

ನವದೆಹಲಿ: ತವರಿನ ನೆಚ್ಚಿನ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್- ಚಿರಾಗ್ ಶೆಟ್ಟಿ ಇಂಡಿಯಾ ಓಪನ್ ಸೂಪರ್-750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ರನ್ನರ್ ಅಪ್‌ಗೆ ತೃಪ್ತಿಪಟ್ಟಿದೆ. ಭಾನುವಾರ ನಡೆದ ೈನಲ್‌ನಲ್ಲಿ ವಿಶ್ವ ನಂ.2 ಸಾತ್ವಿಕ್-ಚಿರಾಗ್ ಜೋಡಿ 21-15, 11-21,18-21 ಮೂರು ಗೇಮ್‌ಗಳ ಹೋರಾಟದಲ್ಲಿ ವಿಶ್ವ ಚಾಂಪಿಯನ್, ಕೊರಿಯಾದ ಕಾಂಗ್ ಮಿನ್ ಹ್ಯುಕ್- ಸಿಯೊ ಸಾಂಗ್ ಜೇ ಎದುರು ಪ್ರಶಸ್ತಿ ಸುತ್ತಿನಲ್ಲಿ ನಿರಾಸೆ ಅನುಭವಿಸಿತು.
ಏಷ್ಯನ್ ಗೇಮ್ಸ್ ಚಾಂಪಿಯನ್ ಸಾತ್ವಿಕ್- ಚಿರಾಗ್ ಜೋಡಿ ಮೊದಲ ಗೇಮ್‌ನಲ್ಲಿ ಮೇಲುಗೈ ಸಾಧಿಸಿ ಮುನ್ನಡೆ ಕಾಯ್ದುಕೊಂಡಿತು. ಎರಡನೇ ಗೇಮ್‌ನಲ್ಲಿ ತಿರುಗೇಟು ನೀಡಿದ ವಿಶ್ವ ನಂ.3 ಕಾಂಗ್ ಮಿನ್ ಹ್ಯುಕ್- ಸಿಯೊ ಸಾಂಗ್ ಜೇ ಜೋಡಿ ಎದುರು ನೆಟ್ ಬಳಿ ಕೆಲವು ತಪ್ಪುಗಳನ್ನು ಎಸಗಿದ ಸಾತ್ವಿಕ್-ಚಿರಾಗ್ ಜೋಡಿ ಹಿನ್ನಡೆ ಅನುಭವಿಸಿತು. ಇದರೊಂದಿಗೆ ಪಂದ್ಯ ನಿರ್ಣಾಯಕ ಮೂರನೇ ಗೇಮ್‌ಗೆ ಸಾಗಿತು. 65 ನಿಮಿಷಗಳ ಪ್ರಬಲ ಪೈಪೋಟಿಯಲ್ಲಿ ಸಾತ್ವಿಕ್-ಚಿರಾಗ್ ಪ್ರತಿರೋಧ ತೋರಿದರೂ ಗೆಲುವು ದೊರೆಯಲಿಲ್ಲ. ಕೊರಿಯಾ ಜೋಡಿ ಎದುರಿನ ಹಿಂದಿನ ಐದು ಮುಖಾಮುಖಿಯಲ್ಲಿ ಒಮ್ಮೆ ಮಾತ್ರ ಜಯಿಸಿದ್ದ, ಸಾತ್ವಿಕ್-ಚಿರಾಗ್ ಜೋಡಿ 4 ಬಾರಿ ಸೋಲುಂಡಿದೆ.
2022ರಲ್ಲಿ ಚಾಂಪಿಯನ್ ಎನಿಸಿದ್ದ ಸಾತ್ವಿಕ್-ಚಿರಾಗ್ ಈ ಬಾರಿ ರನ್ನರ್ ಅಪ್ ಆಗುವ ಮೂಲಕ ವರ್ಷದ ಸತತ ಎರಡನೇ ಟೂರ್ನಿಯಲ್ಲಿ ಪ್ರಶಸ್ತಿಯಿಂದ ವಂಚಿತವಾಯಿತು. ಇದಕ್ಕೂ ಮುನ್ನ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿತ್ತು.