ್ಚಿ ಬೀಳಿಸಿದ್ದ 2000ದ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ಪ್ರಮುಖ ಆರೋಪಿ ಹಾಗೂ ಬುಕ್ಕಿ ಸಂಜೀವ್ ಚಾವ್ಲಾ ಕೊನೆಗೂ ಇಂಗ್ಲೆಂಡ್ನಿಂದ ಭಾರತಕ್ಕೆ ಹಸ್ತಾಂತರಗೊಂಡಿದ್ದಾನೆ. ಇದರಿಂದ ಪ್ರಕರಣದ ಕೆಲ ಸ್ಪೋಟಕ ಮಾಹಿತಿಗಳನ್ನು ಆತ ಬಾಯಿ ಬಿಡುವ ನಿರೀಕ್ಷೆ ಹರಡಿದೆ. ಇದೇ ವೇಳೆ ಈ ಪ್ರಕರಣ ಹೇಗೆ ಬೆಳಕಿಗೆ ಬಂತು ಎಂಬ ಕುತೂಹಲಕಾರಿ ಅಂಶವೂ ಬಹಿರಂಗಗೊಂಡಿದೆ. 1999ರಲ್ಲಿ ಕಿಡ್ನಾಪ್ ಪ್ರಕರಣವೊಂದರ ತನಿಖೆ ನಡೆಸುವ ವೇಳೆ ದೆಹಲಿ ಪೊಲೀಸ್ ಸುಲಿಗೆ ನಿಗ್ರಹ ಘಟಕಕ್ಕೆ ಮ್ಯಾಚ್ ಫಿಕ್ಸಿಂಗ್ನ ಸುಳಿವು ಲಭಿಸಿತ್ತು!
ಕರೋಲ್ಭಾಗ್ ಮೂಲದ ಫಾರ್ಮಸೂಟಿಕಲ್ ಉದ್ಯಮಿಯ ಕುಟುಂಬಸ್ಥರ ಅಪಹರಣ ಪ್ರಕರಣವನ್ನು ಬೇಧಿಸಲು ಹೊರಟ ದೆಹಲಿ ಪೊಲೀಸರು, ದುಬೈನಿಂದ ಅಪಹರಣಕಾರರಿಂದ ಹಣಕ್ಕೆ ಬೇಡಿಕೆ ಬಂದ ವಿವಿಧ ದೂರವಾಣಿ ಸಂಖ್ಯೆಗಳನ್ನು ಟ್ಯಾಪ್ ಮಾಡುತ್ತಿದ್ದರು. ಈ ವೇಳೆ ಪೊಲೀಸರ ಗಮನ ಸೆಳೆದ, ದುಬೈನಿಂದ ದೆಹಲಿಗೆ ಕರೆ ಬಂದ ಒಂದು ಸಂಖ್ಯೆ ಸಂಜೀವ್ ಚಾವ್ಲಾಗೆ ಸೇರಿತ್ತು. ಆದರೆ ಕೆಲವಾರಗಳ ಕಾಲ ಸ್ವಿಚ್ ಆಫ್ ಆಗಿದ್ದ ಈ ಸಂಖ್ಯೆ ರಾಡರ್ನಿಂದ ಕಣ್ಮರೆಯಾಗಿತ್ತು. ಆದರೆ ಇದ್ದಕ್ಕಿದ್ದಂತೆ ಒಂದು ದಿನ ಆ ಸಂಖ್ಯೆಯಿಂದ ಕರೆ ಮಾಡಿದ ವ್ಯಕ್ತಿ, ವಿದೇಶೀಯನೊಬ್ಬನ ಜತೆ ಸರಣಿ ಮಾತುಕತೆ ನಡೆಸಿದ್ದು ಪೊಲೀಸರಿಗೆ ಗೊತ್ತಾಗಿತ್ತು. ಅವರಿಬ್ಬರ ಸಂಭಾಷಣೆಗಳನ್ನು ಕುತೂಹಲದಿಂದ ಆಲಿಸಿದ್ದ ಇನ್ಸ್ಪೆಕ್ಟರ್ ಈಶ್ವರ್ ಸಿಂಗ್ ಹೌಹಾರಿದ್ದರು. ಅದಕ್ಕೆ ಕಾರಣ ಮ್ಯಾಚ್ ಫಿಕ್ಸಿಂಗ್ ಕುರಿತಾದ ಮಾತುಗಳು.
