ಹಾಕಿ ವಿಶ್ವಕಪ್​ ಕನಸಿನಲ್ಲಿ ಕರ್ನಾಟಕದ ಆಕಸ್ಮಿಕ ಗೋಲು ಕೀಪರ್​ ಮೋಹಿತ್​

ಹಾಕಿ ವಿಶ್ವಕಪ್​ ಕನಸಿನಲ್ಲಿ ಕರ್ನಾಟಕದ ಆಕಸ್ಮಿಕ ಗೋಲು ಕೀಪರ್​ ಮೋಹಿತ್​
ಹಾಕಿ ವಿಶ್ವಕಪ್​ ಕನಸಿನಲ್ಲಿ ಕರ್ನಾಟಕದ ಆಕಸ್ಮಿಕ ಗೋಲು ಕೀಪರ್​ ಮೋಹಿತ್​
Published on

ಪ್ರಮುಖ ಮುಖ್ಯಾಂಶಗಳು

  • 12 ವರ್ಷಗಳ ನಂತರ ಹಾಕಿ ವಿಶ್ವಸಮರಕ್ಕೆ ಭಾರತ ತಂಡದಲ್ಲಿ ಕನ್ನಡಿಗ
  • 5 ದಶಕಗಳ ಪ್ರಶಸ್ತಿ ಬರ ನೀಗಿಸುವ ತವಕ

ಗುರುರಾಜ್​ ಬಿ.ಎಸ್​. ಬೆಂಗಳೂರು


ಬಾಲ್ಯದಲ್ಲಿ ಕ್ರಿಕೆಟ್​ "ಬ್ಯಾಟ್​', ಶಾಲಾ ದಿನಗಳಲ್ಲಿ ವಾಲಿಬಾಲ್​' ಹಿಡಿದು ಮೈದಾನದಲ್ಲಿ ಆಡುತ್ತಿದ್ದ ಬಾಲಕ ಹಾಕಿ ತಂಡದ ಗೋಲು ಕೀಪರ್​ ಆಗಿ ರೂಪುಗೊಂಡಿದ್ದು ಆಕಸ್ಮಿಕ. ಹಾಕಿ ವಿಶ್ವಕಪ್​ನಲ್ಲಿ (FIH Hockey World Cup) 51 ವರ್ಷಗಳ ಪ್ರಶಸ್ತಿ ಬರ ನೀಗಿಸಲು ಆಯ್ಕೆಯಾಗಿರುವ ಭಾರತ ಪುರುಷರ ತಂಡದ ಭಾಗವಾಗಿರುವ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹೊನ್ನೆನಹಳ್ಳಿಯ ಎಚ್​.ಎಸ್​ ಮೋಹಿತ್​ ಈ "ಆಕಸ್ಮಿಕ' ಗೋಲು ಕೀಪರ್​. ಜಪಾನ್​ನಲ್ಲಿ ನಿಗದಿಯಾಗಿರುವ ಏಷ್ಯನ್​ ಗೇಮ್ಸ್​ಗೂ ಅವರು ಆಯ್ಕೆ ಆಗಿದ್ದಾರೆ. ಆಗಸ್ಟ್​ 15ಕ್ಕೆ ಬೆಲ್ಜಿಯಂ-ನೆದರ್ಲ್ಯಾಂಡ್ಸ್​ ಜಂಟಿ ಆತಿಥ್ಯದಲ್ಲಿ ಆರಂಭವಾಗಲಿರುವ ಎಫ್​​ಐಎಚ್​ ಹಾಕಿ ವಿಶ್ವಕಪ್​ನಲ್ಲಿ 12 ವರ್ಷಗಳ ನಂತರ ಭಾರತ ತಂಡದ ಪರ ಆಡಲಿರುವ ಕನ್ನಡಿಗ ಎನಿಸಿಕೊಳ್ಳಲಿರುವ 24 ವರ್ಷದ ಮೋಹಿತ್​ ಈ ಕುರಿತು "ವಿಜಯವಾಣಿ' ಜತೆ ಮಾತನಾಡಿದ್ದಾರೆ.

