ಸುಲ್ತಾನ್​ ಅಜ್ಲಾನ್​ ಷಾ ಕಪ್​ ಹಾಕಿ: ಫೈನಲ್​ಗೇರಿದ ಭಾರತ

ಸುಲ್ತಾನ್​ ಅಜ್ಲಾನ್​ ಷಾ ಕಪ್​ ಹಾಕಿ: ಫೈನಲ್​ಗೇರಿದ ಭಾರತ
ಸುಲ್ತಾನ್​ ಅಜ್ಲಾನ್​ ಷಾ ಕಪ್​ ಹಾಕಿ: ಫೈನಲ್​ಗೇರಿದ ಭಾರತ
Published on
ಇಪೋಹ್​ (ಮಲೇಷ್ಯಾ): ಜುಗ್ರಾಜ್​ ಸಿಂಗ್​ (12, 26, 39, 50ನೇ ನಿಮಿಷ) ಸಿಡಿಸಿದ 4 ಗೋಲುಗಳ ಬಲದಿಂದ ಭಾರತ ತಂಡ 31ನೇ ಸುಲ್ತಾನ್​ ಅಜ್ಲಾನ್​ ಷಾ ಕಪ್ (Sultan Azlan Shah Cup)​ ಪುರುಷರ ಹಾಕಿ ಟೂರ್ನಿಯಲ್ಲಿ ತನ್ನ 5ನೇ ಹಾಗೂ ಅಂತಿಮ ಲೀಗ್​ ಪಂದ್ಯದಲ್ಲಿ ಕೆನಡಾ ವಿರುದ್ಧ ಗೋಲುಗಳ ಸುರಿಮಳೆ ಹರಿಸುವ ಮೂಲಕ 14-3 ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಭಾರತ ತಂಡ ಟೂರ್ನಿಯ ಫೈನಲ್​ಗೆ ಲಗ್ಗೆಯಿಟ್ಟಿದೆ. ಭಾನುವಾರ ನಡೆಯಲಿರುವ ಪ್ರಶಸ್ತಿ ಕಾದಾಟದಲ್ಲಿ ಭಾರತ&ಬೆಲ್ಜಿಯಂ ತಂಡಗಳು ಮುಖಾಮುಖಿ ಆಗಲಿವೆ.
ಶನಿವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಭಾರತ ತಂಡ ಮೊದಲಾರ್ಧದಲ್ಲಿ 7-1ರಿಂದ ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲಿ ಭಾರತ ಮತ್ತೆ 7 ಗೋಲುಗಳನ್ನು ಸಿಡಿಸಿತು. ರಾಜಿಂದರ್​ ಸಿಂಗ್​ (10, 24), ಅಮಿತ್​ ರೋಹಿದಾಸ್​ (15, 46) ಮತ್ತು ಅಭಿಷೇಕ್​ (58, 59) ತಲಾ ಎರಡು ಗೋಲು ಬಾರಿಸಿದರೆ, ನೀಲಕಂಠ ಶರ್ಮ (4), ದಿಲ್​ಪ್ರೀತ್​ ಸಿಂಗ್​ (25), ಕಾರ್ತಿ ಸೆಲ್ವಂ (43) ಮತ್ತು ನಾಯಕ ಸಂಜಯ್​ (56) ತಲಾ ಒಂದು ಗೋಲು ಬಾರಿಸಿದರು.

ಲೀಗ್​ ಹಂತದಲ್ಲಿ ಆಡಿದ 5 ಪಂದ್ಯಗಳಲ್ಲಿ 4 ಗೆಲುವು ಸಾಧಿಸಿದ ಭಾರತ (12 ಅಂಕ), ಒಂದು ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ದ್ವೀತಿಯ ಸ್ಥಾನ ಗಳಿಸಿತು. ಬೆಲ್ಜಿಯಂ (5 ಪಂದ್ಯ, 4 ಜಯ, 1 ಡ್ರಾ, 13 ಅಂಕ) ಅಗ್ರಸ್ಥಾನದೊಂದಿಗೆ ಅಜೇಯವಾಗಿ ಫೈನಲ್​ಗೇರಿತು.
ಟೂರ್ನಿಯಲ್ಲಿ 9ನೇ ಬಾರಿ ಫೈನಲ್​ಗೇರಿರುವ ಭಾರತ ತಂಡ 6ನೇ ಬಾರಿ ಪ್ರಶಸ್ತಿ ಜಯಿಸುವ ಸನಿಹದಲ್ಲಿದೆ. ಲೀಗ್​ ಹಂತದಲ್ಲಿ ಬೆಲ್ಜಿಯಂ ಎದುರು ಪರಾಭವಗೊಂಡಿದ್ದ ಭಾರತ ತಂಡ ಫೈನಲ್​ನಲ್ಲಿ ಸೇಡು ತೀರಿಸಿಕೊಳ್ಳಬೇಕಿದೆ.
*ಭಾನುವಾರ ಫೈನಲ್​
ಭಾರತ-ಬೆಲ್ಜಿಯಂ
ಆರಂಭ: ಸಂಜೆ 6.00
ನೇರಪ್ರಸಾರ: ಫ್ಯಾನ್​ಕೋಡ್​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net