ಇನ್ನು ಬಿಕಿನಿ ಚಿತ್ರ ಪೋಸ್ಟ್​ ಮಾಡುವುದಿಲ್ಲ ಎಂದು ಟೆನಿಸ್​ ತಾರೆ ಬೌಚಾರ್ಡ್​ ಹೇಳಿದ್ಯಾಕೆ?

bouchard bikini
Published on

ಟೊರಾಂಟೊ: ಕೆನಡದ ಟೆನಿಸ್​ ತಾರೆ ಎಗುನಿ ಬೌಚಾರ್ಡ್​ ಇತ್ತೀಚೆಗೆ ಅಂಗಣಕ್ಕಿಂತ ಅಂಗಣದ ಹೊರಗಿನ ಚಟುವಟಿಕೆಗಳಿಂದಲೇ ಹೆಚ್ಚು ಸುದ್ದಿಯಲ್ಲಿರುವವರು. ಈ ನಡುವೆ ಅವರು ವಿಶೇಷವಾದ ಪ್ರತಿಜ್ಞೆಯೊಂದನ್ನು ಮಾಡಿದ್ದಾರೆ. ಅದುವೇ, ಇನ್ನೆಂದೂ ಸಾಮಾಜಿಕ ಜಾಲತಾಣಗಳಲ್ಲಿ ಬಿಕಿನಿ ಚಿತ್ರಗಳನ್ನು ಪೋಸ್ಟ್​ ಮಾಡುವುದಿಲ್ಲ ಎಂದು! ಅವರ ಈ ನಿರ್ಧಾರದ ಹಿಂದೆ ಕಾರಣವೊಂದಿದೆ...

2014ರ ವಿಂಬಲ್ಡನ್​ ರನ್ನರ್​ಅಪ್​ ಬೌಚಾರ್ಡ್​ ಈಗ ವಿಶ್ವ ರಾಂಕಿಂಗ್​ನಲ್ಲಿ 5ರಿಂದ 330ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಮೈದಾನದ ಹೊರಗಿನ ಅವರ ಚಟುವಟಿಕೆಗಳು ಹೆಚ್ಚಾಗಿದ್ದೇ ಇದಕ್ಕೆ ಕಾರಣ. ಈ ನಡುವೆ ಅವರ ಬಿಕಿನಿ ಚಿತ್ರಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಂದ ಭಾರಿ ಟೀಕೆಗಳು ಕೇಳಿಬರುತ್ತಿದ್ದವು.

'ನಾನು ಜನರ ಅಭಿಪ್ರಾಯಗಳಿಗೆ ಬೆಲೆ ನೀಡುತ್ತೇನೆ. ನಾನು ಏನನ್ನು ಪೋಸ್ಟ್​ ಮಾಡುತ್ತೇನೋ ಅದರ ಬಗ್ಗೆ ಅವರು ತೀರ್ಪು ನೀಡುತ್ತಾರೆ. ಹೀಗಾಗಿ ಬಿಕಿನಿ ಚಿತ್ರಗಳನ್ನು ಸಾಧ್ಯವಾದಷ್ಟು ಪೋಸ್ಟ್​ ಮಾಡದಿರಲು ಪ್ರಯತ್ನಿಸುತ್ತೇನೆ. ನಾನು ಬಿಕಿನಿ ಚಿತ್ರಗಳನ್ನು ಪೋಸ್ಟ್​ ಮಾಡುತ್ತಿದ್ದರೆ ಜನರು, ನಾನು ಟೆನಿಸ್​ ಆಡುವುದನ್ನೇ ಬಿಟ್ಟಿದ್ದೇನೆ ಎಂದುಕೊಳ್ಳುತ್ತಿದ್ದಾರೆ. ಅದು ಈಗ ನನ್ನ ಮೇಲೆ ಸ್ವಲ್ಪ ಮಟ್ಟಿಗೆ ಪ್ರಭಾವ ಬೀರಿದೆ. ಅಲ್ಲದೆ ನಾನೀಗ ಹೆಚ್ಚಿನ ಪ್ರೌಢತೆಯನ್ನೂ ಪಡೆದುಕೊಂಡಿದ್ದೇನೆ. ಹೀಗಾಗಿ ನಾನೀಗ ಪ್ರತಿದಿನ ಅಂಥ ಚಿತ್ರಗಳನ್ನು ಪೋಸ್ಟ್​ ಮಾಡುವುದನ್ನು ಸಾಧ್ಯವಾದಷ್ಟು ನಿಯಂತ್ರಿಸಿಕೊಳ್ಳುತ್ತಿದ್ದೇನೆ' ಎಂದು 26 ವರ್ಷದ ಬೌಚಾರ್ಡ್​ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಬೌಚಾರ್ಡ್​ ಇನ್​ಸ್ಟಾಗ್ರಾಂನಲ್ಲಿ 2.1 ದಶಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳ ಈ ಅಭಿಮಾನಿಗಳಿಂದಲೇ ತಮಗೆ ಪ್ರಾಯೋಜಕರನ್ನು ಸೆಳೆದುಕೊಳ್ಳಲು ಸಾಧ್ಯವಾಗಿದೆ ಎಂಬುದನ್ನು ಬೌಚಾರ್ಡ್​ ಒಪ್ಪಿಕೊಳ್ಳುತ್ತಾರೆ. 'ಪ್ರಾಯೋಜಕತ್ವಕ್ಕೆ ಬರುವವರೆಲ್ಲರೂ ನನ್ನ ಹಿಂಬಾಲಕರ ಸಂಖ್ಯೆ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಹೀಗಾಗಿ ನಾನು ಜನರಿಗೆ ಹೆಚ್ಚಿನ ಮೌಲ್ಯ ನೀಡುತ್ತೇನೆ. ಹೆಚ್ಚಿನ ಜನರನ್ನು ಸಂಪಾದಿಸುವುದು ಮುಖ್ಯವಾದುದು' ಎಂದು ಬೌಚಾರ್ಡ್​ ಹೇಳಿದ್ದಾರೆ. ಅವರು ಈ ವಾರ ಪ್ರಾಗ್​ವೆ ಓಪನ್​ ಟೂರ್ನಿಯಲ್ಲಿ ಆಡುವ ಮೂಲಕ ಮರಳಿ ಟೆನಿಸ್​ ಕೋರ್ಟ್​ಗೆ ಇಳಿದಿದ್ದಾರೆ. ಇದು ಕಳೆದ ಜನವರಿ ಬಳಿಕ ಅವರು ಆಡಿದ ಮೊದಲ ಟೆನಿಸ್​ ಟೂರ್ನಿಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net