ಬಳಿಕ ಈ ನಂಬರ್ಗಳ ಮಾಹಿತಿಗಳನ್ನು ಪತ್ತೆ ಹಚ್ಚಿದಾಗ, ದುಬೈನಿಂದ ಕರೆ ಮಾಡಿದಾಗ ಬುಕ್ಕಿ ಸಂಜೀವ್ ಚಾವ್ಲಾ ಮತ್ತು ಆತನ ಜತೆ ಮಾತನಾಡಿದ ವಿದೇಶಿ ವ್ಯಕ್ತಿ ದಕ್ಷಿಣ ಆಫ್ರಿಕಾ ತಂಡದ ಅಂದಿನ ನಾಯಕ ಹ್ಯಾನ್ಸಿ ಕ್ರೋನಿಯೆ ಎಂದು ಗೊತ್ತಾಗಿತ್ತು. ಇದರ ಜಾಡು ಹಿಡಿದು ಹೊರಟ ಪೊಲೀಸರು ಕ್ರಿಕೆಟ್ ಜಗತ್ತಿನಲ್ಲಿ ಭುಗಿಲೆಬ್ಬಿಸಿದ್ದ ಮ್ಯಾಚ್ ಫಿಕ್ಸಿಂಗ್ ಹಗರಣವನ್ನು ಬೆಳಕಿಗೆ ತಂದಿದ್ದರು. ಚಾವ್ಲಾ ಭಾರತದಲ್ಲಿನ ಹಲವು ಬುಕ್ಕಿಗಳ ಜತೆಗೆ ಸಂಪರ್ಕದಲ್ಲಿದ್ದುದು ಕೂಡ ಗೊತ್ತಾಗಿತ್ತು ಇದೇ ವೇಳೆ ಗೊತ್ತಾಗಿತ್ತು.
ಒಂದು ಸಂಭಾಷಣೆಯ ವೇಳೆ ಒಬ್ಬ ವ್ಯಕ್ತಿ, ‘ನಾಯಕ ನನ್ನ ಕೋಣೆಗೆ ಬರಲಿದ್ದಾನೆ’ ಎಂದಿದ್ದ. ಯಾವ ನಾಯಕನ ಬಗ್ಗೆ ಆತ ಮಾತನಾಡುತ್ತಿದ್ದಾನೆ ಎಂಬುದು ಪೊಲೀಸರಿಗೆ ಸ್ಪಷ್ಟವಾಗಿರಲಿಲ್ಲ. ಆದರೆ 2000ದ ಮಾರ್ಚ್ 14ರಂದು ಚಾವ್ಲಾ ದೆಹಲಿಯ ಪಂಚತಾರಾ ಹೋಟೆಲ್ ಒಂದರ ರೂಮ್ ನಂ. 346ರಲ್ಲಿ ಯಾರನ್ನೋ ಭೇಟಿಯಾಗಿದ್ದ ಎಂಬುದು ಗೊತ್ತಾಗಿತ್ತು. ಆಗ ಹೋಟೆಲ್ಗೆ ಹೋಗಿ ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಅದು ಹ್ಯಾನ್ಸಿ ಕ್ರೋನಿಯೆ ಅವರ ಕೋಣೆ ಎಂಬುದು ಗೊತ್ತಾಗಿತ್ತು. ಅದೇ ಸಮಯದಲ್ಲಿ ಭಾರತ-ದಕ್ಷಿಣ ಆಫ್ರಿಕಾ ನಡುವೆ ದೆಹಲಿಯಲ್ಲಿ ಏಕದಿನ ಪಂದ್ಯ ನಡೆದಿತ್ತು ಮತ್ತು ಅದನ್ನು ಫಿಕ್ಸ್ ಮಾಡಲು ಹಣದ ಮಾತುಕತೆಯೂ ನಡೆದಿತ್ತು. ಚಾರ್ಜ್ ಶೀಟ್ ಪ್ರಕಾರ, ದಕ್ಷಿಣ ಆಫ್ರಿಕಾ ತಂಡದ ಆ ಪ್ರವಾಸದಲ್ಲಿ ಮುಂಬೈನಲ್ಲಿ ನಡೆದ ಮೊದಲ ಟೆಸ್ಟ್ ಮತ್ತು ಕೊಚ್ಚಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯವೂ ಫಿಕ್ಸ್ ಆಗಿತ್ತು.
ಗುರುವಾರ ನವದೆಹಲಿಗೆ ಬಂದ ಬಳಿಕ ಟ್ರಯಲ್ ಕೋರ್ಟ್ ಎದುರು ಹಾಜರಾದ ಸಂಜೀವ್ ಚಾವ್ಲಾನನ್ನು 12 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಫೆ. 25ರಂದು ಮತ್ತೆ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದೆ. -ಪಿಟಿಐ/ಏಜೆನ್ಸೀಸ್
ಐಪಿಎಲ್ ಫಿಕ್ಸಿಂಗ್ನಿಂದ ಮತ್ತೆ ಜೀವಂತ!
ದಕ್ಷಿಣ ಆಫ್ರಿಕಾದಲ್ಲಿ ಫಿಕ್ಸಿಂಗ್ ಪ್ರಕರಣದ ತನಿಖೆ ನಡೆಸಿದ್ದ ಕಿಂಗ್ಸ್ ಕಮಿಷನ್ ಎದುರು ತಪ್ಪೊಪ್ಪಿಕೊಂಡಿದ್ದ ಹ್ಯಾನ್ಸಿ ಕ್ರೋನಿಯೆ, 2002ರಲ್ಲಿ ವಿಮಾನ ಅಪಘಾತದಲ್ಲಿ ನಿಧನ ಹೊಂದಿದ್ದರು. ಇತ್ತ ಭಾರತದಲ್ಲೂ ಭುಗಿಲೆಬ್ಬಿಸಿದ್ದ ಪ್ರಕರಣದಲ್ಲಿ ಬಿಸಿಸಿಐ, ಮಾಜಿ ನಾಯಕ ಮೊಹಮದ್ ಅಜರುದ್ದೀನ್, ಅಜಯ್ ಜಡೇಜಾ, ಮನೋಜ್ ಪ್ರಭಾಕರ್ ಸಹಿತ ಐವರಿಗೆ ನಿಷೇಧ ಹೇರಿತ್ತು. ಆದರೆ ಇತ್ತ ಪೊಲೀಸ್ ತನಿಖೆ ಮಾತ್ರ ಹಳ್ಳ ಹಿಡಿದಿತ್ತು. 2013ರಲ್ಲಿ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಬೆಳಕಿಗೆ ಬಂದಾಗ ಮತ್ತೆ 2000ದ ಮ್ಯಾಚ್ ಫಿಕ್ಸಿಂಗ್ ಪ್ರಕರಣವೂ ಮರುಜೀವ ಪಡೆದುಕೊಂಡಿತ್ತು. ಐಪಿಎಲ್ ಪ್ರಕರಣ ಸಂಬಂಧ ಸುದ್ದಿಗೋಷ್ಠಿಯಲ್ಲಿ ಆಗಿನ ದೆಹಲಿ ಪೊಲೀಸ್ ಕಮಿಷನರ್ ನೀರಜ್ ಕುಮಾರ್ಗೆ ಪತ್ರಕರ್ತರು, 2000ದ ಪ್ರಕರಣದಲ್ಲಿ ಇನ್ನೂ ಚಾರ್ಜ್ಶೀಟ್ ಆಗಿಲ್ಲವಲ್ಲ ಎಂದು ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ನೀರಜ್, ಆಗಿನ ಡಿಸಿಪಿ (ಅಪರಾಧ) ಅಲೋಕ್ ಕುಮಾರ್ಗೆ ಪ್ರಕರಣದ ಫೈಲ್ ಮತ್ತೆ ತೆರೆಯುವಂತೆ ಸೂಚಿಸಿದ್ದರು. 