ಸತತವಾಗಿ ವಿಶ್ವಕಪ್​, ಏಷ್ಯನ್​ ಗೇಮ್ಸ್​ನಂಥ ಎರಡು ಮಹತ್ವದ ಟೂರ್ನಿಗಳಲ್ಲಿ ಆಡುವ ಒತ್ತಡವಿಲ್ಲ. ಒಂದು ಸಮಯದಲ್ಲಿ ಒಂದೇ ಟೂರ್ನಿಯ ಬಗ್ಗೆ ಗಮನಹರಿಸುತ್ತೇವೆ. ಅದಾದ ಮೇಲೆ ಇನ್ನೊಂದು ಟೂರ್ನಿಗೆ ಸಜ್ಜುಗೊಳ್ಳುವುದಾಗಿ ಮೋಹಿತ್​ ತಿಳಿಸಿದರು.
ಪಥ ಬದಲಿಸಿದ ಪ್ರಶಸ್ತಿ
ಸಣ್ಣವನಿದ್ದಾಗ ಕ್ರಿಕೆಟ್​ಗೆ ಸೇರಿಸಲು ಹಠ ಮಾಡಿದೆ. ನಂತರ ಬೇಸಿಗೆ ಶಿಬಿರಕ್ಕೆ ಸೇರಿಸಿದರು. ನಂತರ ನನ್ನ ಕ್ರೀಡಾಸಕ್ತಿ ಗಮನಿಸಿದ ತಾತ ಕ್ರೀಡಾ ವಸತಿ ನಿಲಯದ ಆಯ್ಕೆ ಪ್ರಕ್ರಿಯೆಗೆ ಕರೆದುಕೊಂಡು ಹೋದರು. ನನ್ನ ಎತ್ತರ ಚೆನ್ನಾಗಿದ್ದರಿಂದ ವಾಲಿಬಾಲ್​ಗೆ ಅಲ್ಲಿ ಆಯ್ಕೆ ಮಾಡಿದರು. ನಂತರ ಹಾಸ್ಟೆಲ್​ ಹಾಕಿ ತಂಡ ಟೂರ್ನಿಯೊಂದಕ್ಕೆ ಸಿದ್ಧವಾಗುತ್ತಿರುವಾಗ ಗೋಲು ಕೀಪರ್​ ಕೊರತೆ ಕಾಡಿತು. ಆಗ, ತಾತ್ಕಾಲಿಕವಾಗಿ ಗೋಲು ಕೀಪರ್​ ಸ್ಥಾನ ತುಂಬಿದೆ. ನಂತರ 9ನೇ ತರಗತಿಯಲ್ಲಿದ್ದಾಗ ಫಾರ್ವರ್ಡ್​ ಆಟಗಾರನಾಗಿ ಗೋಲು ಗಳಿಸುವ ಆಸೆ ಹುಟ್ಟಿತು. ಆದರೆ ಅಲ್ಲಿನ ಕೋಚ್​ ನಿನ್ನನ್ನು ಗೋಲು ಕೀಪರ್​ ಆಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು. ನಂತರ 10ನೇ ತಗರತಿಯಲ್ಲಿ ಗೋಲು ಕೀಪರ್​ ಅಗಿ ಉತ್ತಮ ಯಶಸ್ಸು ದೊರೆಯಿತು. ರಾಜ್ಯಮಟ್ಟದಲ್ಲಿ ರನ್ನರ್​ ಅಪ್​ ಪ್ರಶಸ್ತಿ ಬಂತು. ಇನ್ನೊಂದು ಟೂರ್ನಿಯಲ್ಲಿ ಬೆಸ್ಟ್​ ಗೋಲು ಕೀಪರ್​ ಪ್ರಶಸ್ತಿ ಸಿಕ್ಕಿತು. ಆಗ ಫಾರ್ವರ್ಡ್​, ಡಿಫೆಂಡರ್​ ಪಾತ್ರಗಳಿಗಿಂತ ಗೋಲು ಕೀಪರ್​ನ ಪ್ರಾಮುಖ್ಯತೆ ಅರಿವಾಯಿತು. ಅಲ್ಲಿಂದ ಅದನ್ನು ಆನಂದಿಸಲು ಆರಂಭಿಸಿದೆ ಎಂದು ಆರಂಭಿಕ ದಿನಗಳನ್ನು ಮೋಹಿತ್​ ಮೆಲುಕು ಹಾಕಿದರು.
ಹೊಂದಾಣಿಕೆಗೆ ಸಮಯ ಹಿಡಿಯಿತು
ಜೂನಿಯರ್​ ಹಂತದಿಂದ ಸೀನಿಯರ್​ ತಂಡಕ್ಕೆ ಕಾಲಿಟ್ಟ ಆರಂಭದಲ್ಲಿ ಕಷ್ಟ ಎನಿಸಿತು. ರಾಷ್ಟ್ರೀಯ ತಂಡದಲ್ಲಿನ ಆಟಗಾರರ ಕೌಶಲ ಯೋಜನೆ, ಮಾನಸಿಕ ಸ್ಥೈರ್ಯ ಜತೆಗೆ ಹೊಂದಾಣಿಕೆಯಾಗಲು ಸಮಯ ಹಿಡಿಯಿತು. ಇತರ ಆಟಗಾರರ ಆಟ ಅವಲೋಕನದಿಂದ ನನ್ನ ಆಟವನ್ನು ಸುಧಾರಿಸಿಕೊಳ್ಳುತ್ತಿದ್ದೇನೆ ಎಂದ ಮೋಹಿತ್​, ಕರೋನಾ ಸಮಯದಲ್ಲಿ ಹಾಕಿಯನ್ನು ತ್ಯಜಿಸಲು ನಿರ್ಧರಿಸಿದ್ದಾಗಿಯೂ ತಿಳಿಸಿದರು. ಲಾಕ್​ಡೌನ್​ ಸಮಯದಲ್ಲಿ ಜೂನಿಯರ್​ ರಾಷ್ಟ್ರೀಯ ಟೂರ್ನಿ ರದ್ದುಗೊಂಡಿತು. ಆಗ, ಹಾಕಿಯನ್ನು ಬಿಟ್ಟು ಸಿಎ ಮಾಡುವುದಾಗಿ ಅಪ್ಪನಿಗೆ ತಿಳಿಸಿದಾಗ, ಅವರು ಕ್ರೀಡೆಯಲ್ಲಿ ಮುಂದುವರಿಯಲು ಸಲಹೆ ನೀಡಿದರು. ನಂತರ ರಾಜ್ಯ ತಂಡದಲ್ಲಿನ ಪ್ರದರ್ಶನ ಜೂನಿಯರ್​ ಭಾರತ ತಂಡದಲ್ಲಿ ಸ್ಥಾನ ಪಡೆಯಲು ನೆರವಾಯಿತು ಎಂಬ ತೃಪ್ತಿ ವ್ಯಕ್ತಪಡಿಸಿದರು. ಮೋಹಿತ್​ ಪ್ರಸ್ತುತ ಇನ್ವೆಸ್ಟ್​ಮೆಂಟ್​ ಬ್ಯಾಂಕಿಂಗ್​ನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಆಟಗಾರರ ಜತೆಗೆ ಆರಂಭಿಕ ದಿನಗಳಲ್ಲಿ ಕಮ್ಯುನಿಕೇಷನ್​ ಸ್ವಲ್ಪ ವೀಕ್​ ಇತ್ತು. ಪ್ರೊ ಲೀಗ್​ನಲ್ಲಿ ತುಂಬ ಚೆನ್ನಾಗಿ ಇದನ್ನು ಸುಧಾರಿಸಿಕೊಂಡಿದ್ದು, ಡಿಫೆಂಡರ್​ಗಳ ಜತೆಗೆ ಉತ್ತಮ ಹೊಂದಾಣಿಕೆ ಇದೆ. ಹಾಕಿ ಇಂಡಿಯಾ ಲೀಗ್​ನಿಂದಲೂ ಬಹಳಷ್ಟು ಕಲಿಯಲು ಸಿಕ್ಕಿದೆ. ಭಾರತೀಯರ ಜತೆಗೆ ವಿದೇಶಿ ತಾರೆಯರು, ಕೋಚ್​ಗಳು ಇರುವುದರಿಂದ ಆಟ ಆಡುವಾಗ ಹೊಸ ಆತ್ಮವಿಶ್ವಾಸ ತುಂಬುತ್ತದೆ. ಹಿರಿಯ ಆಟಗಾರರ ಜತೆಗಿನ ಸಂವಹನದಿಂದ ತುಂಬ ಸಹಾಯ ಆಗಿದೆ ಎಂದು ಹಾಕಿ ಇಂಡಿಯಾ ಲೀಗ್​ ಅನುಭವ ಹಂಚಿಕೊಂಡರು.
*ಈ ಬಾರಿಯ ತಂಡ ಅತ್ಯುತ್ತಮವಾಗಿದ್ದು, ಪ್ರೊ ಲೀಗ್​ನಲ್ಲಿ ವಿಶ್ವ ಚಾಂಪಿಯನ್​ ಜರ್ಮನಿ, ನೆದರ್ಲ್ಯಾಂಡ್ಸ್​ ಎದುರಿನ ಜಯ ಆತ್ಮವಿಶ್ವಾಸ ಹೆಚ್ಚಿಸಿದೆ. ಇದರಿಂದ ಪ್ರಶಸ್ತಿ ಜಯಿಸಲು ನಾವು ಸರಿಯಾದ ಮಾರ್ಗದಲ್ಲಿದ್ದೇವೆ ಎಂದೆನೆನಿಸಿದೆ. ವಿಶ್ವಕಪ್​ ಜಯಿಸುವುದು ವೈಯಕ್ತಿಕ ಗುರಿಯೂ ಆಗಿದೆ.
| ಮೋಹಿತ್​, ಭಾರತ ತಂಡದ ಗೋಲು ಕೀಪರ್​
2014ರ ನಂತರ ವಿಶ್ವಕಪ್​ ತಂಡದಲ್ಲಿ ಕನ್ನಡಿಗ
2023ರ ಜೂನಿಯರ್​ ವಿಶ್ವಕಪ್​ನಲ್ಲಿ 4ನೇ ಸ್ಥಾನಿ, 2022, 2023ರ ಸುಲ್ತಾನ್​ ಜೋಹರ್​ ಕಪ್​ನಲ್ಲಿ ಕ್ರಮವಾಗಿ ಚಿನ್ನ, ಕಂಚು ಹಾಗೂ 2023ರ ಜೂ.ಏಷ್ಯಾಕಪ್​ ಚಾಂಪಿಯನ್​ ತಂಡದ ಭಾಗವಾಗಿದ್ದ ಎಚ್​.ಎಸ್​. ಮೋಹಿತ್​, ಎಫ್​ಐಎಚ್​ ಪುರುಷರ ಹಾಕಿ ವಿಶ್ವಕಪ್​ನಲ್ಲಿ 12 ವರ್ಷಗಳ ನಂತರ ಆಡುತ್ತಿರುವ ಕರ್ನಾಟಕದ ಹಾಕಿ ತಾರೆ ಆಗಿದ್ದಾರೆ. ಭಾರತ ಹಾಕಿ ತಂಡಕ್ಕೆ ಹಲವು ದಿಗ್ಗಜ ಆಟಗಾರರನ್ನು ನೀಡಿರುವ ಕರ್ನಾಟಕದಿಂದ 2014ರ ವಿಶ್ವಕಪ್​ನಲ್ಲಿ ವಿ.ಆರ್​. ರುನಾಥ್​, ಎಸ್​.ವಿ.ಸುನೀಲ್​, ಎಸ್​ಕೆ ಉತ್ತಪ್ಪ ಕೊನೆಯದಾಗಿ ಆಡಿದ್ದರು. ನಂತರ 2018, 2023ರ ವಿಶ್ವಕಪ್​ನಲ್ಲಿ ಕರ್ನಾಟಕದ ಯಾವ ಆಟಗಾರರೂ ಭಾರತ ತಂಡ ಪ್ರತಿನಿಧಿಸಿರಲಿಲ್ಲ. ರಾಜ್ಯದ ಹಲವು ಹಿರಿಯ ಆಟಗಾರರ ಜತೆಗೆ ನಿರಂತರ ಸಂಪರ್ಕದಲ್ಲಿರುವ ಮೋಹಿತ್​, ಯಾವುದೇ ವಿಷಯಗಳಲ್ಲಿ ಸಂದೇಹವಿದ್ದಾಗ ಅವರ ಬಳಿ ಸಲಹೆ ಪಡೆಯುವುದಾಗಿ ತಿಳಿಸಿದರು.

ಪ್ರಮುಖ ಟೂರ್ನಿಯ ಒತ್ತಡವಿಲ್ಲ


ಪೆನಾಲ್ಟಿ ಹಾಗೂ ಶೂಟೌಟ್​ ಅಂಥ ಸನ್ನಿವೇಶದಲ್ಲಿ ಮಾನಸಿಕ ಸ್ಥಿತಿಯ ಬಗ್ಗೆ ಮಾತನಾಡಿದ ಮೋಹಿತ್​, ಪಂದ್ಯದ ಹಿಂದಿನ ದಿನ ಮಲಗುವ ಮುನ್ನ ಕೆಲ ಸನ್ನಿವೇಶಗಳನ್ನು ಊಹಿಸಿಕೊಳ್ಳುತ್ತೇನೆ. ಏಕೆಂದರೆ, ಯಾವುದೇ ಅನಪೇತ ಸನ್ನಿವೇಶ ಎದುರಾದಾಗ ನನಗೆ ಶಾಕ್​ ಆಗಬಾರದು. ಹೆಚ್ಚು ಚಿಂತಿಸದಂತೆ ನನಗೆ ನಾನೇ ಹೇಳಿಕೊಂಡು ಮಾನಸಿಕವಾಗಿ ಸಜ್ಜಾಗುತ್ತೇನೆ. ಇದರಿಂದ ಪೆನಾಲ್ಟಿ ಶೂಟೌಟ್​ ನಂಥ ಸನ್ನಿವೇಶ ಎದುರಿಸಲು ಸುಲಭವಾಗುತ್ತದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net