2013ರ ಜುಲೈನಲ್ಲಿ ನೀರಜ್ ನಿವೃತ್ತಿಗೆ ಒಂದು ದಿನ ಮುನ್ನ ಕೊನೆಗೂ ಚಾರ್ಜ್ಶೀಟ್ ಸಲ್ಲಿಸಲಾಗಿತ್ತು. 2016ರಲ್ಲಿ ವಿದೇಶಾಂಗ ಸಚಿವಾಲಯದ ನೆರವಿನೊಂದಿಗೆ, ಸಂಜೀವ್ ಚಾವ್ಲಾನನ್ನು ಬ್ರಿಟನ್ನಿಂದ ಭಾರತಕ್ಕೆ ಕರೆತರುವ ಪ್ರಕ್ರಿಯೆ ಆರಂಭಿಸಲಾಗಿತ್ತು.
ಚಾವ್ಲಾ ವಿಚಾರಣೆ, ಬಿಸಿಸಿಐ ಮನವಿ
ಮ್ಯಾಚ್ ಫಿಕ್ಸಿಂಗ್ ಪ್ರಕರಣದ ಪ್ರಮುಖ ಆರೋಪಿ ಸಂಜೀವ್ ಚಾವ್ಲಾ ವಿಚಾರಣೆ ನಡೆಸಲು ಅವಕಾಶ ನೀಡಬೇಕೆಂದು ದೆಹಲಿ ಪೊಲೀಸರಿಗೆ ಮನವಿ ಸಲ್ಲಿಸುವುದಾಗಿ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕದ (ಎಸಿಯು) ಮುಖ್ಯಸ್ಥ ಅಜಿತ್ ಸಿಂಗ್ ಹೇಳಿದ್ದಾರೆ. ಚಾವ್ಲಾ ನೀಡುವ ಮಾಹಿತಿಗಳು ತಮಗೆ ಭವಿಷ್ಯದ ತನಿಖೆಗಳಿಗೂ ನೆರವಾಗಬಹುದು ಎಂದು ಅಜಿತ್ ಸಿಂಗ್ ಹೇಳಿದ್ದಾರೆ. ‘ದೆಹಲಿ ಪೊಲೀಸರನ್ನು ಶೀಘ್ರ ಸಂರ್ಪಸಲಿದ್ದೇವೆ. ಚಾವ್ಲಾ ಸದ್ಯ ಅವರ ಕಸ್ಟಡಿಯಲ್ಲಿದ್ದು, ಏನೆಲ್ಲಾ ಮಾಹಿತಿ ಬಹಿರಂಗ ಪಡಿಸಿದ್ದಾನೆ ಎಂಬುದನ್ನು ತಿಳಿದುಕೊಳ್ಳಲಿದ್ದೇವೆ. ದೆಹಲಿ ಪೊಲೀಸರು ಅನುಮತಿ ನೀಡಿದರೆ ನಾವೂ ಆತನನ್ನು ವಿಚಾರಣೆಗೆ ಒಳಪಡಿಸಲಿದ್ದೆವೆ’ ಎಂದು ಅವರು ಹೇಳಿದ್ದಾರೆ.